ದಕ್ಷಿಣಕಾಶಿ ಎಂದೇ ಕರೆಯಲ್ಪಡುವ ಮೈಸೂರಿನ ನಂಜನಗೂಡಿನಲ್ಲಿ ಪಂಚ ಮಹಾರಥೋತ್ಸವದ ಸಂಭ್ರಮ ಮನೆ ಮಾಡಿದ್ದು, ಈ ಕ್ಷಣಕ್ಕಾಗಿ ವರ್ಷದಿಂದ ಹಾತೊರೆಯುತ್ತಿದ್ದ ಭಕ್ತರು ಕ್ಷೇತ್ರದತ್ತ ದೌಡಾಯಿಸುತ್ತಿದ್ದಾರೆ. ಪಂಚ ಮಹಾರಥೋತ್ಸವದಲ್ಲಿ ಸಾಕ್ಷಿಯಾಗಿ ನಂಜುಂಡೇಶ್ವರನ ಕೃಪೆಗೆ ಪಾತ್ರರಾಗುವ ತವಕ ಭಕ್ತರಲ್ಲಿ ಕಾಣಿಸುತ್ತಿದೆ. ಅಷ್ಟೇ ಅಲ್ಲದೆ ರಥಕ್ಕೆ ಹಣ್ಣು ದವನ ಎಸೆದು ಸಂತೃಪ್ತಿಯಾಗುವ ಬಯಕೆಯಲ್ಲಿ ಕಾಯುತ್ತಿದ್ದಾರೆ.

ರಥೋತ್ಸವ ಎಲ್ಲೆಡೆ ನಡೆಯುತ್ತದೆ. ಆದರೆ ನಂಜನಗೂಡಿನಲ್ಲಿ ನಡೆಯುವ ಪಂಚಮಹಾರಥೋತ್ಸವ ವಿಭಿನ್ನ, ವಿಶಿಷ್ಟ ಮತ್ತು ವೈಶಿಷ್ಟ್ಯ ಪೂರ್ಣವಾಗಿರುತ್ತದೆ. ಈ ರಥೋತ್ಸವವನ್ನು ಕಣ್ತುಂಬಿಕೊಳ್ಳುವುದೇ ಒಂದು ಭಾಗ್ಯ. ಹೀಗಾಗಿಯೇ ಈ ಕ್ಷಣಗಳನ್ನು ತಪ್ಪಿಸಿಕೊಳ್ಳಬಾರದೆಂದು ಭಕ್ತರು ಜಿಲ್ಲೆ, ರಾಜ್ಯ ಮಾತ್ರವಲ್ಲದೆ ಹೊರ ರಾಜ್ಯಗಳಿಂದಲೂ ನಂಜನಗೂಡಿಗೆ ಬರುತ್ತಿದ್ದು, ಶ್ರೀ ಗಣಪತಿ, ಶ್ರೀಕಂಠೇಶ್ವರ, ಪಾರ್ವತಿ, ಸುಬ್ರಹ್ಮಣ್ಯ, ಚಂಡಿಕೇಶ್ವರ ಹಾಗೂ ಗೌತಮರ ದರ್ಶನ ಮಾಡಿಕೊಂಡು ಪಾವನರಾಗುತ್ತಾರೆ.
