ಬೆಂಗಳೂರು: ಬಡವರು, ಕಡು ಬಡವರಿಗೆ ಉಚಿತ ಅಕ್ಕಿ, ಗೋಧಿ ಇನ್ನಿತರ ದವಸ ಧಾನ್ಯಗಳು ಸಿಗಬೇಕು. ಜನರಿಗೆ ಆಹಾರ ಸಮಸ್ಯೆ ಆಗದಂತೆ ನೋಡಿಕೊಳ್ಳಲು ಪಡಿತರ ವಿತರಣೆ ಯೋಜನೆ ಜಾರಿಗೆ ತರಲಾಯಿತು. ರಾಜ್ಯದ ನಿವಾಸಿಯಾಗಿದ್ದು, ಅವರು ಯಾವ ಪಡಿತರ ನ್ಯಾಯಯಬೆಲೆ ಅಂಗಡಿಯಲ್ಲೂ ಕಾರ್ಡ್ ತೋರಿಸಿ ಅಕ್ಕಿ ಪಡೆಯಬಹುದಾಗಿದೆ. ಆದರೆ ರಾಜಧಾನಿ ಬೆಂಗಳೂರಿನಲ್ಲಿ ಪಡಿತರ ಚೀಟಿ ಇದ್ದರೂ ಸಹಿತ ಹಲವರಿಗೆ ಅಕ್ಕಿ ನೀಡದೇ ಕಳುಹಿಸುತ್ತಿರುವುದು ಬೆಳಕಿಗೆ ಬಂದಿದೆ.

ಕರ್ನಾಟಕದ ಬೇರೆ ಬೇರೆ ಭಾಗಗಳಿಂದ ರಾಜಧಾನಿ ಬೆಂಗಳೂರಿಗೆ ಉದ್ಯೋಗ ಅರಸಿ ಬರುತ್ತಾರೆ. ತಳ್ಳುಗಾಡಿಯಿಂದ ಹಿಡಿದು ದೊಡ್ಡ ದೊಡ್ಡ ಕಂಪನಿಗಳಲ್ಲಿ ಉದ್ಯೋಗ ಮಾಡುವವರು ಹೊರಗಿನವರೇ ಬಹುತೇಕರಿದ್ದಾರೆ. ಹೀಗೆ ಹೊರಗಿನಿಂದ ಬಂದ ಬಡ ಕಾರ್ಮಿಕರಿಗೆ ಈ ಮೊದಲು ತಾವಿರುವ ಸ್ಥಳದಲ್ಲಿ ನ್ಯಾಯಬೆಲೆ ಅಂಗಡಿಯಲ್ಲಿ ಅಗತ್ಯ ರೇಷನ್ ನೀಡಲಾಗುತ್ತಿತ್ತು. ಆದರೆ ಕಳೆದ ಕೆಲವು ತಿಂಗಳುಗಳಿಂದ ಪಡಿತರ ವಿತರಿಸುತ್ತಿಲ್ಲ ಎಂದು ತಿಳಿದು ಬಂದಿದೆ.
ಕೋರಮಂಗಲ, ಚಾಮರಾಜಪೇಟೆ ಸೇರಿದಂತೆ ಬೇರೆ ಬೇರೆ ಕಡೆಗಳಲ್ಲಿ ಹೊರ ಜಿಲ್ಲೆಗಳ ನಿವಾಸಿಗಳು ಬಿಪಿಎಲ್, ಎಪಿಎಲ್ ಕಾರ್ಡ್ ಹೊಂದಿದ್ದರೂ ಸಹಿತ ಅವರಿಗೆ ರೇಷನ್ ನೀಡುತ್ತಿಲ್ಲ. ನೀವು ನಿಮ್ಮ ನಿಮ್ಮ ಊರುಗಳಲ್ಲೇ ರೇಷನ್ ಪಡೆಯಬೇಕು. ಇಲ್ಲಿ ನಿಮಗೆ ಪಡಿತರ ಸಿಗದು ಎಂದು ನ್ಯಾಯಬೆಲೆ ಅಂಗಡಿ ಡೀಲರ್ಗಳು ಹೇಳುತ್ತಿದ್ದಾರೆ. ಇದರಿಂದ ನಮಗೆ ಸಮಸ್ಯೆ ಆಗುತ್ತಿದೆ ಎಂದು ಕೋರಮಂಗಲ ಖಾಸಗಿ ಕಂಪನಿಯ ಸ್ಟಾಪ್ ವರ್ಕರ್ ಮಾಹಿತಿ ನೀಡಿದ್ದಾರೆ. ಹೊರಗಿನವರಿಗೆ ಕಡಿಮೆ ಅಕ್ಕಿ ವಿತರಣೆ ತುಮಕೂರು, ಹಾಸನ ಭಾಗದ ಸ್ಟಾಫ್ ವರ್ಕರ್ ಈ ಸಂಸ್ಥೆಯಲ್ಲಿ ಸ್ಟಾಪ್ ವರ್ಕರ್ ಆಗಿ ಕೆಲಸ ಮಾಡುತ್ತಿದ್ದಾರೆ. ನಾವು ನಗರದ ಬೇರೆ ಬೇರೆ ಕಡೆಗಳಲ್ಲಿ ವಾಸಿಸುತ್ತಿದ್ದೇವೆ. ಮೊದಲು ಮಾಸಿಕವಾಗಿ ನಮಗೆ ನಿಗದಿತ ಅಕ್ಕಿ ನೀಡಲಾಗುತ್ತಿತ್ತು. ನಾವು ಹೊರಗಿನವರು ಎಂಬ ಕಾರಣಕ್ಕೆ 1-3 ಕೆ.ಜಿ.ವರೆಗೆ ಅಕ್ಕಿಯನ್ನು ಕಡಿಮೆ ವಿತರಣೆ ಮಾಡುತ್ತಾರೆ ಎಂಬ ಆರೋಪ ಕೇಳಿ ಬಂದಿದೆ. ಊರಿಗೆ ಹೋಗಿ ತರಲಾರದೇ ಕಾರ್ಮಿಕರು ಕೊಟ್ಟಷ್ಟೇ ಪಡಿತರ ಪಡೆಯುತ್ತಿದ್ದರು. ಇದೀಗ ಅಕ್ಕಿ ವಿತರಣೆ ಅಸಾಧ್ಯ. ನೀವು ನಿಮ್ಮೂರಿನಲ್ಲೇ ಪಡೆಯಿರಿ ಎಂದು ಹೇಳುತ್ತಿದ್ದಾರೆ.
