ಮಂಗಳೂರು: ಧರ್ಮಸ್ಥಳ ಆಸುಪಾಸಿನಲ್ಲಿ ನೂರಾರು ಶವಗಳನ್ನು ಹೂತಿರುವುದಾಗಿ ಹೇಳಿಕೊಂಡು ಮೊದಲ ಬಾರಿಗೆ ದೂರು ನೀಡುವಾಗ ಮಾಸ್ಕ್ಮ್ಯಾನ್ ಚಿನ್ನಯ್ಯ ತಂದಿದ್ದ ತಲೆಬುರುಡೆಯ ರಹಸ್ಯ ಈಗ ಬಯಲಾಗಿದೆ. ಬುರುಡೆ ಬಗ್ಗೆ ವಿಧಿ ವಿಜ್ಞಾನ ಪ್ರಯೋಗಾಲಯದಲ್ಲಿ (ಎಫ್ಎಸ್ಎಲ್/ FSL) ಪರೀಕ್ಷೆ ನಡೆಸಿದಾಗ ಅಸಲಿ ವಿಚಾರ ಬೆಳಕಿಗೆ ಬಂದಿದೆ. ಹೆಣ್ಣುಮಗಳ ತಲೆಬುರುಡೆ ಎಂದು ತಂದಿದ್ದ ಚಿನ್ನಯ್ಯ, ಇದೇ ರೀತಿ ನೂರಾರು ಶವಗಳನ್ನು ಹೂತುಹಾಕಿದ್ದೇನೆ ಎಂದಿದ್ದ. ಇದೀಗ ಮೊದಲ ಬುರುಡೆಯ ಅಸಲಿಯತ್ತು ಬಯಲಾಗಿದೆ. ಚಿನ್ನಯ್ಯ ತಂದಿದ್ದ ಬುರುಡೆ 25-30 ವರ್ಷದೊಳಗಿನ ಪುರುಷನದ್ದು ಎಂದು ಎಫ್ಎಸ್ಎಲ್ ಪ್ರಾಥಮಿಕ ವರದಿಯಲ್ಲಿ ಗೊತ್ತಾಗಿದೆ.
ಚಿನ್ನಯ್ಯ ‘ಬುರುಡೆ’ ರಹಸ್ಯ!
ಎಫ್ಎಸ್ಎಲ್ ವರದಿ ಕುರಿತು ‘ಟಿವಿ9’ಗೆ ಸಿಕ್ಕ ಮಾಹಿತಿ ಪ್ರಕಾರ, ಚಿನ್ನಯ್ಯ ನೀಡಿದ್ದ ಬುರುಡೆಯಲ್ಲಿ ಯಾವುದೇ ಮಣ್ಣಿನ ಕಣ ಪತ್ತೆಯಾಗಿಲ್ಲ. ಆದರೆ, ಬುರುಡೆಯಲ್ಲಿ ಅಂಟಿಕೊಂಡಿರುವ ಮಣ್ಣಿನ ಸೂಕ್ಷ್ಮ ಕಣಗಳನ್ನ ಎಫ್ಎಸ್ಎಲ್ ಸಂಗ್ರಹಿಸಿದೆ. ಈ ಎಲ್ಲದರ ಬಗ್ಗೆ ಎಫ್ಎಸ್ಎಲ್ನ ಒಂದು ರಿಪೋರ್ಟ್ ಎಸ್ಐಟಿಯ ಕೈ ಸೇರಿದೆ. ಚಿನ್ನಯ್ಯ ತಂದಿದ್ದ ಬುರುಡೆ ಯಾರದ್ದು ಎಂದು ಶೋಧ ನಡೆಸಲಾಗುತ್ತಿದೆ. ಅಲ್ಲದೆ, ಬುರುಡೆ ತಂದಿರುವ ಜಾಗಕ್ಕೆ ಚಿನ್ನಯ್ಯನನ್ನು ಕರೆದೊಯ್ಯಲಿರುವ ಎಸ್ಐಟಿ, ಮಹಜರು ನಡೆಸಲು ಸಿದ್ಧತೆ ಮಾಡಿದೆ. ಚಿನ್ನಯ್ಯ ತೋರಿಸುವ ಆ ಜಾಗದಲ್ಲಿ ಮಣ್ಣು ಸಂಗ್ರಹಿಸಿ, ಅಲ್ಲಿನ ಮಣ್ಣು, ಡಿಎನ್ಎ ಹೊಂದಾಣಿಕೆ ಮಾಡಲು ಎಸ್ಐಟಿ ಮುಂದಾಗಿದೆ.