ನಂಜನಗೂಡಿನಲ್ಲಿ ನಡೆಯುವ ಪಂಚಮಹಾರಥೋತ್ಸವವನ್ನು ಬೇರೆಲ್ಲೂ ನೋಡಲು ಸಾಧ್ಯವಿಲ್ಲ. ಇಲ್ಲಿ ಪ್ರತಿವರ್ಷವೂ ಮೀನ ಮಾಸದಲ್ಲಿ ಉತ್ತರ ನಕ್ಷತ್ರದ ದಿನದಂದು ಪಂಚಮಹಾರಥೋತ್ಸವ ನಡೆಯುತ್ತದೆ. ಪ್ರಸಕ್ತ ವರ್ಷ ಏಪ್ರಿಲ್ 9ರಂದು ನಡೆಯಲಿದೆ. ಗಣಪತಿ, ಶ್ರೀಕಂಠೇಶ್ವರ, ಪಾರ್ವತಿ, ಸುಬ್ರಹ್ಮಣ್ಯ, ಚಂಡಿಕೇಶ್ವರ ಹಾಗೂ ಗೌತಮ ರಥಗಳು ಸೇರಿ ಪಂಚಮಹಾರಥೋತ್ಸವ ಆಗಿದೆ. ಈ ರಥಗಳು ದೇವಾಲಯದಿಂದ ರಾಜ ಬೀದಿಯಲ್ಲಿ ಸಾಗುತ್ತಿದ್ದರೆ ಕಿಕ್ಕಿರಿದು ಇಕ್ಕೆಲಗಳಲ್ಲಿ ನೆರೆದ ಭಕ್ತರ ಜಯಘೋಷ ಮುಗಿಲು ಮುಟ್ಟುತ್ತದೆ. ಪಂಚರಥೋತ್ಸವದ ಸಂದರ್ಭ ಗಣಪತಿ, ಶ್ರೀಕಂಠೇಶ್ವರ, ಪಾರ್ವತಿ, ಸುಬ್ರಹ್ಮಣ್ಯ, ಚಂಡಿಕೇಶ್ವರ ಹಾಗೂ ಗೌತಮ ರಥಗಳನ್ನು ಎಳೆಯಲಾಗುವುದು. ಈ ಐದು ರಥಗಳ ಪೈಕಿ ಗೌತಮ ರಥ ಮುಖ್ಯವಾಗಿದ್ದು, ಪಂಚ ರಥೋತ್ಸವದ ಪ್ರಮುಖ ಆಕರ್ಷಣೆಯಾಗಿದೆ. ಈ ರಥವು ಸುಮಾರು 205 ಟನ್ ತೂಕ, 90ಅಡಿ ಎತ್ತರವನ್ನು ಹೊಂದಿದೆ. ವಿವಿಧ ಬಣ್ಣದ ಬಟ್ಟೆಗಳನ್ನು ಸುತ್ತಿ, ಹೂವಿನಿಂದ ಅಲಂಕರಿಸಲಾಗುವ ರಥದ ತುದಿಯಲ್ಲಿ ಧ್ವಜವನ್ನು ಕಟ್ಟಲಾಗುತ್ತದೆ. ಬಳಿಕ ನವರತ್ನ ಹಾಗೂ ಹೂವಿನಿಂದ ಕಂಗೊಳಿಸುವ ಶ್ರೀಕಂಠಸ್ವಾಮಿಯ ವಿಗ್ರಹವನ್ನು ರಥದಲ್ಲಿ ಪ್ರತಿಷ್ಠಾಪಿಸಿ ಮುಂಜಾನೆ ದೇವಾಲಯದ ಪ್ರಧಾನ ಅರ್ಚಕರ ನೇತೃತ್ವದಲ್ಲಿ ವಿಧಿವಿಧಾನದಂತೆ ಪೂಜಾ ಕೈಂಕರ್ಯಗಳನ್ನು ನೆರವೇರಿಸಲಾಗುತ್ತದೆ. ಆ ನಂತರ ರಥಕ್ಕೆ ಮಹಾಮಂಗಳಾರತಿಯನ್ನು ಮಾಡುವ ಮೂಲಕ ರಥಕ್ಕೆ ಚಾಲನೆ ನೀಡಲಾಗುತ್ತದೆ.
