ಬೊಂಬೆನಗರಿ ‌ಚನ್ನಪಟ್ಟಣದಲ್ಲಿ‌ ಗಣೇಶ ಹಬ್ಬಕ್ಕೆ ಪಾಲಿಟಿಕ್ಸ್.

ಬೊಂಬೆನಗರಿ ‌ಚನ್ನಪಟ್ಟಣದಲ್ಲಿ‌ ಗಣೇಶ ಹಬ್ಬಕ್ಕೆ ಪಾಲಿಟಿಕ್ಸ್.

ರಾಮನಗರ: ಗಣೇಶ ಹಬ್ಬಕ್ಕೆ  ದಿನಗಣನೆ ಶುರುವಾಗಿದೆ. ಗಣಪನ ಮೂರ್ತಿಯನ್ನ ತಂದು ಸಾಕಷ್ಟು ಶ್ರದ್ದಾಭಕ್ತಿಯಿಂದ ಪೂಜಿಸಲು ಜನರು ಕಾತರರಾಗಿದ್ದಾರೆ. ಈ ಮಧ್ಯೆ ಬೊಂಬೆನಗರಿ ‌ಚನ್ನಪಟ್ಟಣದಲ್ಲಿ‌ ಗಣೇಶ ಹಬ್ಬಕ್ಕೆ ಪಾಲಿಟಿಕ್ಸ್ ಆರಂಭಗೊಂಡಿದೆ.‌ ರಾಜಕೀಯ ಮುಖಂಡರಿಂದ ಉಚಿತ ಗಣೇಶ ಮೂರ್ತಿಗಳ ವಿತರಣೆ ಮಾಡಲಾಗುತ್ತಿದೆ. ಇದರಿಂದಾಗಿ ಇತ್ತ ಗಣೇಶನ ಮೂರ್ತಿ ಮಾರಾಟ ಮಾಡುವ ವ್ಯಾಪಾರಸ್ಥರು ಸಂಕಷ್ಟಕ್ಕೆ ಸಿಲುಕುವಂತಾಗಿದೆ.

ಪಬ್ಲಿಸಿಟಿಗೆ ಮುಂದಾದ ರಾಜಕೀಯ ನಾಯಕರು

ಸಂಕಷ್ಟಹರ ಲಂಬೋದರನ ಹಬ್ಬ ಬಂದೆ ಬಿಡ್ತು. ಗೌರಿ ಗಣೇಶನ ಹಬ್ಬ ಅಂದರೆ ಸಂಭ್ರಮ ಮನೆ ಮಾಡಿರುತ್ತದೆ. ಪ್ರತಿ ಹಳ್ಳಿ, ಗಲ್ಲಿ ಗಲ್ಲಿಗಳಲ್ಲಿ, ಮನೆ ಮನೆಗಳಲ್ಲಿ ಗಣೇಶನ‌ ಮೂರ್ತಿಯನ್ನ ಕೂರಿಸಿ ಸಾಕಷ್ಟು ಶ್ರದ್ದಾ ಭಕ್ತಿಯಿಂದ ಪೂಜೆಯನ್ನ ನೆರವೇರಿಸಲಾಗುತ್ತದೆ. ಈ ಮಧ್ಯೆ ಬೊಂಬೆನಗರಿ ಚನ್ನಪಟ್ಟಣದಲ್ಲಿ ಗಣೇಶನ ಪಾಲಿಟಿಕ್ಸ್ ಕೂಡ ಆರಂಭಗೊಂಡಿದೆ. ಉಚಿತವಾಗಿ ಗಣೇಶನ ಮೂರ್ತಿಗಳನ್ನ ನೀಡುವ ಮೂಲಕ ಮತದಾರರನ್ನ ಸೆಳೆಯಲು ಮತ್ತು ತಮ್ಮ ಪಬ್ಲಿಸಿಟಿಗಾಗಿ ರಾಜಕೀಯ ನಾಯಕರು ಮುಂದಾಗಿದ್ದಾರೆ.

ಅಂದಹಾಗೆ ಬೆಂಗಳೂರು ದಕ್ಷಿಣ ಜಿಲ್ಲೆಯ ಚನ್ನಪಟ್ಟಣದಲ್ಲಿ ಶಾಸಕ ಸಿಪಿ ಯೋಗೇಶ್ವರ್ ಮತ್ತು ಜೆಡಿಎಸ್ ತಾಲೂಕು ಘಟಕದ ಅಧ್ಯಕ್ಷ ಹೆಚ್ ಸಿ ಜಯಮುತ್ತು ಉಚಿತವಾಗಿ ಗಣೇಶನ ಮೂರ್ತಿಗಳನ್ನ ವಿತರಣೆ ಮಾಡುತ್ತಿದ್ದಾರೆ. ತಾಲೂಕಿನ ಯಾವುದೇ ಗ್ರಾಮ, ನಗರ ಪ್ರದೇಶದ ಯುವಕರು ಬಂದು ಹೆಸರು ನೋಂದಾಯಿಸಿಕೊಂಡರೆ ಗಣೇಶ ಮೂರ್ತಿಯನ್ನ ಉಚಿಯವಾಗಿ‌ ನೀಡುತ್ತಿದ್ದಾರೆ. ಆದರೆ ರಾಜಕಾರಣಿಗಳ ಈ ಆಟಕ್ಕೆ ಹಬ್ಬದ ಸಮಯದಲ್ಲಿ ಗಣೇಶನ‌ ಮೂರ್ತಿಗಳನ್ನ ಮಾರಾಟ ಮಾಡುವ ವ್ಯಾಪಾರಸ್ಥರು ಸಂಕಷ್ಟಕ್ಕೆ ಸಿಲುಕಿದ್ದಾರೆ.

