ರಾಜ್ಯದ ಕೆಲವು ಕಡೆಗಳಲ್ಲಿ ವರುಣನ ಆರ್ಭಟ ಕಡಿಮೆಯಾಗಿದೆ. ಆದರೆ ಕರಾವಳಿ, ಮಲೆನಾಡು ಹಾಗೂ ಉತ್ತರ ಕರ್ನಾಟಕದ ಕೆಲ ಜಿಲ್ಲೆಗಳಲ್ಲಿ ಜುಲೈ 3 ರಿಂದ ಮಳೆ ಬಿರುಸುಗೊಳ್ಳುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಇದು ಬಿತ್ತನೆ ಮಾಡುವ ಮತ್ತು ಮಾಡಲು ಅಣಿಯಾಗಿರುವ ರೈತರ ಆತಂಕಕ್ಕೆ ಕಾರಣವಾಗಿದೆ.

ಯೆಲ್ಲೋ ಅಲರ್ಟ್ ಘೋಷಿಸಿದ ಹವಾಮಾನ ಇಲಾಖೆ: ಭಾರೀ ಮಳೆ ಮುನ್ಸೂಚನೆ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ, ಶಿವಮೊಗ್ಗ, ಚಿಕ್ಕಮಗಳೂರು, ಹಾಸನ, ಬೆಳಗಾವಿ, ಧಾರವಾಡ, ಹಾವೇರಿ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.
ಈ ಜಿಲ್ಲೆಗಳಲ್ಲಿ ಮೋಡ ಕವಿದ ವಾತಾವರಣ: ಉಳಿದ ಜಿಲ್ಲೆಗಳಲ್ಲಿ ಮುಂದಿನ 6 ದಿನಗಳವರೆಗೆ ಮೋಡ ಕವಿದ ವಾತಾವರಣವಿದ್ದು, ಸಾಧಾರಣ ಮಳೆಯಾಗಲಿದೆ. ಕೆಲ ಪ್ರದೇಶಗಳಲ್ಲಿ ಮಳೆಗಿಂತ ಗಾಳಿ ವೇಗ ಹೆಚ್ಚು ಇರಲಿದೆ ಎಂದು ಇಲಾಖೆ ತಿಳಿಸಿದೆ.
ವಾಡಿಕೆಗಿಂತ ಹೆಚ್ಚು ಸುರಿದ ಮಳೆ: ವಾಡಿಕೆಗೆ ಅನುಸಾರ ಜೂನ್ 1 ರಿಂದ 30 ರವರೆಗೆ ರಾಜ್ಯದಲ್ಲಿ 199 ಮಿಮೀ ಮಳೆಯಾಗಬೇಕಿತ್ತು. ಆದರೆ, 203 ಮಿಮೀ ಸುರಿದಿದೆ. ಕರಾವಳಿ, ಮಲೆನಾಡು ಭಾಗದಲ್ಲಿ ವಾಡಿಕೆಗಿಂತ ಅಧಿಕ ಮಳೆಯಾಗಿದೆ.
ಈ ಜಿಲ್ಲೆಗಳಲ್ಲಿ ವಾಡಿಕೆಗಿಂತ ಕಡಿಮೆ ಮಳೆ; ಕೋಲಾರ, ಚಿಕ್ಕಬಳ್ಳಾಪುರ, ರಾಮನಗರ, ಮಂಡ್ಯ, ಮೈಸೂರು, ತುಮಕೂರು, ಬಳ್ಳಾರಿ, ರಾಯಚೂರು ಮತ್ತು ಕಲಬುರಗಿ ಸೇರಿ ದಕ್ಷಿಣ ಕರ್ನಾಟಕ ವ್ಯಾಪ್ತಿಯ ಜಿಲ್ಲೆಗಳಲ್ಲಿ ವಾಡಿಕೆಗಿಂತ ಕಡಿಮೆ ಮಳೆಯಾಗಲಿದೆ.
ಈ ಪ್ರದೇಶಗಳಲ್ಲಿ ಸುರಿದ ಮಳೆ: ಉಡುಪಿ, ಕೋಟಾ, ಕಾರ್ಕಳ, ಮಂಗಳೂರು, ಆಗುಂಬೆ, ಶೃಂಗೇರಿ, ಬೆಳ್ತಂಗಡಿ, ಕದ್ರಾ, ಧರ್ಮಸ್ಥಳ, ಪಣಂಬೂರು, ಮಾಣಿ, ಬಂಟವಾಳ, ಕುಂದಾಪುರ, ಜೋಯ್ಡಾ, ಗೋಕರ್ಣ, ಕ್ಯಾಸಲ್ರಾಕ್, ಮೂಡುಬಿದಿರೆ, ಲೋಂಡಾ, ಖಾನಾಪುರ, ಸುಳ್ಯ, ಕಳಸ, ಕೊಟ್ಟಿಗೆಹಾರ, ಕೊಪ್ಪ, ಭಾಗಮಂಡಲದಲ್ಲಿ ಮಳೆಯಾಗಿದೆ.
ಬೆಂಗಳೂರಿನಲ್ಲಿ ಮೋಡ ಕವಿದ ವಾತಾವರಣ: ಬೆಂಗಳೂರಿನಲ್ಲಿ ಮೋಡಕವಿದ ವಾತಾವರಣವಿದ್ದು, ಬೆಂಗಳೂರು ನಗರದಲ್ಲಿ 29.9 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 20.3 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ, ಎಚ್ ಎಎಲ್ ನಲ್ಲಿ 30.6 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 19.8 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ ಇರಲಿದೆ. ಇನ್ನು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 30.5 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 19.9 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ ದಾಖಲಾಗಿದೆ.