ಬೆಂಗಳೂರು: ನಗರದಲ್ಲಿ ನಾಗರಿಕರಿಗೆ ಸುರಕ್ಷತೆ ಮತ್ತು ನಡೆಯಲು ಅನುಕೂಲಕರವಾಗುವಂತೆ ಏಕರೂಪದ ರಸ್ತೆ ಅಗಲವನ್ನು ಕಾಯ್ದುಕೊಳ್ಳುವ ಮೂಲಕ ಪಾದಚಾರಿ ಮಾರ್ಗದ ಅಗಲಕ್ಕೆ ಆದ್ಯತೆ ನೀಡುವಂತೆ ಮುಖ್ಯ ಆಯುಕ್ತರಾದ ಮಹೇಶ್ವರ್ ರಾವ್ ರವರು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಬಿಬಿಎಂಪಿ ವ್ಯಾಪ್ತಿಯಲ್ಲಿ ನಾಗರಿಕರಿಗೆ ಸುರಕ್ಷಿತ ಮತ್ತು ನಡೆಯಲು ಯೋಗ್ಯವಾದ ಪಾದಚಾರಿ ಮಾರ್ಗಗಳನ್ನು ನಿರ್ಮಿಸುವ ಸಲುವಾಗಿ, ಇಂದು ದಕ್ಷಿಣ ವಲಯ ವ್ಯಾಪ್ತಿಯಲ್ಲಿ ಲಾಲ್ ಬಾಗ್ ಸುತ್ತಮುತ್ತಲಿನ ಪಾದಚಾರಿ ಮಾರ್ಗಗಳನ್ನು ಪರಿಶೀಲನೆ ನಡೆಸುವ ವೇಳೆ ಅವರು ಮಾತನಾಡಿದರು.
ಲಾಲ್ ಬಾಗ್ ಪೂರ್ವ ದ್ವಾರದಿಂದ ಪರಿಶೀಲನೆ ಪ್ರಾರಂಭಿಸಿ, ಹಾಪ್ ಕಾಮ್ಸ್ ಇರುವ ಜಾಗದಲ್ಲಿ ಪಾದಚಾರಿ ಮಾರ್ಗದಲ್ಲಿರುವ ಗೋಡೆ ಹಾಗೂ ಒತ್ತುವರಿಯಾಗಿರುವುದನ್ನು ಗುರತಿಸಿ ಅದನ್ನು ತೆರವುಗೊಳಿಸಿ ಪಾದಚಾರಿ ಮಾರ್ಗ ಸರಿಪಡಿಸಲು ಸೂಚಿಸಿದರು. ಇದೇ ಸ್ಥಳದಲ್ಲಿರುವ ಬಸ್ ತಂಗುದಾಣ ಬಳಿ ಸ್ವಚ್ಛತೆ ಕಾಪಾಡಲು ತಿಳಿಸಿದರು.
ಅಲಂಕಾರಂ ಹಾಗೂ ಹೋಂಡಾ ಕಟ್ಟಡದ ಮುಂಭಾಗ ಪಾದಚಾರಿ ಒತ್ತುವರಿಯಾಗಿದೆಯೇ ಎಂಬುದನ್ನು ಪರಿಶೀಲಿಸಿ ತೆರವು ಕಾರ್ಯ ಮಾಡಬೇಕು ಹಾಗೂ 3 ವಿದ್ಯುತ್ ಕಂಬಗಳು ಪಾದಚಾರಿ ಮಾರ್ಗದಲ್ಲಿಯೇ ಇದ್ದು, ಅದನ್ನು ಬೆಸ್ಕಾಂ ಅಧಿಕಾರಿಗಳಿಂದ ತೆರವುಗೊಳಿಸಲು ಸೂಚಿಸಿದರು.
ಪಾದಚಾರಿ ಮಾರ್ಗದಲ್ಲಿ ಟ್ರಾನ್ಸ್ ಫಾರ್ಮ್ ಅಳವಡಿಸಿದ ಕಾರಣ ನಾಗರಿಕರು ಓಡಾಡದ ರೀತಿಯಲ್ಲಿದ್ದು , ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಮಾತನಾಡಿ ಸರಿಪಡಿಸಬೇಕು. ಸೈಡ್ ಡ್ರೈನ್ ಗಳಿಗೆ ನೀರು ಹೋಗುವ ಗ್ರೇಟಿಂಗ್ಸ್ ಗಳ ಬಳಿ ಸ್ವಚ್ಛತೆ ಕಾಪಾಡಿ ರಸ್ತೆಯಲ್ಲಿ ಬೀಳುವ ನೀರು ಸರಾಗವಾಗಿ ಚರಂಡಿಗಳಿಗೆ ಹೋಗುವ ವ್ಯವಸ್ಥೆ ಮಾಡಲು ಸೂಚಿಸಿದರು.