ವ್ಯಾಪಾರಸ್ಥರಿಗೆ ಸಂಕಷ್ಟ 

ಕಾಂಗ್ರೆಸ್ ಶಾಸಕ ಯೋಗೇಶ್ವರ್ ಹಾಗೂ ಜೆಡಿಎಸ್ ಮುಖಂಡ ಜಯಮುತ್ತು ಉಚಿತವಾಗಿ ಗಣೇಶನ ಮೂರ್ತಿಗಳನ್ನ ನೀಡುತ್ತಿರುವುದರಿಂದ ಗಣೇಶನ ಮೂರ್ತಿ ವ್ಯಾಪಾರಸ್ಥರ ಬಳಿ ಯಾರೊಬ್ಬ ಜನರು ಕೂಡ ಬರುತ್ತಿಲ್ಲ. ಈಗಾಗಲೇ ಎರಡು ಮೂರು ತಿಂಗಳ ಹಿಂದೆ ಹಣವನ್ನ ನೀಡಿ ಗಣೇಶನ ಮೂರ್ತಿಗಳನ್ನ ಬುಕ್ ಮಾಡಿದ್ದ ಜನರು ಕೂಡ ಹಣವನ್ನ ವಾಪಾಸ್ ಕೇಳುವುದರ ಜೊತೆಗೆ ಮೂರ್ತಿ ಖರೀದಿಸುತ್ತಿಲ್ಲ. ಹೀಗಾಗಿ ಲಕ್ಷಾಂತರ ರೂ ಬಂಡವಾಳ ಹಾಕಿ ಗಣೇಶ ಮೂರ್ತಿಗಳನ್ನ ತಯಾರಿಸಿ ಬೇರೆಡೆಯಿಂದ ತರಿಸಿಕೊಂಡು ಗಣೇಶನ ಮೂರ್ತಿಗಳನ್ನ ಮಾರಾಟ ಮಾಡಲು ಮುಂದಾಗಿದ್ದ ವ್ಯಾಪಾರಸ್ಥರಿಗೆ ಸಾಕಷ್ಟು ಸಂಕಷ್ಟ ಎದುರಾಗಿದೆ.

ಎರಡೂ-ಮೂರು ತಿಂಗಳ ಮುಂಚೆಯೇ ಗಣೇಶ ಮೂರ್ತಿಗಳನ್ನ ಉಚಿತವಾಗಿ ಕೊಡುವುದಾಗಿ ಹೇಳಿದ್ದರೆ, ನಾವು ಗಣೇಶನ ಮೂರ್ತಿಗಳನ್ನ ತರಿಸುತ್ತಿರಲಿಲ್ಲ. ಕೊನೆ ಗಳಿಗೆಯಲ್ಲಿ ಉಚಿತವಾಗಿ ನೀಡುವ ಮೂಲಕ ನಮ್ಮ ಹೊಟ್ಟೆ ಮೇಲೆ ರಾಜಕಾರಣಿಗಳು ಹೊಡೆಯುತ್ತಿದ್ದಾರೆ ಎಂದು ವ್ಯಾಪಾರಸ್ಥರಾದ ವಿನಯ್​ ಎಂಬುವವರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಒಟ್ಟಾರೆ ರಾಜಕಾರಣಿಗಳ ಈ ಉಚಿತ ಗಣೇಶನ ಮೂರ್ತಿ ನೀಡುವ ಪಾಲಿಟಿಕ್ಸ್​ನಿಂದಾಗಿ ಗಣೇಶನ ಮೂರ್ತಿ ವ್ಯಾಪಾರಸ್ಥರು ಸಂಕಷ್ಟಕ್ಕೆ ಸಿಲುಕಿದ್ದು, ಜನಪ್ರತಿನಿಧಿಗಳಿಗೆ ಹಿಡಿಶಾಪ ಹಾಕುತ್ತಿದ್ದಾರೆ.

For More Updates Join our WhatsApp Group :

https://chat.whatsapp.com/JVoHqE476Wn3pVh1gWNAcH

Leave a Reply

Your email address will not be published. Required fields are marked *