ಬೆಂಗಳೂರು: ಅನೇಕ ಮಂದಿ ಹೆಣ್ಣು ಮಕ್ಕಳು ನಮಗೆ ಟಿಕೆಟ್ ತೆಗೆದುಕೊಳ್ಳುವ ಶಕ್ತಿಯಿದೆ. ಉಚಿತ ಪ್ರಯಾಣ ಬೇಡ ಎಂದು ಟ್ವೀಟ್ ಹಾಗೂ ಇ-ಮೇಲ್ ಮೂಲಕ ವಿಚಾರ ತಿಳಿಸುತ್ತಿದ್ದಾರೆ. ಈ ಬಗ್ಗೆ ನಾವು ಚರ್ಚೆ ಮಾಡುತ್ತೇವೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಹೇಳಿದರು
ವಿಧಾನಸೌಧದ ಮುಂಭಾಗ ಬುಧವಾರ ಐರಾವತ ಕ್ಲಬ್ ಕ್ಲಾಸ್ 2.0 ನೂತನ ಬಸ್ಸುಗಳ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಬುಧವಾರ ಮಾತನಾಡಿದ ಅವರು, ನಾವು ಹಣ ಕೊಡಲು ಮುಂದಾದರೂ, ಕಂಡಕ್ಟರ್ ಅವರು ಹಣ ತೆಗೆದುಕೊಳ್ಳುತ್ತಿಲ್ಲ ಎಂದು ಅನುಕೂಲ ಸ್ಥಿತಿಯಲ್ಲಿರುವ ಶೇ 5 ರಿಂದ 10 ರಷ್ಟು ಹೆಣ್ಣು ಮಕ್ಕಳು ಹೇಳುತ್ತಿದ್ದಾರೆ. ಶೀಘ್ರದಲ್ಲಿ ಇದರ ಬಗ್ಗೆ ನಾನು ರಾಮಲಿಂಗಾರೆಡ್ಡಿ ಅವರ ಜತೆ ಪ್ರತ್ಯೇಕವಾಗಿ ಸಭೆ ನಡೆಸಿ ಚರ್ಚೆ ನಡೆಸುತ್ತೇವೆ ಎಂದರು. ರಾಷ್ಟ್ರೀಯ ಮಟ್ಟದಲ್ಲಿ ನಮ್ಮ ಕೆ ಎಸ್ ಆರ್ ಟಿ ಸಿ ಸಂಸ್ಥೆ ಹೆಸರು ಮಾಡಿದೆ. ಕಳೆದ ಒಂದು ವರ್ಷದಲ್ಲಿ 112 ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಪ್ರಶಸ್ತಿಗಳನ್ನು ಪಡೆದುಕೊಂಡಿದೆ. ಈ ಸಾಧನೆಗೆ ಸಂಸ್ಥೆಯ ನೌಕರರ ಶ್ರಮ ಕಾರಣ ಎಂದರು. ಐರಾವತ ಎಂದರೆ ಇಂದ್ರನ ವಾಹನ, ಆನೆ ಎಂದು ಅರ್ಥ. ಆನೆಯಂತೆ ಬಲಶಾಲಿ ಎಂದು ಅರ್ಥ. ವೋಲ್ವೋ ಸಂಸ್ಥೆಯ ಈ ಬಸ್ಸಿಗೆ 1.60 ಕೋಟಿ ಎಂದು ಸಂಸ್ಥೆಯವರು ಹೇಳಿದ್ದಾರೆ. ಇತ್ತೀಚಿಗೆ ನಾವು ಒಂದು ಕಾರು ತೆಗೆದುಕೊಳ್ಳಬೇಕು ಎಂದರೆ ಒಂದು ಕೋಟಿ ಮೀರುತ್ತದೆ ಎಂದರು.
ಕೆಎಸ್ಆರ್ ಟಿಸಿ ಪ್ರಾರಂಭವಾದಾಗ ಕೇವಲ 120 ಬಸ್ ಗಳು ಇದ್ದವು, ಇಂದು 24,282 ಬಸ್ ಗಳು ಇವೆ. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ನಂತರ 6,200 ಬಸ್ ಗಳ ಖರೀದಿಗೆ ಮುಂದಾಗಿದೆ. ಇದರಲ್ಲಿ 3,400 ಬಸ್ ಗಳನ್ನು ಖರೀದಿ ಮಾಡಲಾಗಿದೆ. ಸುಮಾರು 9 ಸಾವಿರ ಡ್ರೈವರ್ ಹಾಗೂ ಕಂಡಕ್ಟರ್ ಗಳ ನೇಮಕಾತಿಗೆ ಚಾಲನೆ ನೀಡಲಾಗಿದೆ ಎಂದರು. ಅನುಕಂಪದ ಆಧಾರದ ಮೇಲೆ ಒಂದು ಸಾವಿರಕ್ಕೂ ಹೆಚ್ಚು ನೌಕರರ ಕುಟುಂಬಸ್ಥರಿಗೆ ಉದ್ಯೋಗ ನೀಡಲಾಗಿದೆ. ಅಪಘಾತದಲ್ಲಿ ಸಾವನ್ನಪ್ಪಿದ ನೌಕರರ ಕುಟುಂಬದವರಿಗೆ ಒಂದು ಕೋಟಿ ರೂ. ಪರಿಹಾರ ನೀಡಲಾಗಿದೆ. ಇಡೀ ಭಾರತದಲ್ಲಿಯೇ ಇಲ್ಲದ ಅತ್ಯುತ್ತಮವಾದ ವ್ಯವಸ್ಥೆ ನಮ್ಮಲ್ಲಿದೆ ಎಂದರು.