ಸಿದ್ದಾಪುರ ವೃತ್ತ ಕೊಳಚೆ ಪ್ರದೇಶದಲ್ಲಿ ಶೌಚಾಲಯಗಳಿದ್ದು, ಅವುಗಳನ್ನು ಸರಿಯಾಗಿ ನಿರ್ವಹಿಸುತ್ತಿಲ್ಲ. ಅದನ್ನು ಸರಿಯಾಗಿ ನಿರ್ವಹಣೆ ಮಾಡಲು ತಿಳಿಸಿದರು. ಬಸ್ ತಂಗುದಾಣದ ಬಳಿ ಸ್ವಚ್ಛತೆ ಕಾಪಾಡುವ ನಿಟ್ಟಿನಲ್ಲಿ ಬಿನ್ಸ್ ಗಳನ್ನು ಅಳವಡಿಸಲು ಕ್ರಮವಹಿಸಲು ಸೂಚಿಸಿದರು.
ಪಾದಚಾರಿ ಮಾರ್ಗಗಳಲ್ಲಿ ಹಾಳಾಗಿರುವ ಸ್ಲ್ಯಾಬ್ ಹಾಗೂ ಕರ್ಬ್ಸ್ ಗಳನ್ನು ಕೂಡಲೆ ದುರಸ್ತಿ ಪಡಿಸಬೇಕು. ಪಾದಚಾರಿ ಮಾರ್ಗದಲ್ಲಿ ಸಸಿಗಳನ್ನು ನೆಟ್ಟು ಪೋಷಣೆ ಮಾಡಬೇಕು. ನೆಟ್ಟಿರುವ ಸಸಿಗಳು ಹಾಳಾಗದಂತೆ ಸುತ್ತಲೂ ಗ್ರಿಲ್ ಅಳವಡಿಸಲು ಅರಣ್ಯ ವಿಭಾಗದ ಅಧಿಕಾರಿಗಳಿಗೆ ಜವಾಬ್ದಾರಿ ನೀಡಲು ಸೂಚಿಸಿದರು.
ಕಟ್ಟಡ ಮಾಲೀಕರಿಗೆ ನೋಟೀಸ್ ನೀಡಿ:
ಅಶೋಕ ಪಿಲ್ಲರ್ ಜಂಕ್ಷನ್ ಬಳಿ ಪಾದಚಾರಿ ಮಾರ್ಗದಲ್ಲಿ ಅನಾಥ ಆಟೋವಿದ್ದು, ಅದನ್ನು ತೆರವುಗೊಳಿಸಲು ಸೂಚನೆ ನೀಡಿದರು. ಆ ಬಳಿಕ ಶಿವಳ್ಳಿ ಹೋಟೆಲ್ ಬಳಿ ಕಟ್ಟಡವೊಂದಕ್ಕೆ ಟ್ರಾನ್ಸ್ ಫಾರ್ಮ್ ಗೆ ಸಂಪರ್ಕ ಕಲ್ಪಿಸಿದ್ದು, ಅದರಿಂದ ಪಾದಚಾರಿ ಮಾರ್ಗವು ಸಂಪೂರ್ಣ ಹಾಳಾಗಿದೆ. ಈ ಸಂಬಂಧ ಕಟ್ಟಡ ಮಾಲೀಕರಿಗೆ ನೋಟೀಸ್ ನೀಡಿ, ದುರಸ್ತಿ ಕಾರ್ಯಕ್ಕೆ ತಗಲುವ ವೆಚ್ಚ ವಸೂಲಿ ಮಾಡುವುದರ ಜೊತೆಗೆ ದಂಡ ವಿಧಿಸಲು ಸೂಚನೆ ನೀಡಿದರು.
ಲಾಲ್ ಬಾಗ್ ಸುತ್ತಲೂ ಸ್ವಚ್ಛತೆ ಕಾಪಾಡಲು ಸೂಚನೆ:
ಲಾಲ್ ಬಾಗ್ ಸುತ್ತಲೂ ಸ್ವಚ್ಛತೆ ಕಾಪಾಡುವ ನಿಟ್ಟಿನಲ್ಲಿ ತೋಟಗಾರಿಕಾ ಇಲಾಖೆಯಿಂದ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕಿದ್ದು, ಶೀಘ್ರವೇ ಸ್ವಚ್ಛತಾ ಅಭಿಯಾನವನ್ನು ಹಮ್ಮಿಕೊಂಡು ಸ್ವಚ್ಛತೆ ಮಾಡಬೇಕು. ಅನಂತರ ತಾತ್ಕಾಲಿಕವಾಗಿ ಹೋಮ್ ಗಾರ್ಡ್ ಗಳನ್ನು ನಿಯೋಜಿಸಿ ಎಲ್ಲಿಯೂ ಸ್ವಚ್ಛತೆ ಹಾಳಾಗದಂತೆ ನೋಡಿಕೊಳ್ಳುವಂತೆ ಕ್ರಮವಹಿಸಲು ಸೂಚಿಸಿದರು.
