ಬೆಂಗಳೂರು: ರಾಜ್ಯದಲ್ಲಿ ಜೂನ್ 26ರಿಂದ ಮಳೆ ಹೆಚ್ಚುವ ಮುನ್ಸೂಚನೆ ನೀಡಿರುವ ಹವಾಮಾನ ಇಲಾಖೆ 11 ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್ ಘೋಷಿಸಿದೆ. ಕಳೆದ ಎರಡು ದಿನಗಳಿಂದ ರಾಜ್ಯದ ಬಹುತೇಕ ಕಡೆಗಳಲ್ಲಿ ಒಣಹವೆ ಇತ್ತು. ಆದರೆ ಇಂದಿನಿಂದ ವರ್ಷಧಾರೆ ಚುರುಕುಗೊಳ್ಳಲಿದ್ದು, ಜೂನ್ 26ರ ನಂತರ ಮತ್ತಷ್ಟು ಹೆಚ್ಚಾಗುವ ನಿರೀಕ್ಷೆ ಇದೆ ಎಂದು ಇಲಾಖೆ ತಿಳಿಸಿದೆ.

ಯೆಲ್ಲೋ ಅಲರ್ಟ್: ಉತ್ತರ ಕನ್ನಡ, ಉಡುಪಿ, ದಕ್ಷಿಣ ಕನ್ನಡ, ಚಿಕ್ಕಮಗಳೂರು, ಕೊಡಗು, ಶಿವಮೊಗ್ಗ, ಧಾರವಾಡ, ಬೆಳಗಾವಿ, ಕಲಬುರಗಿ, ವಿಜಯಪುರ, ಗದಗ, ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಎಲ್ಲೆಲ್ಲಿ ಮಳೆ ಮುನ್ಸೂಚನೆ?: ರಾಜಧಾನಿ ಬೆಂಗಳೂರಿನಲ್ಲೂ ಮೋಡ ಕವಿದ ವಾತಾವರಣವಿದ್ದು, ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ. ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ಕೋಲಾರ, ತುಮಕೂರು, ಮಂಡ್ಯ, ಮೈಸೂರು, ರಾಮನಗರ, ಚಾಮರಾಜನಗರ, ಚಿತ್ರದುರ್ಗ, ದಾವಣಗೆರೆ ಹಾಗೂ ಹಾಸನ ಜಿಲ್ಲೆಗಳಲ್ಲೂ ಮಳೆಯಾಗಲಿದೆ.
ಭಾನುವಾರ ಶೃಂಗೇರಿ, ಕಳಸ, ಭಾಗಮಂಡಲ, ಗುಬ್ಬಿ, ಕಮ್ಮರಡಿ, ಮಾಣಿ, ಉಪ್ಪಿನಂಗಡಿ, ಮಂಗಳೂರು, ಯಲ್ಲಾಪುರ, ಗೇರುಸೊಪ್ಪ, ಸುಳ್ಯ, ಪುತ್ತೂರು, ಮಂಕಿ, ಬಂಟವಾಳ, ಕುಂದಾಪುರ, ಕ್ಯಾಸಲ್ರಾಕ್, ಸಿದ್ದಾಪುರ, ಮೂಡುಬಿದಿರೆ, ಕೊಪ್ಪ, ಜೋಯ್ಡಾ ಹಾಗೂ ಅಂಕೋಲಾದಲ್ಲಿ ಹೆಚ್ಚಿನ ಮಳೆಯಾಗಿದೆ.
ತಾಪಮಾನ ಹೇಗಿತ್ತು?: ಬೆಂಗಳೂರು ನಗರದಲ್ಲಿ 29.8 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಹಾಗೂ 21.0 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ, ಹೆಚ್ಎಎಲ್ನಲ್ಲಿ 30.0 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಮತ್ತು 20.4 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ, ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 30.6 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಹಾಗೂ 20.6 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ ದಾಖಲಾಗಿದೆ.