‘ಸು ಫ್ರಮ್ ಸೋ’ ಚಿತ್ರದ ಅಭೂತಪೂರ್ವ ಯಶಸ್ಸು ರಾಕಿಂಗ್ ಸ್ಟಾರ್ ಯಶ್ ಅವರ ಮಾತಿನ ಸತ್ಯತೆಯನ್ನು ಸಾಬೀತುಪಡಿಸಿದೆ. ಯಶ್ ಅವರು ಒಳ್ಳೆಯ ಕಥಾವಸ್ತುವಿನ ಚಿತ್ರಗಳು ಯಶಸ್ವಿಯಾಗುತ್ತವೆ ಎಂದು ಹೇಳಿದ್ದರು. ‘ಸು ಫ್ರಮ್ ಸೋ’ ಚಿತ್ರದ ಯಶಸ್ಸು ಪ್ರಚಾರಕ್ಕಿಂತ ಉತ್ತಮ ಕಥೆ ಮತ್ತು ನಿರೂಪಣೆ ಮುಖ್ಯ ಎಂಬುದನ್ನು ತೋರಿಸಿದೆ.
ರಾಕಿಂಗ್ ಸ್ಟಾರ್ ಯಶ್ ಅವರು ವೇದಿಕೆ ಏರಿದಾಗ ಸಾಕಷ್ಟು ವಿಷಯಗಳ ಬಗ್ಗೆ ಮಾತನಾಡುತ್ತಾರೆ. ಇದರಲ್ಲಿ ಬಹುತೇಕವು ಅವರ ಅನುಭವದ ಮಾತು. ಇಂಡಸ್ಟ್ರಿಯ ಏಳ್ಗೆ ಬಗೆಗಿನ ಮಾತುಗಳೇ ಆಗಿರುತ್ತವೆ. 2025ರಲ್ಲಿ ರಿಲೀಸ್ ಆದ ಯೋಗರಾಜ್ ಭಟ್ ನಿರ್ದೇಶನದ ‘ಮನದ ಕಡಲು’ ಸಿನಿಮಾದ ಈವೆಂಟ್ಗೆ ಯಶ್ ಅತಿಥಿಯಾಗಿ ತೆರಳಿದ್ದರು. ಈ ವೇದಿಕೆ ಮೇಲೆ ಯಶ್ ಒಂದು ಮಾತನ್ನು ಹೇಳಿದ್ದರು. ರಾಜ್ ಬಿ. ಶೆಟ್ಟಿ ಹಾಗೂ ಜೆಪಿ ತುಮಿನಾಡ ‘ಸು ಫ್ರಮ್ ಸೋ’ ಚಿತ್ರದ ಮೂಲಕ ಇದನ್ನು ನಿಜ ಎಂದು ತೋರಿಸಿದ್ದಾರೆ.
‘ಸು ಫ್ರಮ್ ಸೋ’ ಸಕ್ಸಸ್
ರಾಜ್ ಬಿ. ಶೆಟ್ಟಿ ಮೊದಲಾದವರು ನಿರ್ಮಿಸಿದ, ಜೆಪಿ ತುಮಿನಾಡ ನಿರ್ದೇಶನದ ‘ಸು ಫ್ರಮ್ ಸೋ’ ಸಿನಿಮಾ ಅಭೂತಪೂರ್ವ ಯಶಸ್ಸು ಕಂಡಿದೆ. ಈ ಚಿತ್ರವನ್ನು ಜನರು ಮುಗಿಬಿದ್ದು ವೀಕ್ಷಿಸುತ್ತಿದ್ದಾರೆ. ವಾರದ ದಿನಗಳಲ್ಲೂ ಸಿನಿಮಾಗೆ ಟಿಕೆಟ್ ಸಿಗುತ್ತಿಲ್ಲ. ‘ಜನರು ಥಿಯೇಟರ್ಗೆ ಬರುತ್ತಿಲ್ಲ ಎಂಬ ಸ್ಥಿತಿಯಿಂದ ವಾರದ ದಿನದಲ್ಲೂ ಟಿಕೆಟ್ ಸಿಗುತ್ತಿಲ್ಲ’ ಎಂಬ ಪರಿಸ್ಥಿತಿ ನಿರ್ಮಾಣ ಆಗಿದೆ.
ಸು ಫ್ರಮ್ ಸೋ’ ಚಿತ್ರದಲ್ಲಿ ದೊಡ್ಡ ಪಾತ್ರವರ್ಗ ಇಲ್ಲ. ರಾಜ್ ಬಿ. ಶೆಟ್ಟಿ ಅವರು ಸೆಲೆಬ್ರಿಟಿಗಳಿಂದ ಸಿನಿಮಾ ಪ್ರಚಾರ ಮಾಡಿಸಿಲ್ಲ. ಪೋಸ್ಟರ್ ಅಂಟಿಸಿಲ್ಲ. ಪ್ರೀಮಿಯರ್ ಶೋಗಳನ್ನು ಆಯೋಜನೆ ಮಾಡಿ ಸಿನಿಮಾಗೆ ಬಾಯ್ಮಾತಿನ ಪ್ರಚಾರ ಕೊಟ್ಟರು. ಇದು ಸಿನಿಮಾಗೆ ಸಹಕಾರಿ ಆಗಿದೆ. ಸಿನಿಮಾನ ಜನರು ಮರಳಿ ಮರಳಿ ವೀಕ್ಷಿಸುತ್ತಿದ್ದಾರೆ. ಹಾಸ್ಯ ಮತ್ತು ಭಾವನಾತ್ಮಕ ವಿಚಾರ ಚಿತ್ರದ ಹೈಲೈಟ್. ಈ ಸಿನಿಮಾ ಯಶಸ್ಸಿನ ಬೆನ್ನಲ್ಲೇ ಅನೇಕರು ಯಶ್ ಮಾತನ್ನು ನೆನಪಿಸಿಕೊಂಡಿದ್ದಾರೆ.