ಕಸ ಟ್ರಾನ್ಸ್.ಫರ್ ಪಾಯಿಂಟ್ ಸ್ಥಳಗಳನ್ನು ಗುರುತಿಸಿ:
ನಗರದಲ್ಲಿ ಮನೆ-ಮನೆಯಿಂದ ಆಟೋ ಟಿಪ್ಪರ್ ಗಳ ಮೂಲಕ ಸಂಗ್ರಹಿಸುವ ತ್ಯಾಜ್ಯವನ್ನು ಕಾಂಪ್ಯಾಕ್ಟರ್ಗಳಿಗೆ ರವಾನಿಸುವ ಟ್ರಾನ್ಸಫರ್ ಪಾಯಿಂಟ್ ಗಳು ಬಹುತೇಕ ರಸ್ತೆ ಬದಿಯೇ ಮಾಡಲಾಗುತ್ತಿದೆ. ಇದರಿಂದ ಸ್ವಚ್ಛತೆ ಹಾಳಾಗಲಿದೆ. ಆದ್ದರಿಂದ ತ್ಯಾಜ್ಯ ರವಾನಿಸುವ ಟ್ರಾನ್ಸ್.ಫರ್ ಪಾಯಿಂಟ್ಗಳನ್ನು ರಸ್ತೆಗಳ ಬದಿ ಮಾಡದಂತೆ ಬೇರೆ ಸ್ಥಳಗಳನ್ನು ಗುರುತಿಸಲು ಸೂಚನೆ ನೀಡಿದರು.
1.9 ಕಿ.ಮೀ ಪಾದಚಾರಿ ಮಾರ್ಗ ಪರಿಶೀಲನೆ:
ಇಂದು ಮುಂಜಾನೆ 6.20 ರಿಂದ 7.45 ಗಂಟೆಯವರೆಗೆ ಲಾಲ್ ಬಾಗ್ ಪೂರ್ವ ದ್ವಾರದಿಂದ ಡಬಲ್ ರೋಡ್ ಮೂಲಕ ಲಾಲ್ ಬಾಗ್ ಪೂರ್ವ ದ್ವಾರದಿಂದ, ಡಬಲ್ ರೋಡ್ ರಸ್ತೆ, ಸಿದ್ದಾಪರ ವೃತ್ತ, ಅಶೋಕ್ ಪಿಲ್ಲರ್ ವೃತ್ತದ ಮೂಲಕ ಜಯನಗರ ಇಂದಿರಾ ಕ್ಯಾಂಟೀನ್ ವರೆಗೆ 1.9 ಕಿ.ಮೀ ವರೆಗೆ ನಡಿಗೆಯ ಮೂಲಕ ಪಾದಚಾರಿ ಮಾರ್ಗವನ್ನು ಪರಿಶೀಲಿಸಿದ್ದು, ಇರುವ ಸಮಸ್ಯೆಗಳನ್ನು ಬಗೆಹರಿಸಲು ಅಧಿಕಾರಿಗಳಿಗೆ ಸೂಚಿಸಿದರು.
ಈ ವೇಳೆ ದಕ್ಷಿಣ ವಲಯ ಆಯುಕ್ತರಾದ ದಿಗ್ವಿಜಯ್ ಬೋಡ್ಕೆ, ಯೋಜನಾ ವಿಭಾಗದ ವಿಶೇಷ ಆಯುಕ್ತರಾದ ಅವಿನಾಶ್ ಮೆನನ್ ರಾಜೇಂದ್ರನ್, ವಲಯ ಜಂಟಿ ಆಯುಕ್ತರಾದ ಮಧು, ಮುಖ್ಯ ಅಭಿಯಂತರರಾದ ರಾಜೇಶ್, ಕಾರ್ಯಪಾಲಕ ಅಭಿಯಂತರರು ಸೇರಿದಂತೆ ಇನ್ನಿತರೆ ಸಂಬಂಧಪಟ್ಟ ಅಧಿಕಾರಿಗಳು ಉಪಸ್ಥಿತರಿದ್ದರು.