ರಾಯಚೂರು: ಕೆ.ಎಸ್.ಆರ್.ಟಿ.ಸಿ ಬಸ್ ಹಾಗೂ ಟ್ರ್ಯಾಕ್ಟರ್ ನಡುವೆ ಭೀಕರ ಅಪಘಾತ ಸಂಭವಿಸಿ ಕೂಲಿ ಕಾರ್ಮಿಕ ಮಹಿಳೆ ಸ್ಥಳದಲ್ಲೇ ಸಾವನ್ನಪ್ಪಿದ್ದು 18 ಕೂಲಿಕಾರ್ಮಿಕರು ಗಾಯಗೊಂಡಿರುವ ಘಟನೆ ರಾಯಚೂರಿನ ಮುದಗಲ್ ಪಟ್ಟಣದಲ್ಲಿರುವ ಸಮೀಪದಲ್ಲಿ ಇಂದು ಜರುಗಿದೆ.
ನಸುಕಿನ ಜಾವ ಜಿಲ್ಲೆಯ ಲಿಂಗಸೂಗೂರು ತಾಲೂಕಿನ ಮುದಗಲ್ ಪಟ್ಟಣದ ಬಳಿ ಬನ್ನಿಗೋಳದ ಗ್ರಾಮದ ಹೊರವಲಯದಲ್ಲಿ ಈ ದುರ್ಘಟನೆ ಸಂಭವಿಸಿದೆ. ಟ್ರ್ಯಾಕ್ಟರ್ನಲ್ಲಿದ್ದ ಶ್ರೀದೇವಿ (19) ಮೃತ ಮಹಿಳೆಯೆಂದು ಗುರುತಿಸಲಾಗಿದೆ. ಇತ್ತೀಚಿಗಷ್ಟೇ ಶ್ರೀದೇವಿ ಅವರ ಮದುವೆ ಆಗಿತ್ತು ಎಂದು ತಿಳಿದುಬಂದಿದೆ.
ಇನ್ನುಳಿದ 18 ಜನ ಕೂಲಿ ಕಾರ್ಮಿಕರಿಗೆ ಗಾಯಗಳು ಆಗಿದ್ದು, ಗಾಯಾಳುಗಳನ್ನು ಲಿಂಗಸೂಗೂರು ತಾಲೂಕು ಆಸ್ಪತ್ರೆಗೆ ಚಿಕಿತ್ಸೆಗೆ ರವಾನಿಸಲಾಗಿದೆ. ಈ ಪೈಕಿ ಗಂಭೀರವಾಗಿ ಗಾಯಗೊಂಡಿರುವ ನಾಲ್ವರನ್ನು ಬಾಗಲಕೋಟೆಯ ಆಸ್ಪತ್ರೆಗೆ ಸಾಗಿಸಲಾಗಿದೆ. ಸಾರಿಗೆ ಬಸ್ ಚಾಲಕನಿಗೂ ಗಾಯಗೊಂಡಿದ್ದು, ಪ್ರಯಾಣಿಕರಿಗೆ ಕೆಲವೊಂದು ಸಣ್ಣಪುಟ್ಟ ಗಾಯಗಳಾಗಿವೆ ಅವರನ್ನೂ ಆಸ್ಪತ್ರೆಗೆ ದಾಖಲಿಸಲಾಗಿದೆ.
ಬನ್ನಿಗೋಳ ಗ್ರಾಮದ ಕೂಲಿಕಾರ್ಮಿಕರು ಕೆಲಸಕ್ಕಾಗಿ ಟ್ರ್ಯಾಕ್ಟರ್ನಲ್ಲಿ ತೆರಳುತ್ತಿದ್ದರು. ಅಂಕಲಿಮಠದಿಂದ ಮುದಗಲ್ ಪಟ್ಟಣದ ಕಡೆ ಬಸ್ ಬರುತ್ತಿತ್ತು. ಈ ವೇಳೆ ಮಾರ್ಗಮಧ್ಯೆ ಘಟನೆ ಜರುಗಿದೆ ಎಂದು ತಿಳಿದು ಬಂದಿದೆ. ವಿಷಯ ತಿಳಿದು ಸ್ಥಳಕ್ಕೆ ಮುದುಗಲ್ ಠಾಣೆ ಪಿಎಸ್ಐ ವೆಂಕಟೇಶ ಮಡಿಕೇರಿ, ಪಿಎಸ್ಐ ಛತ್ರಪ್ಪ ರಾಥೋಡ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.