ಬೆಂಗಳೂರು; ರಾಜ್ಯ ಸರ್ಕಾರದ 7 ನೇ ವೇತನ ಆಯೋಗದ ವರದಿಯಂತೆ ನಿವೃತ್ತ ಸರ್ಕಾರಿ ನೌಕರರಿಗೆ ಪಿಂಚಣಿಯಲ್ಲಿ ತಾರತಮ್ಯ ಸರಿಪಡಿಸುವುದು ಸೇರಿದಂತೆ ನಿವೃತ್ತ ನೌಕರರ ಬೇಡಿಕೆಗಳನ್ನು ಆದ್ಯತೆ ಮೇರೆಗೆ ರಾಜ್ಯ ಸರ್ಕಾರ ಬಗೆಹರಿಸಬೇಕು ಎಂದು ಲೋಕಾಯುಕ್ತ ನಿವೃತ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ಒತ್ತಾಯಿಸಿದ್ದಾರೆ.
ನಗರದ ಫ್ರೀಡಂ ಪಾರ್ಕ್ ನಲ್ಲಿ ಕರ್ನಾಟಕ ರಾಜ್ಯ ನಿವೃತ್ತ ನೌಕರರ ವೇದಿಕೆಯ ಬೃಹತ್ ಸಮಾವೇಶಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ತಮ್ಮ ಸೇವಾವಧಿಯಲ್ಲಿ ಸರ್ಕಾರದ ಕೆಲಸವನ್ನು ಉತ್ತಮವಾಗಿ ನಿರ್ವಹಣೆ ಮಾಡಿ ನಿವೃತ್ತರಾದವರ ಬೇಡಿಕೆಗಳನ್ನು ಈಡೇರಿಸುವುದು ಆಡಳಿತ ಸರ್ಕಾರಗಳ ಜವಾಬ್ದಾರಿಯಾಗಿದೆ. ನಿವೃತ್ತರಾದವರಲ್ಲಿ ಶೇ 40 ಶಿಕ್ಷಕರು, ಶೇ 12 ಆರೋಗ್ಯ ಇಲಾಖಾ ನೌಕರರು, ಶೇ. 10 ಆರಕ್ಷಕ ಸಿಬ್ಬಂದಿ, ಉಳಿದ ಶೇಕಡಾ 38 ಭಾಗ ರಾಜ್ಯ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ. ಪ್ರತಿಬಾರಿ ವೇತನ ಆಯೋಗಗಳ ಪರಿಷ್ಕರಣೆ ಸಂದರ್ಭದಲ್ಲಿ ನಿವೃತ್ತರಿಗೆ ಅನ್ಯಾವಾಗುತ್ತಿದೆ ಎಂದರು.
6 ನೇ ವೇತನ ಆಯೋಗದ ಸಂದರ್ಭದಲ್ಲಿಯೂ ಇದೇ ರೀತಿ ತಾರತಮ್ಯವಾಗಿತ್ತು. 7 ನೇ ವೇತನ ಆಯೋಗದ ಆದೇಶವನ್ನು ಪರಿಶೀಲಿಸಿ ಪರಿಷ್ಕೃತ ಆದೇಶ ಹೊರಡಿಸಿ ಆರ್ಥಿಕ ಸೌಲಭ್ಯ ನೀಡಬೇಕೆಂಬ ಹಕ್ಕೊತ್ತಾಯಕ್ಕೆ ತಮ್ಮ ಬೆಂಬಲವಿದೆ ಎಂದು ಹೇಳಿದರು. ಕರ್ನಾಟಕ ರಾಜ್ಯ ನಿವೃತ್ತ ನೌಕರರ ವೇದಿಕೆ ರಾಜ್ಯ ಸಂಚಾಲಕ ಅಶೋಕ ಎಂ. ಸಜ್ಜನ, ರಾಜ್ಯ ಮಹಾಪ್ರಧಾನ ಸಂಚಾಲಕ ಎಂ.ಪಿ.ಎಂ. ಷಣ್ಮುಖಯ್ಯ ಮತ್ತಿತರರು ಉಪಸ್ಥಿತರಿದ್ದರು.