ಬೆಂಗಳೂರು: ಸ್ನಾತಕೋತ್ತರ ವೈದ್ಯಕೀಯ ಕೋರ್ಸ್ನ ಎರಡನೇ ಸುತ್ತಿನ ಸೀಟು ಹಂಚಿಕೆಯಲ್ಲಿ ಭಾಗವಹಿಸಲು ಇಚ್ಛಿಸುವ ಅರ್ಹರಿಗೆ ಅವರ ಶ್ರೇಣಿಯ ಆಧಾರದ ಮೇಲೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ (ಕೆಇಎ) ಕಚೇರಿಯಲ್ಲಿ ಮೂಲ ದಾಖಲೆ ಸಲ್ಲಿಸಲು ಡಿಸೆಂಬರ್ 6ರಿಂದ 17 ರವರೆಗೆ ಅವಕಾಶ ಕಲ್ಪಿಸಲಾಗಿದೆ.
ಮೊದಲ ಸುತ್ತಿನಲ್ಲಿ ಸೀಟು ಹಂಚಿಕೆಯಾಗಿ ಚಾಯ್ಸ್-2 ಆಯ್ಕೆ ಮಾಡಿ ಶುಲ್ಕ ಪಾವತಿಸಿರುವವರು ಹಾಗೂ ಯಾವುದೇ ಸೀಟು ಹಂಚಿಕೆಯಾಗದೇ ಇರುವವರು ಮೂಲ ದಾಖಲೆಗಳನ್ನು ಸಲ್ಲಿಸುವುದು ಕಡ್ಡಾಯ ಎಂದು ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಹೆಚ್.ಪ್ರಸನ್ನ ತಿಳಿಸಿದ್ದಾರೆ.
ಚಾಯ್ಸ್-2 ಮತ್ತು 3 ಅನ್ನು ಆಯ್ಕೆ ಮಾಡಿಕೊಂಡವರು ಡಿಸೆಂಬರ್ 6, 7 ಮತ್ತು 9ರಂದು ದಾಖಲೆ ಸಲ್ಲಿಸಬೇಕು. ಸೀಟು ಹಂಚಿಕೆಯಾಗದವರು ಡಿಸೆಂಬರ್ 10ರಿಂದ 17ರವರಗೆ ದಾಖಲೆ ಸಲ್ಲಿಸಬೇಕು. ನಿಗದಿತ ದಿನಾಂಕಗಳಂದು ಮೂಲ ದಾಖಲೆ ಸಲ್ಲಿಸದಿದ್ದರೆ, 2ನೇ ಸುತ್ತಿನ ಸೀಟು ಹಂಚಿಕೆಗೆ ಅಂತಹವರನ್ನು ಪರಿಗಣಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಎಂಬಿಎ, ಎಂಸಿಎ, ಎಂ.ಟೆಕ್, ಎಂ.ಆರ್ಕಿಟೆಕ್ಚರ್ ಕೋರ್ಸ್ಗಳ ಎರಡನೇ ಸುತ್ತಿನಲ್ಲಿ ಸೀಟು ಹಂಚಿಕೆಯಾದವರಿಗೆ ಶುಲ್ಕ ಪಾವತಿಸಲು ಡಿಸೆಂಬರ್ 6ರವರೆಗೆ ದಿನಾಂಕ ವಿಸ್ತರಿಸಲಾಗಿದೆ. ಪ್ರವೇಶ ಪತ್ರ ಡೌನ್ಲೋಡ್ ಮಾಡಿಕೊಂಡು ಕಾಲೇಜಿಗೆ ವರದಿ ಮಾಡಿಕೊಳ್ಳಲು ಡಿಸೆಂಬರ್ 7 ಕೊನೆ ದಿನವಾಗಿದೆ. ಇದರ ನಂತರ ಯಾವುದೇ ಕಾರಣಕ್ಕೂ ವಿಸ್ತರಣೆ ಮಾಡುವುದಿಲ್ಲ ಎಂದಿದ್ದಾರೆ.
ಪಿಜಿ ಆಯುಷ್ ಕೋರ್ಸ್ಗಳ ಮಾಪ್ ಅಪ್ ಸುತ್ತಿನ ಸೀಟು ಹಂಚಿಕೆಗೆ ಡಿಸೆಂಬರ್ 5ರ ಬೆಳಿಗ್ಗೆ 9ರವರೆಗೆ ಇಚ್ಛೆಗಳನ್ನು ದಾಖಲಿಸಲು ಮತ್ತೊಮ್ಮೆ ಪೋರ್ಟಲ್ ತೆರೆಯಲಾಗಿದೆ. ಅದೇ ದಿನ ಸಂಜೆ 4ರ ನಂತರ ಈ ಸುತ್ತಿನ ತಾತ್ಕಾಲಿಕ ಸೀಟು ಹಂಚಿಕೆಯ ಫಲಿತಾಂಶ ಪ್ರಕಟಿಸಲಾಗುತ್ತದೆ ಎಂದು ಪ್ರಸನ್ನ ವಿವರಿಸಿದ್ದಾರೆ.