ಬೆಂಗಳೂರು: “ಮೆಣಸಿನ ರಾಣಿ” ಎಂದೇ ಪ್ರಸಿದ್ಧಳಾದ ರಾಣಿ ಚೆನ್ನಭೈರಾದೇವಿ ಅವರ ಸ್ಮರಣಾರ್ಥವಾಗಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಗುರುವಾರ ಅಂಚೆ ಚೀಟಿ ಬಿಡುಗಡೆ ಮಾಡಿದರು. ರಾಷ್ಟ್ರಪತಿ ಭವನದಲ್ಲಿ ರಾಣಿ ಚೆನ್ನಭೈರಾದೇವಿ ಅಂಚೆ ಚೀಟಿ ಬಿಡುಗಡೆ ಮಾಡಲಾಗಿದೆ. ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಮತ್ತು ರಾಜ್ಯಸಭಾ ಸದಸ್ಯ ಡಾ. ವೀರೇಂದ್ರ ಹೆಗ್ಗಡೆ ಕೂಡ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

ಚೆನ್ನಭೈರಾದೇವಿಯ ಸಾಧನೆ ವಜ್ರದ ಅಕ್ಷರಗಳಲ್ಲಿ ಕೆತ್ತಬೇಕು: ದ್ರೌಪದಿ ಮುರ್ಮು
ರಾಣಿ ಚೆನ್ನಭೈರಾದೇವಿ ಅಂಚೆ ಚೀಟಿ ಬಿಡುಗಡೆ ಬಳಿಕ ಮಾತನಾಡಿದ ರಾಷ್ಟ್ರಪತಿ ದ್ರೌಪದಿ ಮುರ್ಮು, ರಾಣಿ ಚೆನ್ನಭೈರಾದೇವಿಯ ಧೈರ್ಯ, ಸ್ಥೈರ್ಯ ಮತ್ತು ಸಾಧನೆಯನ್ನು ನಾವು ಸುವರ್ಣಾಕ್ಷರಗಳಲ್ಲಿ ಮಾತ್ರವಲ್ಲ, ವಜ್ರದ ಅಕ್ಷರಗಳಲ್ಲಿ ಕೆತ್ತಬೇಕು. ಇದೊಂದು ಅವಿಸ್ಮರಣೀಯ ಘಟನೆ. ನಿಜವೇ ಎಂದು ಮೈ ಚಿವುಟಿ ನೋಡಿಕೊಳ್ಳಬೇಕಾದ ಸಂಗತಿ. ಏಕೆಂದರೆ ನನ್ನಂಥವರಿಗೆ ರಾಷ್ಟ್ರಪತಿ ಭವನವನ್ನು ಪ್ರವೇಶಿಸುವ ಅವಕಾಶವೇ ದೊಡ್ಡದು. ಇನ್ನು ಅವರನ್ನು ಸಮೀಪದಲ್ಲಿ ಕಾಣುವ ಭಾಗ್ಯ ಮತ್ತಷ್ಟು ಹಿರಿದಾದುದು ಎಂದಿದ್ದಾರೆ.
ಬೇರೆ ಮಹಾರಾಣಿಯೂ ಆಳದಷ್ಟು ಸುದೀರ್ಘ ಐವತ್ನಾಲ್ಕು ವರ್ಷಗಳಷ್ಟು ಕಾಲ ರಾಜ್ಯವಾಳಿದ್ದಳೋ, ಯಾವ ಮಹಾರಾಣಿ ಇಡಿಯ ಯುರೋಪಿನ ಕಾಳುಮೆಣಸು, ದಾಲ್ಚಿನ್ನಿ, ಭತ್ತ, ಶುಂಠಿ ವ್ಯವಹಾರಗಳನ್ನು ಸಂಪೂರ್ಣ ಹಿಡಿತದಲ್ಲಿ ಇಟ್ಟುಕೊಂಡಿದ್ದಳೋ, ಯಾವ ರಾಣಿ ಪೂರ್ಚುಗೀಸರು ದಕ್ಷಿಣ ಕೊಂಕಣಕ್ಕೆ ಕಾಲಿಟ್ಟು ರಾಜಕೀಯ ಮತ್ತು ಮತೀಯ ಅತಿರೇಕಗಳನ್ನು ಎಸಗದಂತೆ ಅವರನ್ನು ಕಾಳಿ ನದಿಯಾಚೆಯ ತೀರದಲ್ಲೇ ತಡೆದು ನಿಲ್ಲಿಸಿದ್ದಳೋ, ಯಾವ ರಾಣಿ ಸ್ವತಃ ಯಾರ ಮೇಲೂ ತಾನಾಗಿ ಯುದ್ದ ಸಾರದಿದ್ದರೂ ತಾವಾಗಿ ಮೇಲೆ ಬಿದ್ದ ಯಾರನ್ನೂ ಬಗ್ಗು ಬಡಿಯದೆ ಬಿಟ್ಟಿರಲಿಲ್ಲವೋ, ಯಾವ ಮಹಾರಾಣಿ ಸರ್ವಸಮನ್ವಯತೆಯಿಂದ ಎಲ್ಲರನ್ನೂ ಒಳಗೊಂಡು ಆಡಳಿತ ನಡೆಸಿ, ನಾಡಿನ ಸರ್ವೋದಯಕ್ಕೆ ಕಾರಣಳಾಗಿದ್ದಳೋ, ಯಾವ ರಾಣಿ ತನ್ನ ವ್ಯಾಪಾರ, ವ್ಯವಹಾರ ಮತ್ತು ಆಡಳಿತ ಕೌಶಲ್ಯಗಳಿಂದ ರಾಜ್ಯವನ್ನು ಸಮೃದ್ಧವಾಗಿ, ಶ್ರೀಮಂತವಾಗಿ ಸುರಕ್ಷಿತವಾಗಿ ಕಟ್ಟಿದ್ದಳೋ ಆ ಮಹಾರಾಣಿಯ ಘನತೆಗೆ ತಕ್ಕ ಗೌರವ ನೀಡಿದ ಕಾರ್ಯಕ್ರಮವಾಗಿದೆ ಎಂದರು.
ದೌರ್ಭಾಗ್ಯವೆಂದರೆ ವಿದೇಶೀಯರಿಂದ ಇಂತಹ ಶ್ಲಾಘನೆ ಪಡೆದ ರಾಣಿ ಚೆನ್ನಭೈರಾದೇವಿ ಅದೇಕೋ ನಮ್ಮ ಇತಿಹಾಸದ ಮುಖ್ಯ ವಾಹಿನಿಯ ಪುಟಗಳನ್ನು ಅಲಂಕರಿಸಲೇ ಇಲ್ಲ. ಅವಳನ್ನು ನಾವು ಬದಿಗಿಟ್ಟೆವು. ಯಾವ ಪೋರ್ಚುಗೀಸರೊಂದಿಗೆ ಆಕೆ ಘೋರ ಸಂಗ್ರಾಮಕ್ಕೆ ಇಳಿದಿದ್ದಳೋ ಆ ಪೋರ್ಚುಗೀಸರೇ ಆಕೆಗೆ ರೈನಾ ದಿ ಪೆಮೆಂಟಾ ಅರ್ಥಾತ್ “ಕಾಳುಮೆಣಸಿನ ರಾಣಿ” ಎಂಬ ಬಿರುದನ್ನಿತ್ತು ಗೌರವಿಸಿದ್ದರು ಎಂದು ಹೇಳಿದರು.