ಪುಣೆ(ಮಹಾರಾಷ್ಟ್ರ): ವರದಕ್ಷಿಣೆ ಕಿರುಕುಳಕ್ಕೆ ಬೇಸತ್ತು ಕರ್ನಾಟಕದ ನವವಿವಾಹಿತೆ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಪುಣೆಯ ಹಡಪ್ಸರ್ನಲ್ಲಿ ಮೇ 19ರಂದು ನಡೆದಿದ್ದು, ಇಂದು ಪ್ರಕರಣ ದಾಖಲಾಗಿದೆ. ವಿಜಯಪುರದ 22 ವರ್ಷ ವಯಸ್ಸಿನ ದೀಪಾ(ದೇವಕಿ) ಆತ್ಮಹತ್ಯೆಗೆ ಶರಣಾದ ನವವಿವಾಹಿತೆ.

ಇವರ ತಂದೆ ಗುರುಸಂಗಪ್ಪ ಮೇಗೇರಿ ನೀಡಿದ ದೂರಿನ ಮೇರೆಗೆ ಹಡಪ್ಸರ್ ಪೊಲೀಸರು, ದೀಪಾ ಅವರ ಪತಿ ಪ್ರಸಾದ್ ಚಂದ್ರಕಾಂತ ಪೂಜಾರಿ, ಮಾವ ಚಂದ್ರಕಾಂತ ಪೂಜಾರಿ, ಅತ್ತೆ ಸುರೇಖಾ ಪೂಜಾರಿ ಮತ್ತು ಪ್ರಸನ್ನ ಪೂಜಾರಿ ಎಂಬವರ ವಿರುದ್ಧ ವರದಕ್ಷಿಣೆ ತಡೆ ಕಾಯ್ದೆ ಮತ್ತು ಆತ್ಮಹತ್ಯೆಗೆ ಪ್ರಚೋದನೆಯ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಉನ್ನತ ಶಿಕ್ಷಣ ಪಡೆದಿದ್ದ ದೀಪಾ, ತನ್ನ ಸ್ವಗ್ರಾಮದ ಮಹಿಳೆಯರನ್ನು ಆರ್ಥಿಕವಾಗಿ ಸಬಲರನ್ನಾಗಿಸುವ ಕೆಲಸ ಮಾಡುತ್ತಿದ್ದರು ಮತ್ತು ಗ್ರಾಮದ ಸ್ವಸಹಾಯ ಗುಂಪಿನ ಮುಖ್ಯಸ್ಥೆಯೂ ಆಗಿದ್ದರು.
ದೀಪಾ ಕುಟುಂಬ 5 ತೊಲ ಚಿನ್ನ ಮತ್ತು 10ರಿಂದ 12 ಲಕ್ಷ ರೂ ಖರ್ಚು ಮಾಡಿ ವಿವಾಹ ಮಾಡಿಸಿತ್ತು. ಮದುವೆಯ ಬಳಿಕ ದೀಪಾ ಮತ್ತು ಪ್ರಸಾದ್ ಪುಣೆಯಲ್ಲಿ ವಾಸಿಸುತ್ತಿದ್ದರು. ಮದುವೆಯಾದ ಮರುದಿನದಿಂದಲೇ ಪತಿ, ಅತ್ತೆ, ಮಾವ ಆಕೆಗೆ ಮಾನಸಿಕ ಕಿರುಕುಳ ನೀಡಲು ಪ್ರಾರಂಭಿಸಿದ್ದರು. ನಿರಂತರ ಕಿರುಕುಳದಿಂದ ನೊಂದ ದೀಪಾ ಆತ್ಮಹತ್ಯೆ ಮಾಡಿಕೊಂಡಿದ್ದರು.