ರಾಯಚೂರು : ಜಿಲ್ಲೆಯ ವಿವಿಧ ಭಾಗಗಳಲ್ಲಿ ಅಕಾಲಿಕ ಮಳೆ ಸುರಿದಿರುವುದರಿಂದಾಗಿ ಭತ್ತದ ಬೆಳೆಗೆ ಹಾನಿಯಾಗಿದ್ದು, ಬೆಳೆಗಾರರಿಗೆ ಸಂಕಷ್ಟ ತರಿಸಿದೆ.

ಜಿಲ್ಲೆಯಲ್ಲಿ ಬೆಳಗ್ಗೆಯಿಂದ ಮೋಡ ಕವಿದ ವಾತಾವರಣ ನಿರ್ಮಾಣವಾಗಿತ್ತು. ಮಧ್ಯಾಹ್ನದ ವೇಳೆಗೆ ಗುಡುಗು ಮಿಂಚಿನೊಂದಿಗೆ ಮಳೆ ಸುರಿದಿದೆ. ಜಿಲ್ಲೆಯ ಸಿರವಾರ ಪಟ್ಟಣ ಸೇರಿದಂತೆ ಸುತ್ತಮುತ್ತಲಿನ ಪ್ರದೇಶದಲ್ಲಿ ಮಳೆಯಾಗಿದ್ದು, ನಾಗಡದಿನ್ನಿ ಗ್ರಾಮದಲ್ಲಿ ಆಲಿಕಲ್ಲು ಮಳೆಯಾಗಿದೆ.
ರೈತರು ಭತ್ತ ಕಟಾವ್ ಮಾಡಿ ಒಣಗಿಸಲು ಟಾರ್ಪಲ್ ಮೇಲೆ ಹರಡಿದ್ದರು. ಗಾಳಿ ಸಹಿತ ಮಳೆಯಾಗಿದ್ದರಿಂದ ಭತ್ತಕ್ಕೆ ಹೊದಿಸಿದ್ದ ಟಾರ್ಪಲ್ ಹಾರಿಹೋಗಿದೆ. ಇದರಿಂದಾಗಿ ಭತ್ತ ಸಂಪೂರ್ಣವಾಗಿ ಒದ್ದೆಯಾಗಿ ನಾಶವಾಗಿದೆ. ಸಾವಿರಾರು ರೂಪಾಯಿ ಖರ್ಚು ಮಾಡಿ ಬೆಳೆಯನ್ನು ಬೆಳೆದಿದ್ದ ರೈತರಿಗೆ ಇದೀಗ ನಷ್ಟವಾಗಿದೆ.
ಸದ್ಯ ಜಿಲ್ಲೆಯಾದ್ಯಂತ ಮೋಡ ಕವಿದ ವಾತಾವರಣ ಮುಂದುವರೆದಿದ್ದು, ಭತ್ತದ ಬೆಳೆಗಾರರಿಗೆ ನಷ್ಟ ಎದುರಿಸುವ ಪರಿಸ್ಥಿತಿ ಇದ್ರೆ, ಬಿರುಬಿಸಿಲಿನ ಬೇಗೆಯಿಂದ ಬಳಲಿ ಬೆಂಡಾದ ಜನರಿಗೆ ಮಳೆರಾಯ ತಂಪೆರೆದಿದ್ದಾನೆ.
ಆಲಿಕಲ್ಲು ಮಳೆಗೆ ಭತ್ತದ ಬೆಳೆ ಹಾನಿ : ಬಳ್ಳಾರಿ ಜಿಲ್ಲೆಯ ಕಂಪ್ಲಿ ತಾಲೂಕಿನ ಸೋಮಲಾಪುರ ಗ್ರಾಮದಲ್ಲಿ ಶನಿವಾರ ರಾತ್ರಿ ಬೀಸಿದ ಬಿರುಗಾಳಿ, ಗುಡುಗು ಮಿಂಚು, ಆಲಿಕಲ್ಲು ಸಹಿತ ಮಳೆಗೆ ಕೊಯ್ಲಿಗೆ ಸಿದ್ದವಾಗಿದ್ದ ನೂರಾರು ಎಕರೆ ಹಿಂಗಾರು ಭತ್ತ ನೆಲದ ಪಾಲಾಗಿವೆ.
‘ಕನಿಷ್ಠ ಅರ್ಧ ಗಂಟೆಗೂ ಹೆಚ್ಚು ಕಾಲ ಆಲಿಕಲ್ಲು ಮಳೆ ಸುರಿದಿದ್ದು, ಸಂಪೂರ್ಣ ಭತ್ತದ ಪೈರು ನೆಲಕಚ್ಚುವುದರ ಜತೆ ಭತ್ತದ ಕಾಳು ತೆನೆಯಿಂದ ಬೇರ್ಪಟ್ಟು ಕೆಸರುಮಯವಾಗಿರುವುದು ಕಂಡು ದಿಕ್ಕು ತೋಚದಂತಾಗಿದೆ’ ಎಂದು ಗ್ರಾಮದ ರೈತ ಎಸ್. ಕೆ. ಮಲ್ಲಿಕಾರ್ಜುನ ಬೇಸರ ವ್ಯಕ್ತಪಡಿಸಿದರು.
ದರೋಜಿ ಕೆರೆ ನೀರಿನಿಂದ ಈ ಬೇಸಿಗೆಯಲ್ಲಿ ಆರ್.ಎನ್.ಆರ್ ಮತ್ತು ಗಂಗಾಕಾವೇರಿ ತಳಿ ಬೆಳೆಯಲಾಗಿತ್ತು. ಆದರೆ, ಮಳೆರಾಯನ ಅವಾಂತರದಿಂದ ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ ಎಂದು ಗ್ರಾಮದ ಇನ್ನು ಕೆಲ ರೈತರು ಅಸಮಾಧಾನ ವ್ಯಕ್ತಪಡಿಸಿದರು. ಸಂಬಂಧಿಸಿದ ಅಧಿಕಾರಿಗಳು ಭೇಟಿ ನೀಡಿ ಸಮೀಕ್ಷೆ ನಡೆಸಿ ನಷ್ಟ ಪರಿಹಾರ ನೀಡುವಂತೆ ಒತ್ತಾಯಿಸಿದ್ದಾರೆ.