ನವದೆಹಲಿ: ಲೋಕಸಭೆಯಲ್ಲಿ ವಿರೋಧ ಪಕ್ಷದ ನಾಯಕನ ಸ್ಥಾನ ವಹಿಸಿಕೊಳ್ಳುವಂತೆ ರಾಹುಲ್ ಗಾಂಧಿ ಅವರಿಗೆ ಮನವಿ ಮಾಡುವ ನಿರ್ಣಯವನ್ನು ಕಾಂಗ್ರೆಸ್ ಕಾರ್ಯಕಾರಿ ಸಮಿತಿ (CWC) ಅಂಗೀಕರಿಸಿದೆ ಎಂದು ಪಕ್ಷದ ಹಿರಿಯ ನಾಯಕ ಕೆ.ಸಿ.ವೇಣುಗೋಪಾಲ್ ತಿಳಿಸಿದ್ದಾರೆ.
ಲೋಕಸಭೆಯಲ್ಲಿ ವಿರೋಧ ಪಕ್ಷದ ನಾಯಕನ ಸ್ಥಾನ ವಹಿಸಿಕೊಳ್ಳಬೇಕು ಎಂದು ರಾಹುಲ್ ಗಾಂಧಿಗೆ CWC ಸದಸ್ಯರು ಸರ್ವಾನುಮತದಿಂದ ವಿನಂತಿಸಿದ್ದಾರೆ. ಸಂಸತ್ತಿನ ಒಳಗೆ ವಿಪಕ್ಷ ನಾಯಕ ಸ್ಥಾನಕ್ಕೆ ರಾಹುಲ್ ಅವರು ಅತ್ಯುತ್ತಮ ವ್ಯಕ್ತಿ ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ.
ವಿಪಕ್ಷ ನಾಯಕ ಸ್ಥಾನ ವಹಿಸಿಕೊಳ್ಳಲು ರಾಹುಲ್ ಗಾಂಧಿ ಒಪ್ಪಿದ್ದಾರೆಯೇ ಎಂಬ ಪ್ರಶ್ನೆಗೆ, ಶೀಘ್ರದಲ್ಲೇ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಮಾಹಿತಿ ನೀಡಿದ್ದಾರೆ
ರಾಹುಲ್ ಗಾಂಧಿಯೇ ವಿಪಕ್ಷ ನಾಯಕ ಆಗಬೇಕು ಎಂಬ ಆಗ್ರಹ ಕೇಳಿಬಂದಿದೆ. ರಾಹುಲ್ ಗಾಂಧಿ ಕಾರಣದಿಂದಲೇ ಹೆಚ್ಚು ಸ್ಥಾನ ಬಂದಿದೆ. ಭಾರತ್ ಜೋಡೋ ಯಾತ್ರೆ ನಡೆದಲ್ಲೆಲ್ಲ ನಾವು ಹೆಚ್ಚು ಸ್ಥಾನ ಗೆದ್ದಿದ್ದೇವೆ. ಮಣಿಪುರದಲ್ಲೂ ಎರಡು ಸ್ಥಾನ ಗೆಲ್ಲಲು ರಾಹುಲ್ ಕಾರಣ. ಹೀಗಾಗಿ ರಾಹುಲ್ ಗಾಂಧಿಯೇ ವಿರೋಧ ಪಕ್ಷದ ನಾಯಕ ಆಗಬೇಕು ಎಂದು ಸಭೆಯಲ್ಲಿ ಕಾಂಗ್ರೆಸ್ ಹಿರಿಯ ನಾಯಕರು, ಸಿಡಬ್ಲ್ಯೂಸಿ ಸದಸ್ಯರು ಒತ್ತಾಯಿಸಿದ್ದಾರೆ.