ಪರಶುರಾಮ ಮೂರ್ತಿ ವಿವಾದ: ತನಿಖೆ ರಾಜಕೀಯ ಪ್ರೇರಿತ

ಪರಶುರಾಮ ಮೂರ್ತಿ ವಿವಾದ: ತನಿಖೆ ರಾಜಕೀಯ ಪ್ರೇರಿತ

ಉಡುಪಿ: ‘ಕಾರ್ಕಳದ ಬೈಲೂರಿನ ಉಮಿಕ್ಕಲ್ ಬೆಟ್ಟದ ಪರಶುರಾಮ ಥೀಮ್ ಪಾರ್ಕ್ನಲ್ಲಿ ನಿರ್ಮಾಣವಾಗಿರುವ ಪರಶುರಾಮ ಮೂರ್ತಿಯ ಕುರಿತು ನಡೆಯುತ್ತಿರುವ ತನಿಖೆ ರಾಜಕೀಯ ಪ್ರೇರಿತ’ ಎಂದು ಕಾರ್ಕಳ ಶಾಸಕ ವಿ. ಸುನಿಲ್ ಕುಮಾರ್ ಆರೋಪಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಬುಧವಾರ ಮಾತನಾಡಿದ ಅವರು, ‘ಸರ್ಕಾರದ ಯೋಜನೆಯೊಂದನ್ನು ಪೂರ್ಣಗೊಳಿಸಿ, ಜಿಲ್ಲಾಡಳಿತ ಅಥವಾ ಸಂಬಂಧಪಟ್ಟ ಇಲಾಖೆಗೆ ಹಸ್ತಾಂತರಿಸುವ ಮೊದಲೇ ತನಿಖೆಗೆ ಒಳಪಡಿಸಿರುವ ಮೊದಲ ಪ್ರಕರಣ ಇದಾಗಿದೆ’ ಎಂದರು.

‘ಕಾಮಗಾರಿ ಸಮರ್ಪಕವಾಗಿಲ್ಲ ಎಂದಾದರೆ ಸಂಬಂಧಪಟ್ಟ ಇಲಾಖೆ, ಗುತ್ತಿಗೆದಾರರ ಮೇಲೆ ಕ್ರಮ ಕೈಗೊಳ್ಳಬೇಕು. ಇಲ್ಲಿ ಯಾವ ಇಲಾಖೆಯೂ ದೂರು ಕೊಟ್ಟಿಲ್ಲ. ಕಾಂಗ್ರೆಸ್ ಮುಖಂಡ ಕೊಟ್ಟಿರುವ ದೂರಿನ ಅಧಾರದಲ್ಲಿ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ. ವ್ಯಕ್ತಿಯೊಬ್ಬರು ಕೊಟ್ಟಿರುವ ದೂರಿನ ಆಧಾರದಲ್ಲಿ ಎಫ್ಐಆರ್ ದಾಖಲಿಸುವ ಹೊಸ ಪರಂಪರೆಯನ್ನು ಪೊಲೀಸ್ ಇಲಾಖೆ ಹುಟ್ಟುಹಾಕಿದೆ. ನಾಳೆ ರಸ್ತೆ, ಶಾಲಾ ಕಟ್ಟಡದ ಕಾಮಗಾರಿ ಸರಿ ಇಲ್ಲ ಎಂದು ಯಾರಾದರೂ ದೂರು ನೀಡಿದರೆ ಎಫ್ಐಆರ್ ದಾಖಲಿಸುತ್ತಿರಾ’ ಎಂದು ಸುನಿಲ್ ಪ್ರಶ್ನಿಸಿದರು.

ಪರಶುರಾಮ ಮೂರ್ತಿಯನ್ನು ಮರು ವಿನ್ಯಾಸ ಮಾಡಬೇಕೆಂದು ಶಿಲ್ಪಿ ಕೋರಿಕೆ ಸಲ್ಲಿಸಿದಾಗ ಜಿಲ್ಲಾಧಿಕಾರಿಯೇ ಅದಕ್ಕೆ ಅನುಮತಿ ನೀಡಿದ್ದಾರೆ. ಮರು ವಿನ್ಯಾಸಕ್ಕಾಗಿ ಮೂರ್ತಿಯ ಅರ್ಧ ಭಾಗವನ್ನು ಒಯ್ದ ಬಳಿಕ ಮೂರ್ತಿ ಕಳವಾಗಿದೆ ಎಂದು ಅಪಪ್ರಚಾರ ಮಾಡಲಾಗಿದೆ. ಮೂರ್ತಿಯ ಮರು ವಿನ್ಯಾಸ ನಡೆಯುವಾಗ ಭದ್ರತೆ ನೀಡಬೇಕೆಂದು ತಹಶೀಲ್ದಾರರೇ ಪೊಲೀಸ್ ಇಲಾಖೆಯನ್ನು ಕೋರಿದ್ದರು. ಅಂದು ಮೂರ್ತಿಯ ಅರ್ಧ ಭಾಗ ತೆಗೆಯಲು ರಕ್ಷಣೆ ನೀಡಿದವರೇ ಇವತ್ತು ತನಿಖೆ ನಡೆಸುತ್ತಿರುವುದು ವಿಪರ್ಯಾಸ’ ಎಂದರು.

ಅಜೆಕಾರಿನಲ್ಲಿ ಈಚೆಗೆ ನಡೆದ ಕೊಲೆ ಪ್ರಕರಣದ ಆರೋಪಿಯನ್ನು ಪೊಲೀಸರು ಮೂರು ದಿನ ಕಸ್ಟಡಿಗೆ ಪಡೆದಿದ್ದರು, ಆದರೆ ಅಮಾಯಕ ಶಿಲ್ಪಿ ಕೃಷ್ಣ ನಾಯ್ಕ ಅವರನ್ನು ಏಳು ದಿನ ಕಸ್ಟಡಿಗೆ ಪಡೆದಿದ್ದಾರೆ ಎಂದರು.

Leave a Reply

Your email address will not be published. Required fields are marked *