ಶ್ರೀ ಯೋಗಿನಾರೇಯಣ ತಾತಯ್ಯ ಗುರುಪಾದುಕೆ ಪೂಜೆ..  

ಶ್ರೀ ಯೋಗಿನಾರೇಯಣ ತಾತಯ್ಯ ಗುರುಪಾದುಕೆ ಪೂಜೆ..  

ಗುಡಿಬಂಡೆ ತಾಲೂಕು ಹಂಪಸಂದ್ರ ಗ್ರಾಮದ ಸಂತೆ ಬಳಿ ಇರುವ ಶ್ರೀ ಯೋಗಿನಾರೇಯಣ ತಾತಯ್ಯನವರ ಮಠದಲ್ಲಿ ಸದ್ಗುರು ಶ್ರೀ ಯೋಗಿನಾರೇಯಣ ಸಂಕಿರ್ತನ ಸೇವಾ ಟ್ರಸ್ಟ್ನ ಮೊದಲ ವಾರ್ಷಿಕೋತ್ಸವ ಹಿನ್ನೆಲೆ ಗುರುಪಾದುಕೆ ಪೂಜೆಯನ್ನು ಸಾವಿರಾರು ಭಕ್ತಾದಿಗಳ ಸಮ್ಮುಖದಲ್ಲಿ ನಡೆಸಲಾಯಿತು. ಇನ್ನೂ ಯೋಗಿನಾರೇಯಣ ಮಠದಿಂದ ಹಂಪಸಂದ್ರ ಗ್ರಾಮದ ವಿವಿಧ ಬೀದಿಗಳಲ್ಲಿ ಭಕ್ತಾದಿಗಳು ತಮ್ಮ ಸಂಕಿರ್ತನ ಯಾತ್ರೆಯನ್ನು ಹಮ್ಮಿಕೊಂಡಿದ್ದರು. 

ವಿಶೇಷ ಪ್ರವಚನ ನೀಡಿ ಮಾತನಾಡಿದ ಯೋಗಿನಾರೇಯಣ ಸಂಕಿರ್ತನ ಟ್ರಸ್ಟ್ ಸಂಚಾಲಕರು ಕರ್ನಾಟಕ ಕಲಾಶ್ರೀ ವಾನರಾಸಿ ಬಾಲಕೃಷ್ಣ ಭಾಗವಾತ್ ‘ಕೈವಾರ ತಾತಯ್ಯನವರ ತತ್ವಬೋಧನೆಗಳು ಸಾಗರದಷ್ಟು ಆಳ, ಭೂಮಂಡಲದಷ್ಟು ವ್ಯಾಪಕ ಹಾಗೂ ಆಕಾಶದ ಎತ್ತರದಷ್ಟು ಅರ್ಥವುಳ್ಳದ್ದಾಗಿವೆ’

‘ಮಾನವರ ಬದುಕಿನಲ್ಲಿ ಮಾಯೆ ಬಹು ಮಹತ್ವದ ಪಾತ್ರ ವಹಿಸುತ್ತದೆ. ಮಾಯೆಯ ಪೊರೆ ಕಳಚಿದರೆ ಮಾತ್ರ ನಿಜ ಬದುಕಿನ ಮರ್ಮ ತಿಳಿಯುತ್ತದೆ. ಮಾನವರು ದೇಹವೇ ನಿತ್ಯವೆಂಬಂತೆ ಭಾವಿಸಿ ವರ್ತಿಸುತ್ತಿದ್ದಾರೆ. ಆದುದರಿಂದ ದೇಹ ನೋಡಬಲ್ಲರೇ ಹೊರತು ದೇಹದ ಒಳಗಿರುವ ತಾರಕಜ್ಯೋತಿಯನ್ನು ಕಾಣಲು ಸಾಧ್ಯವಿಲ್ಲ’ ಎಂದರು.

 ‘ಕೈವಾರ ತಾತಯ್ಯನವರ ಬೋಧನೆಗಳನ್ನು ಬದುಕಿನಲ್ಲಿ ಅಳವಡಿಸಿಕೊಂಡರೆ ಕರ್ಮಾನುಸಾರವಾಗಿ ಫಲವನ್ನು ಅನುಭವಿಸಬಹುದು. ಮನಸ್ಸು ಇಂದ್ರಿಯಗಳ ಹಿಂದೆ ಹೋಗದಿದ್ದರೆ, ಇಂದ್ರಿಯಗಳನ್ನು ಜಯಿಸುವುದು ಸಾಧ್ಯ. ಮನಸ್ಸನ್ನು ಇಂದ್ರಿಯಗಳ ಸಂಬಂಧವಿಲ್ಲದಂತೆ ಕಡಿದುಕೊಂಡವರು ಮಹಾತ್ಮರಾಗುತ್ತಾರೆ’ ಎಂದರು.

ವಿಶ್ವಾಸ್ಥ ಮಂಡಳಿ ಸದಸ್ಯರಾದ ಬಾಗೇಪಲ್ಲಿ ನರಸಿಂಹಪ್ಪ ಮಾತನಾಡಿ ‘ಮಾನವರಾಗಿ ಜನಿಸಿದ ಪ್ರತಿಯೊಬ್ಬರನ್ನು ಭಗವಂತ ಪೋಷಣೆ ಮಾಡುತ್ತಾನೆ. ಅದಕ್ಕಾಗಿ ವ್ಯಥೆ ಪಡುವುದು ಹುಚ್ಚುತನವಾಗುತ್ತದೆ. ಪೂರ್ವಕರ್ಮಗಳು ಪೀಡಿಸದೆ ಇರಬೇಕಾದರೆ ಭಗವಂತನ ಸ್ಮರಣೆ ಮಾಡುತ್ತಿರಬೇಕು’ ಎಂದರು.

ಗುರುಪಾದುಕೆ ಪೂಜೆ ಹಿನ್ನೆಲೆ ತಾತಯ್ಯನವರ ವಿಗ್ರಹಕ್ಕೆ ವಿಶೇಷ ಅಲಂಕಾರ ಮಾಡಲಾಗಿತ್ತು. ಅಭಿಷೇಕ, ಅಷ್ಟಾವಧಾನ ಸೇವೆ, ಮಹಾಮಂಗಳಾರತಿ ನೆರವೇರಿಸಲಾಯಿತು. ಸಾಮೂಹಿಕ ನಾಮ ಸಂಕೀರ್ತನೆಯನ್ನು ನೆರವೇರಿಸಲಾಯಿತು.

Leave a Reply

Your email address will not be published. Required fields are marked *