ಬೆಳ್ಳಂಬೆಳಗ್ಗೆ ಎಸ್ಐಟಿ ವಿಚಾರಣೆಗೆ ಸುಜಾತ ಭಟ್ ಹಾಜರು
ನನಗೊಬ್ಬಳು ಅನನ್ಯ ಭಟ್ ಎಂಬ ಮಗಳಿದ್ದಳು. ಅವಳು 22 ವರ್ಷಗಳ ಹಿಂದೆ ಧರ್ಮಸ್ಥಳದಲ್ಲಿ ನಾಪತ್ತೆಯಾಗಿದ್ದಳು. ಅವಳ ಅಸ್ಥಿಯನ್ನಾದರೂ ಹುಡುಕಿ ಕೊಡಿ ಎಂದು ಸುಜಾತ ಭಟ್ ಎಂಬ ಮಹಿಳೆ ಗಂಭೀರ ಆರೋಪ ಮಾಡಿದ್ದರು. ಈ ಬಗ್ಗೆ ಬೆಳ್ತಂಗಡಿ ಠಾಣೆಯಲ್ಲಿ ದೂರನ್ನೂ ದಾಖಲಿಸಿದ್ದರು. ಈ ದೂರು ಎಸ್ಐಟಿಗೆ ವರ್ಗಾವಣೆಯಾಗಿತ್ತು. ಈ ಬಗ್ಗೆ ವಿಚಾರಣೆಗೆ ಹಾಜರಾಗುವಂತೆ ಎಸ್ಐಟಿ ನೋಟಿಸ್ ನೀಡಿತ್ತು. ಅನಾರೋಗ್ಯದ ಕಾರಣ ನೀಡಿದ್ದ ಸುಜಾತ ಭಟ್, ಆಗಸ್ಟ್ 29ರಂದು ಹಾಜರಾಗುತ್ತೇನೆ ಎಂದಿದ್ದರು. ಆದರೆ, ಇಂದು ಬೆಳ್ಳಂಬೆಳಗ್ಗೆ ಬೆಳ್ತಂಗಡಿಯಲ್ಲಿರುವ ಎಸ್ಐಟಿ ಕಚೇರಿಯಲ್ಲಿ ಪ್ರತ್ಯಕ್ಷರಾಗಿದ್ದಾರೆ.
ಆದರೆ, ಎಸ್ಐಟಿ ಅಧಿಕಾರಿಗಳು ತಿಮರೋಡಿ ಮನೆಯಲ್ಲಿ ಶೋಧ ನಡೆಸುತ್ತಿರುವುದರಿಂದ ಸುಜಾತ ಇನ್ನೂ ಎಸ್ಐಟಿ ಕಚೇರಿಯಲ್ಲೇ ಕುಳಿತಿದ್ದಾರೆ.
ಏತನ್ಮಧ್ಯೆ, ಧರ್ಮಸ್ಥಳದಲ್ಲಿ ಎಸ್ಐಟಿ ಶೋಧ ಕಾರ್ಯಾಚರಣೆ ವಿಚಾರವಾಗಿ ರಾಜಕೀಯ ಜಟಾಪಟಿ ಮುಂದುವರಿದಿದೆ. ಪ್ರಕರಣದ ತನಿಖೆಯನ್ನು ಎನ್ಐಗೆ ಕೊಡಿ ಎಂದು ಬಿಜೆಪಿ ನಾಯಕರು ಒತ್ತಾಯಿಸಿದ್ದಾರೆ. ಇದಕ್ಕೆ ತಿರುಗೇಟು ಕೊಟ್ಟ ಗೃಹ ಸಚಿವ ಪರಮೇಶ್ವರ್, ಎಸ್ಐಟಿ ಬಹಳ ಗಂಭೀರವಾಗಿ ತನಿಖೆ ಮಾಡುತ್ತಿದೆ. ಸತ್ಯ ಹೊರಗಡೆ ಬರಬೇಕೆಂದು ಭಕ್ತರು ಕಾಯುತ್ತಿದ್ದಾರೆ. ಪ್ರಕರಣವನ್ನು ಎನ್ಐಎ ತನಿಖೆಗೆ ನೀಡುವ ಅಗತ್ಯವಿಲ್ಲ ಎಂದಿದ್ದಾರೆ.
ಮತ್ತೊಂದೆಡೆ, ಧರ್ಮಸ್ಥಳದ ವಿರುದ್ಧ ಅಪಪ್ರಚಾರಕ್ಕೆ ಹಿಂದೂ ಸಂಘಟನೆಗಳು ಆಕ್ರೋಶ ಹೊರಹಾಕಿವೆ. ಚಿಕ್ಕಮಗಳೂರು ನಗರದ ಹನುಮಂತಪ್ಪ ಸರ್ಕಲ್ ಬಳಿ ಧರ್ಮಸ್ಥಳ ಹೆಸರಿನಲ್ಲಿ ಮಹಾದ್ವಾರ ನಿರ್ಮಾಣ ಮಾಡಲಾಗಿದೆ. ಇತ್ತ ಧಾರವಾಡದಲ್ಲಿ ‘‘ಧರ್ಮದ ಉಳಿವಿಗಾಗಿ ಧರ್ಮ ಯುದ್ಧ’’ ಎಂಬ ಘೋಷವಾಕ್ಯದಡಿ ಬಿಜೆಪಿ ಪ್ರತಿಭಟನೆ ನಡೆಸಿದೆ. ಯೂಟ್ಯೂಬರ್ಗಳ ವಿರುದ್ಧವೂ ಕಠಿಣ ಕ್ರಮಕ್ಕೆ ಪ್ರತಿಭಟನಾಕಾರರು ಆಗ್ರಹಿಸಿದ್ದಾರೆ.
For More Updates Join our WhatsApp Group :