ಬೆಳಗಾವಿ: ಸುರ್ವಣ ಸೌಧದಲ್ಲಿ ಡಿಸೆಂಬರ್ 8 ರಿಂದ 10 ದಿನಗಳ ಕಾಲ ರಾಜ್ಯ ವಿಧಾನಮಂಡಲದ ಚಳಿಗಾಲದ ಅಧಿವೇಶನ ನಡೆಸಲು ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿದೆ. ಈ ಹಿನ್ನಲೆ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ನೇತೃತ್ವದಲ್ಲಿ ಬೆಳಗಾವಿಯ ಸುವರ್ಣ ಸೌಧದಲ್ಲಿ ಅಧಿಕಾರಿಗಳ ಸಭೆ ನಡೆಸಲಾಗಿದ್ದು, ಅಧಿವೇಶನಕ್ಕೆ ಅಗತ್ಯ ಸಿದ್ಧತೆಗಳ ಬಗ್ಗೆ ಚರ್ಚೆ ನಡೆಸಲಾಗಿದೆ.
ಭದ್ರತೆಗಾಗಿ 6 ಸಾವಿರ ಪೊಲೀಸರು
ಡಿಸಿ ನೇತೃತ್ವದಲ್ಲಿ ನಡೆದ ಸಭೆಯಲ್ಲಿ, ನಗರ ಪೊಲೀಸ್ ಆಯುಕ್ತ ಭೂಷಣ್ ಬೊರಸೆ, ಎಸ್ಪಿ ಭೀಮಾಶಂಕರ್ ಗುಳೇದ್ ಒಳಗೊಂಡು ಸೇರಿ ಇತರ ಪ್ರಮುಖ ಅಧಿಕಾರಿಗಳು ಭಾಗಿಯಾಗಿದ್ದರು. ಊಟದ ಸಮಿತಿ, ವಸತಿ ಸಮಿತಿ, ಬಂದೋಬಸ್ತ್ ಸಮಿತಿ, ದೂರುಗಳ ಸ್ವೀಕಾರ ಸಮಿತಿ ಸೇರಿದಂತೆ ಆರು ಸಮಿತಿಗಳನ್ನ ಈ ವೇಳೆ ರಚನೆ ಮಾಡಿ ಅದರ ನೇತೃತ್ವವನ್ನು ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ನೀಡಲಾಗಿದೆ. ನಗರದಲ್ಲಿನ ಖಾಸಗಿ ಹೋಟೆಲ್ಗಳನ್ನ ಕಂಟ್ರೋಲ್ಗೆ ತೆಗೆದುಕೊಳ್ಳಲು ಜಿಲ್ಲಾಡಳಿತ ಮುಂದಾಗಿದ್ದು, ಅಧಿವೇಶನದ ಸಮಯದಲ್ಲಿ ನೆಟ್ವರ್ಕ್ ಸಮಸ್ಯೆ ಆಗಬಾರದು ಎಂಬ ನಿಟ್ಟಿನಲ್ಲಿ ಕೂಡ ವ್ಯವಸ್ಥೆ ಮಾಡಲಾಗುತ್ತಿದೆ. ಅಧಿವೇಶನದ ವೇಳೆ ಬಂದೋಬಸ್ತ್ಗಾಗಿ ಈ ಬಾರಿ 6 ಸಾವಿರ ಪೊಲೀಸರನ್ನು ನಿಯೋಜನೆ ಮಾಡಲಾಗುತ್ತಿದ್ದು, ಪ್ರತಿಭಟನೆ ನಡೆಸುವವರಿಗೆ ಪೊಲೀಸ್ ಕಮಿಷನರ್ ಅನುಮತಿ ಕಡ್ಡಾಯ ಮಾಡಲಾಗಿದೆ. ಕಳೆದ ಬಾರಿಯಂತೆ ಈ ಬಾರಿ ಗದ್ದಲ-ಗಲಾಟೆ ಆಗದಂತೆ ಮುಂಜಾಗ್ರತೆ ಕ್ರಮಕ್ಕೆ ಜಿಲ್ಲಾಡಳಿತ ಮುಂದಾಗಿದೆ.
ಧಗಧಗಿಸುತ್ತಾ ರೈತರ ರೋಷಾಗ್ನಿ?
ಮತ್ತೊಂದೆಡೆ ಉತ್ತರ ಕರ್ನಾಟಕ ಭಾಗದಲ್ಲಿ ಕಬ್ಬು ಬೆಳೆಗಾರರ ಕಿಚ್ಚು ಧಗಧಗಿಸುತ್ತಿದ್ದು, ಸರ್ಕಾರದ ಮಧ್ಯ ಪ್ರವೇಶದ ಬಳಿಕವೂ ಹೋರಾಟ ನಿಂತಿಲ್ಲ. ಈ ಬೆಳವಣಿಗೆಯ ನಡುವೆಯೇ ಬೆಳಗಾವಿಯಲ್ಲಿ ಚಳಿಗಾಲ ಅಧಿವೇಶನಕ್ಕೆ ತಯಾರಿ ಶುರುವಾಗಿದೆ. ಕುಂದಾನಗರಿಯಲ್ಲಿ ನಡೆಯುವ ಅಧಿವೇಶನ ಬರಿ ಹೋರಾಟಗಳಿಗೆ ಸೀಮಿತ ಎನ್ನುವ ಆರೋಪದ ನಡುವೆ, ರೈತರು ಸರ್ಕಾರಕ್ಕೆ ಬಿಸಿ ಮುಟ್ಟಿಸುವ ಎಲ್ಲ ಲಕ್ಷಣಗಳೂ ಗೋಚರಿಸುತ್ತಿವೆ. ಸಕ್ಕರೆ ಕಾರ್ಖಾನೆಗಳ ಮಾಲಕರ ಮನವೊಲಿಸಿರುವ ಸರ್ಕಾರ, ಟನ್ ಕಬ್ಬಿಗೆ 3300 ರೂ. ನಿಗದಿಪಡಿಸಿತ್ತು.
For More Updates Join our WhatsApp Group :
