ಬೆಂಗಳೂರು: ಸರಣಿ ಅತ್ಯಾಚಾರ ಆರೋಪ ಎದುರಿಸುತ್ತಿರುವ ಜೆಡಿಎಸ್ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧದ ತೀರ್ಪನ್ನು ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಮತ್ತೆರಡು ದಿನ ಮುಂದೂಡಿದೆ. ಮೈಸೂರಿನ ಕೆಆರ್ ನಗರದ ಮಹಿಳೆಯ ಅಪಹರಣ ಮತ್ತು ಅತ್ಯಾಚಾರ ಪ್ರಕರಣದ ವಿಚಾರಣೆ ನಡೆಸಿದ್ದ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ಜಡ್ಜ್ ಸಂತೋಷ್ ಗಜಾನನ ಭಟ್, ಜುಲೈ 29 ರಂದು ವಿಚಾರಣೆ ಪೂರ್ಣಗೊಳಿಸಿ ತೀರ್ಪು ಕಾಯ್ದಿರಿಸಿದ್ದರು. ಇದೀಗ ಆಗಸ್ಟ್ 1ಕ್ಕೆ ತೀರ್ಪನ್ನು ಮುಂದೂಡಿಕೆ ಮಾಡಲಾಗಿದೆ.
ಪ್ರಜ್ವಲ್ ರೇವಣ್ಣ ವಿರುದ್ಧದ ತೀರ್ಪು ಮುಂದೂಡಲು ಕಾರಣವೇನು?
ಪ್ರಜ್ವಲ್ ರೇವಣ್ಣ ವಿರುದ್ಧದ ಅತ್ಯಾಚಾರ ಪ್ರಕರಣದಲ್ಲಿ ಕೆಲವು ಸ್ಪಷ್ಟೀಕರಣಗಳು ಬೇಕಾಗಿವೆ. ಹೀಗಾಗಿ ಇಂದು ತೀರ್ಪು ಪ್ರಕಟಿಸುತ್ತಿಲ್ಲ ಎಂದು ಜಡ್ಜ್ ಸಂತೋಷ್ ಗಜಾನನ ಭಟ್ ತಿಳಿಸಿದರು.
ಕೆಆರ್ ನಗರದ ಮಹಿಳೆಯ ಅಪಹರಣ, ಅತ್ಯಾಚಾರ ಪ್ರಕರಣದ ಹಿನ್ನೆಲೆ
ಮೈಸೂರಿನ ಕೆಆರ್ ನಗರದ ಮಹಿಳೆ ಮೇಲೆ ಅತ್ಯಾಚಾರ ಎಸಗಿದ ಆರೋಪ ಪ್ರಜ್ವಲ್ ರೇವಣ್ಣ ಮೇಲಿದೆ. ಪ್ರಕರಣ ಬೆಳಕಿಗೆ ಬರಬಾರದು ಎಂದು ಮಹಿಳೆಯನ್ನು ಅಪಹರಿಸಿ ಹುಣಸೂರು ಬಳಿಯ ತೋಟದ ಮನೆಯಲ್ಲಿ ಕೂಡಿಹಾಕಲಾಗಿತ್ತು. ಈ ಪ್ರಕರಣದಲ್ಲಿ ಮಾಜಿ ಸಚಿವ ಹೆಚ್ಡಿ ರೇವಣ್ಣ ಮತ್ತು ಭವಾನಿ ರೇವಣ್ಣ ಸೇರಿದಂತೆ ಒಟ್ಟು 9 ಆರೋಪಿಗಳಿದ್ದು, ಈಗಾಗಲೇ ರೇವಣ್ಣ ಹಾಗೂ ಭವಾನಿ ರೇವಣ್ಣಗೆ ಜಾಮೀನು ಸಿಕ್ಕಿದೆ.
ಪ್ರಮುಖ ಆರೋಪಿ ಪ್ರಜ್ವಲ್ ರೇವಣ್ಣ ಮಾತ್ರ ಒಂದು ವರ್ಷದಿಂದ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲೇ ಇದ್ದಾರೆ. ಪ್ರಕರಣ ಸಂಬಂಧ 2024ರ ಮೇ 31ರಂದು ಪ್ರಜ್ವಲ್ ರೇವಣ್ಣ ಅವರನ್ನು ಪೊಲೀಸರು ಬಂಧಿಸಿದ್ದರು.