ಮೈಸೂರು: ಚನ್ನಪಟ್ಟಣ ಉಪಚುನಾವಣೆಯ ಪ್ರಚಾರದ ಕಾವು ಜೋರಾಗಿದ್ದು, ಜೆಡಿಎಸ್ ರಾಜ್ಯಾಧ್ಯಕ್ಷ ಹಾಗೂ ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ಅವರು ಪುತ್ರ ನಿಖಿಲ್ ಕುಮಾರಸ್ವಾಮಿ ಜಯಭೇರಿಗಾಗಿ ಭಾರೀ ಕಸರತ್ತು ನಡೆಸುತ್ತಿದ್ದಾರೆ.
ಪುತ್ರ ನಿಖಿಲ್ ಕುಮಾರಸ್ವಾಮಿಯ ಯಶಸ್ಸಿಗೆ ಪ್ರಾರ್ಥಿಸಿ ಕುಮಾರಸ್ವಾಮಿಯವರು ಟೆಂಪಲ್ ರನ್ ಆರಂಭಿಸಿದ್ದಾರೆ. ಕುಮಾರಸ್ವಾಮಿ ಭಾನುವಾರ ಚಾಮುಂಡಿ ಬೆಟ್ಟ, ಉತ್ತನಹಳ್ಳಿ ಮಾರಮ್ಮ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಜೆಎಸ್‌ಎಸ್ ಪೀಠಾಧಿಪತಿ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಅವರನ್ನು ಭೇಟಿ ಮಾಡಿದರು.
ಮಂಡ್ಯ ಲೋಕಸಭೆ ಹಾಗೂ ರಾಮನಗರ ವಿಧಾನಸಭಾ ಚುನಾವಣೆಯಲ್ಲಿ ಈ ಹಿಂದೆ ಎರಡು ಬಾರಿ ಸೋಲಿನ ರುಚಿ ಕಂಡಿದ್ದ ನಿಖಿಲ್ ಕುಮಾರಸ್ವಾಮಿ ಅವರು, ಈ ಬಾರಿ ಕಾಂಗ್ರೆಸ್ ಟಿಕೆಟ್‌ನಲ್ಲಿ ಸ್ಪರ್ಧಿಸಿರುವ ಹಿರಿಯ ನಾಯಕ ಸಿಪಿ ಯೋಗೇಶ್ವರ್ ವಿರುದ್ಧ ಪೈಪೋಟಿಗಿಳಿದಿದ್ದಾರೆ.
ಉಪಚುನಾವಣೆ ಫಲಿತಾಂಶ ಮುಖ್ಯಮಂತ್ರಿ ಕುರ್ಚಿಗೆ ಅಪಾಯ ಎದುರು ಮಾಡುವುದಿಲ್ಲ. ಆದರೆ ಸರ್ಕಾರದ ಬಗ್ಗೆ ಅಸಮಾಧಾನಗೊಂಡಿರುವ ಜನರು ಅವರ ವಿರುದ್ಧ ಮತ ಹಾಕಲಿದ್ದಾರೆಂದು ಜೆಡಿಎಸ್ ಹೇಳಿದೆ.
ಪಕ್ಷದ ಹಿತದೃಷ್ಟಿಯಿಂದ ನಿಖಿಲ್ ಸ್ಪರ್ಧಿಸಲು ಬಯಸಿದ್ದಾರೆ. ಹೀಗಾಗಿ ನಿಖಿಲ್ ಗೆಲುವಿಗಾಗಿ ಪೀಠಾಧಿಪತಿಗಳು ಆಶೀರ್ವಾದ ಮಾಡುತ್ತಾರೆ ಎಂಬ ವಿಶ್ವಾಸ ನನಗಿದೆ. ಎಂದು ಚಾಮುಂಡಿ ದೇವಸ್ಥಾನಕ್ಕೆ ಭೇಟಿ ನೀಡಿದ ನಂತರ ಕುಮಾರಸ್ವಾಮಿ ಅವರು ಹೇಳಿದರು.