ರಾಯಚೂರು : ಆಂಧ್ರ ಪ್ರದೇಶದ ಮಂತ್ರಾಲಯ ಸಂಸ್ಕೃತ ವಿದ್ಯಾಪೀಠದ ವಾಹನ ಪಲ್ಟಿಯಾಗಿ ಮೂವರು ವಿದ್ಯಾರ್ಥಿಗಳು ಹಾಗೂ ಚಾಲಕ ಸಾವನ್ನಪ್ಪಿರುವ ಘಟನೆ ರಾಯಚೂರು ಜಿಲ್ಲೆಯ ಸಿಂಧನೂರು ಹೊರವಲಯದಲ್ಲಿ ಮಂಗಳವಾರ ತಡರಾತ್ರಿ ಸಂಭವಿಸಿದೆ.
ಮೂವರು ವಿದ್ಯಾರ್ಥಿಗಳು ಹಾಗೂ ಚಾಲಕ ಸಾವನ್ನಪ್ಪಿದ್ದಾರೆ. ವಿದ್ಯಾರ್ಥಿಗಳಾದ ಹಯವದನ (18), ಸುಜಯೇಂದ್ರ (22), ಅಭಿಲಾಷ (20) ಹಾಗೂ ಚಾಲಕ ಕಂಸಾಲಿ ಶಿವ (20) ಮೃತರು.
14 ಜನ ಪ್ರಯಾಣಿಸುತ್ತಿದ್ದ ಕ್ರೂಸರ್ ವಾಹನದ ಆಕ್ಸಲ್ ಕಟ್ ಆಗಿ ಮೂರು ಪಲ್ಟಿ ಹೊಡೆದಿದೆ. ಚಾಲಕನ ಅತಿಯಾದ ವೇಗ ಅಪಘಾತಕ್ಕೆ ಕಾರಣವೆಂದು ವರದಿಯಾಗಿದೆ. ಮಂತ್ರಾಲಯದಿಂದ ಕೊಪ್ಪಳದ ಆನೆಗುಂದಿಯ ನರಹರಿ ತೀರ್ಥರ ವೃಂದಾವನಕ್ಕೆ ತೆರಳುವಾಗ ಅಪಘಾತ ನಡೆದಿದ್ದು, ನಾಲ್ವರು ಮೃತಪಟ್ಟಿದ್ದರೆ, ಉಳಿದವರು ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ರಾಯಚೂರಿನ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಸಿಂಧನೂರು ಟ್ರಾಫಿಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ದುರ್ಘಟನೆಯ ಸ್ಥಳಕ್ಕಾಗಮಿಸಿದ ಮಂತ್ರಾಲಯದ ಶ್ರೀಗಳು ಮಾಹಿತಿ ಪಡೆದರು.