ಬೆಂಗಳೂರು: “ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ಇ.ಡಿ. ಕಾಂಗ್ರೆಸ್ ಮುಖಂಡರ ಆಸ್ತಿಮುಟ್ಟುಗೋಲು ಹಾಕಿಕೊಂಡು ಆರೋಪಪಟ್ಟಿ ಸಲ್ಲಿಸಿರುವುದನ್ನು ನಾವು ಖಂಡಿಸುತ್ತೇವೆ, ಇದರ ವಿರುದ್ಧ ಪ್ರತಿಭಟನೆ ಮಾಡಲಾಗುವುದು” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದರು.

ಶಿವಕುಮಾರ್ ಅವರು ಕುಮಾರಪಾರ್ಕ್ ನಲ್ಲಿರುವ ಸರ್ಕಾರಿ ನಿವಾಸದಲ್ಲಿ ಮಂಗಳವಾರ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದರು.
“ನ್ಯಾಷನಲ್ ಹೆರಾಲ್ಡ್ ಜವಾಹರ್ ಲಾಲ್ ನೆಹರು ಅವರು ಹುಟ್ಟುಹಾಕಿದ ಸಂಸ್ಥೆ. ಅವರ ಕುಟುಂಬ ಇದನ್ನು ಎಂದೂ ವೈಯಕ್ತಿಕವಾಗಿ ಬಳಸಿಕೊಂಡಿಲ್ಲ. ಅವರು ಈ ಸಂಸ್ಥೆಯಿಂದ ಆಸ್ತಿ ಮಾಡಿಕೊಂಡಿಲ್ಲ. ಅನೇಕರ ಸಹಕಾರದಿಂದ ಈ ಸಂಸ್ಥೆ ನಡೆಸಿಕೊಂಡು ಬರಲಾಗಿದೆ. ಅನಗತ್ಯವಾಗಿ ಆಸ್ತಿ ಮುಟ್ಟುಗೋಲು ಹಾಕಿಕೊಂಡು ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಅವರ ವಿರುದ್ಧ ಷಡ್ಯಂತ್ರ ರೂಪಿಸಲಾಗುತ್ತಿದೆ. ನಾವು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಬಹಿರಂಗ ಪ್ರತಿಭಟನೆ ಮಾಡುತ್ತೇವೆ” ಎಂದು ತಿಳಿಸಿದರು.
“ನಾಡಿದ್ದು, ಅಂದರೆ ಏ.17ರಂದು ಕೇಂದ್ರ ಸರ್ಕಾರದ ಬೆಲೆ ಏರಿಕೆ ವಿರುದ್ಧ ಪ್ರತಿಭಟನೆ ಹಮ್ಮಿಕೊಂಡಿದ್ದು, ಮುಂದಿನ ದಿನಗಳಲ್ಲಿ ಚರ್ಚೆ ಮಾಡಿ ಆಸ್ತಿ ಮುಟ್ಟುಗೋಲು ವಿರುದ್ಧ ಪ್ರತಿಭಟನೆ ನಿಗದಿ ಮಾಡಲಾಗುವುದು” ಎಂದು ಹೇಳಿದರು.