ಬೆಂಗಳೂರು: ಸ್ಥಳೀಯ ಸಾಂಸ್ಕೃತಿಕ ಪರಂಪರೆಯನ್ನು ಉಳಿಸುವ ಸಲುವಾಗಿ ರಾಜ್ಯದ ನಾಲ್ಕು ರೈಲ್ವೇ ನಿಲ್ದಾಣಗಳ ಮರುನಾಮಕರಣ ಮಾಡಲು ಗೃಹ ಸಚಿವಾಲಯಕ್ಕೆ ಮನವಿ ಮಾಡಲಾಗಿದೆ. ಈ ಕುರಿತು ಗುರುವಾರ ಮಾತನಾಡಿದ ರಾಜ್ಯ ಮೂಲಸೌಲಭ್ಯ ಅಭಿವೃದ್ಧಿ ಸಚಿವ ಎಂ.ಬಿ ಪಾಟೀಲ್ ಮಾತನಾಡಿ, ರಾಜ್ಯದ ನಾಲ್ಕು ರೈಲು ನಿಲ್ದಾಣಗಳಿಗೆ ಕರ್ನಾಟಕದ ಆಧ್ಯಾತ್ಮಿಕ ಮತ್ತು ಸಾಮಾಜಿಕ ಪರಂಪರೆಗೆ ಕೊಡುಗೆ ನೀಡಿದ ಸಂತರ ಹೆಸರನ್ನಿಡಲು ಮನವಿ ಮಾಡಿದ್ದೇವೆಂದು ಹೇಳಿದರು.
ಯಾವ ಯಾವ ನಿಲ್ದಾಣಗಳ ಮರುನಾಮಕರಣಕ್ಕೆ ಪ್ರಸ್ತಾಪ?
ವಿಜಯಪುರದ ರೈಲು ನಿಲ್ದಾಣಕ್ಕೆ ಜ್ಞಾನಯೋಗಿ ಶ್ರೀ ಸಿದ್ದೇಶ್ವರ ರೈಲು ನಿಲ್ದಾಣ ಎಂದು, ಬೀದರ್ ನಿಲ್ದಾಣಕ್ಕೆ ‘ಚನ್ನಬಸವ ಪಟ್ಟದ ದೇವರ ರೈಲು ನಿಲ್ದಾಣ’, ಬೆಳಗಾವಿ ನಿಲ್ದಾಣಕ್ಕೆ‘ಶಿವಬಸವ ಮಹಾಸ್ವಾಮಿಜಿ ರೈಲು ನಿಲ್ದಾಣ’, ಸುರಗೊಂಡನ ಕೊಪ್ಪ ನಿಲ್ದಾಣಕ್ಕೆ ‘ಭಯಾಗಡ ರೈಲು ನಿಲ್ದಾಣ’ ಎಂದು ಮರುನಾಮಕರಣ ಮಾಡಲು ಮೂಲಸೌಲಭ್ಯ ಅಭಿವೃದ್ಧಿ ಇಲಾಖೆ ವತಿಯಿಂದ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ. ಈ ಕುರಿತು ಎಂಬಿ ಪಾಟಿಲ್ ತಮ್ಮ ಎಕ್ಸ್ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.
ಈ ಹಿಂದೆ ಮರುನಾಮಕರಣಗೊಂಡ ರೈಲ್ವೇ ನಿಲ್ದಾಣಗಳು
ಈ ಹಿಂದೆಯೂ ಹಲವು ರೈಲ್ವೇ ನಿಲ್ದಾಣಗಳ ಹೆಸರನ್ನು ಬದಲಾಯಿಸಲಾಗಿದೆ.ಬೆಂಗಳೂರು ಸಿಟಿ ಜಂಕ್ಷನ್ನ ಹೆಸರನ್ನು ಕ್ರಾಂತಿ ವೀರ ಸಂಗೊಳ್ಳಿ ರಾಯಣ್ಣ ಎಂದು, ಹುಬ್ಬಳ್ಳಿ ಜಂಕ್ಷನ್ ಹೆಸರನ್ನು ಸಿದ್ಧಾರೂಢ ಸ್ವಾಮೀಜಿ ಹುಬ್ಬಳ್ಳಿ ಜಂಕ್ಷನ್ ಎಂದು, ಹಾವೇರಿಯಲ್ಲಿ ಮಹಾದೇವಪ್ಪ ಮೈಲಾರ ರೈಲ್ವೇ ಸ್ಟೇಷನ್ ಎಂದೂ, ಬೆಂಗಳೂರಿನ ಬೈಯಪ್ಪನಹಳ್ಳಿ ನಿಲ್ದಾಣವನ್ನು ಸರ್ ಎಂ ವಿಶ್ವೇಶ್ವರಯ್ಯ ಹೆಸರಿಗೆ ಬದಲಾಯಿಸಲಾಗಿದೆ.
For More Updates Join our WhatsApp Group :