ರಥೋತ್ಸವದ ಈ ಭವ್ಯ ಕ್ಷಣಕ್ಕಾಗಿ ಕಾತರದಿಂದ ಕಾಯುತ್ತಿದ್ದ ಭಕ್ತರು ಜೈ ಶ್ರೀಕಂಠ, ಜೈ ನಂಜುಂಡ ಎಂದು ಮುಗಿಲು ಮುಟ್ಟುವಂತೆ ಘೋಷಣೆಗಳನ್ನು ಕೂಗುತ್ತಾ ರಥಕ್ಕೆ ಎರಡು ಕಡೆಯಲ್ಲಿ ಕಟ್ಟಿದ್ದ ಹಗ್ಗವನ್ನು ಎಳೆಯುತ್ತಾರೆ. ರಥ ಮುಂದೆ ಚಲಿಸುತ್ತಿದ್ದಂತೆಯೇ ಭಾವಪರವಶಗೊಂಡ ಭಕ್ತರು ರಥದ ಮೇಲೆ ದವನ ಬಾಳೆಹಣ್ಣುಗಳನ್ನು ಎಸೆದು ತಮ್ಮ ಹರಕೆಯನ್ನು ಶ್ರೀಕಂಠನಿಗೆ ಅರ್ಪಿಸುತ್ತಾರೆ. ರಥವು ಜನಸಾಗರದೊಂದಿಗೆ ಚಲಿಸಿ ರಾಜಗೋಪುರಕ್ಕೆ ನೇರವಾಗಿ ಬಂದು ನಿಂತಾಗ ಕಂಡು ಬರುವ ದೃಶ್ಯ ಮನಮೋಹಕವಾಗಿರುತ್ತದೆ. ಪಂಚ ರಥಗಳನ್ನು ನೋಡುವುದೇ ಪರಮಾನಂದ ನೂತನವಾಗಿ
ವಿವಾಹವಾದ ನವದಂಪತಿಗಳು ರಥೋತ್ಸವದಲ್ಲಿ ಪಾಲ್ಗೊಂಡು ಹಣ್ಣು-ದವನ ಎಸೆಯುವ ಮೂಲಕ ತಮ್ಮ ಹರಕೆಯನ್ನು ಒಪ್ಪಿಸುವುದು ಹಿಂದಿನಿಂದಲೂ ನಡೆದು ಬಂದ ಸಂಪ್ರದಾಯವಾಗಿದೆ. ರಥಗಳು ಭಕ್ತಸಾಗರದೊಂದಿಗೆ ರಥಬೀದಿಯಲ್ಲಿ ಸಾಗುತ್ತಿದ್ದರೆ ಆ ಸುಂದರ ದೃಶ್ಯವನ್ನು ನೋಡಲು ಎರಡು ಕಣ್ಣುಗಳೇ ಸಾಲದು ಎಂಬಂತೆ ಭಾಸವಾಗುತ್ತದೆ.
ಸಹಸ್ರಾರು ವರ್ಷಗಳಿಂದ ನಡೆದುಕೊಂಡು ಬರುತ್ತಿರುವ ಪಂಚಮಹಾರಥೋತ್ಸವಕ್ಕೆ ಇಡೀ ನಂಜನಗೂಡು ಪಟ್ಟಣವೇ ತಳಿರು ತೋರಣಗಳಿಂದ ಅಲಂಕಾರಗೊಂಡು ನವವಧುವಿನಂತೆ ಕಂಗೊಳಿಸಿದರೆ, ಮನೆಮನೆಗಳಲ್ಲಿ ಹಬ್ಬದ ವಾತಾವರಣ ನೆಲೆಸುತ್ತದೆ. ದೂರದ ಊರಿನಲ್ಲಿ ನೆಲೆಸಿರುವವರು ತಪ್ಪದೆ ತಮ್ಮ ಊರಿಗೆ ಬಂದು ರಥೋತ್ಸವದಲ್ಲಿ ಪಾಲ್ಗೊಳ್ಳುತ್ತಾರೆ. ಬಹಳ ಹಿಂದಿನ ಕಾಲದ ರಥಗಳಾಗಿರುವುದರಿಂದ ಅವುಗಳ ಚಕ್ರಗಳು ಶಿಥಿಲಗೊಂಡಿತ್ತು. ಆದರೆ ಕೆಲವು ವರ್ಷಗಳ ಹಿಂದೆ ಸುಮಾರು 35ಲಕ್ಷ ರೂ. ವೆಚ್ಚದಲ್ಲಿ ನಾಲ್ಕು ರಥಗಳನ್ನು ಗೊಬ್ಬಳಿ ಮರ ಬಳಸಿ ದುರಸ್ತಿ ಮಾಡಲಾಗಿದೆ. ಕನ್ಯಾಕುಮಾರಿಯ ರಾಮಸ್ವಾಮಿ ಆಚಾರ್ ನೇತೃತ್ವದ 12 ಮಂದಿಯ ತಂಡ ದುರಸ್ತಿ ಕಾರ್ಯನಡೆಸಿದ್ದನ್ನು ನಾವು ಸ್ಮರಿಸಿಕೊಳ್ಳಬಹುದು. ಮೈಸೂರಿನಿಂದ ಸುಮಾರು 25ಕಿ.ಮೀ ದೂರದಲ್ಲಿರುವ ನಂಜನಗೂಡಿಗೆ ಮೈಸೂರಿನಿಂದ ವಿಶೇಷ ಬಸ್ಗಳ ವ್ಯವಸ್ಥೆಯಿದ್ದು ಭಕ್ತರು ಸದುಪಯೋಗಪಡಿಸಿ ಕೊಳ್ಳಬಹುದಾಗಿದೆ.