ವಲಸಿಗರಿಗೆ ಊರಿನಿಂದ ಪಡಿತರ ತರಲು ಸಮಸ್ಯೆ ನಾವು ನಮ್ಮೂರಿನಿಂದ ಅಕ್ಕಿ, ಗೋಧಿ, ದವಸ ಧಾನ್ಯವನ್ನು ತರಲು ಹೋದರೆ ಒಂದು ದಿನ ವೇತನ ಕಳೆದುಕೊಳ್ಳುತ್ತೇವೆ. ಭಾನುವಾರ ಒಂದು ದಿನ ರಜೆ ಇರುತ್ತದೆ. ಅಂದು ನ್ಯಾಯಬೆಲೆ ಅಂಗಡಿ ಕಾರ್ಯಾಚರಣೆ ಅನುಮಾನ. ಒಂದೇ ದಿನಕ್ಕೆ ಹೋಗಿ ಬರವುದು ಕಷ್ಟವಾಗಲಿದೆ ಎಂದು ಕಾರ್ಮಿಕರು ಅಳಲು ತೋಡಿಕೊಂಡಿದ್ದಾರೆ. ಕೋರಮಂಗಲದ ಈ ಕಚೇರಿಯಲ್ಲಿ ಹಾಸನ, ಹಾವೇರಿ, ಹೊಸಪೇಟೆ, ತುಮಕೂರು ಸೇರಿದಂತೆ ಬೇರೆ ಬೇರೆ ಕಡೆಯ ನಿವಾಸಿಗಳು ಕೆಲಸ ಮಾಡುತ್ತಾರೆ. ಬಿಎಪಿಎಲ್, ಎಪಿಎಲ್ ಕಾರ್ಡ್ ಹೊಂದಿದರೂ ಅವರಿಗೆ ಅಕ್ಕಿ ಸಿಗುತ್ತಿಲ್ಲ. ಇದು ಕೆಲವು ಬಡ ಕಾರ್ಮಿಕರ, ವಲಸೆಗಾರರ ಸಮಸ್ಯೆ ಮಾತ್ರವಲ್ಲಾ ಅನೇಕ ಕಡೆಗಳಲ್ಲಿ ಇಂತದ್ದೇ ಪರಿಸ್ಥಿತಿ ಇದೆ ಎನ್ನಲಾಗಿದೆ.
ಪ್ರತಿ ವ್ಯಕ್ತಿಗೆ ತಲಾ ಐದು ಕೆಜಿ ಇತ್ತು. ನಂತರ ರಾಜ್ಯ ಕಾಂಗ್ರೆಸ್ ಸರ್ಕಾರ ಬಂದ ಮೇಲೆ ಅದನ್ನು 10 ಕೆಜಿ ಗೆ ಏರಿಕೆ ಮಾಡಿತು. ಅನ್ನ ಭಾಗ್ಯ ಯೋಜನೆಯಡಿ ಪ್ರತಿ ಕುಟುಂಬದ ಸದಸ್ಯರಿಗೆ ತಲಾ ಒಬ್ಬೊಬ್ಬರಿಗೆ ಹತ್ತು ಕೆಜಿ ಅಕ್ಕಿ ನೀಡುವುದಾಗಿ ತಿಳಿಸಿತು. ನಂತರ ಅಕ್ಕಿ ಅಲಭ್ಯತೆ ಕಾರಣಕ್ಕಾಗಿ ಐದು ಕೆಜಿ ಅಕ್ಕಿ ನೀಡಿ, ಉಳಿದ ಐದು ಕೆಜಿ ಅಕ್ಕಿ ಬದಲಾಗಿ ನಿಮ್ಮ ಖಾತೆಗೆ ಹಣ ನೀಡಲಾಗುವುದು ಎಂದು ತಿಳಿಸಿತು. ನ್ಯಾಯಬೆಲೆ ಅಂಗಡಿ ವಿತರಕ ಹೇಳುವುದೋನು? ಬೆಂಗಳೂರಿನಲ್ಲಿರುವ ಈ ಕಾರ್ಮಿಕರಿಗೆ ಅಕ್ಕಿ ಹಣ ಬರುತ್ತಿದೆ. ಆದರೆ ಅಕ್ಕಿ ಸಿಗುತ್ತಿಲ್ಲ. ಈ ಬಗ್ಗೆ ಚಾಮರಾಜಪೇಟೆ ಡೀಲರ್ ವೊಬ್ಬರು ಪ್ರತಿಕ್ರಿಯಿಸಿದ್ದಾರೆ. ಈ ನ್ಯಾಯಬೆಲೆ ಅಂಗಡಿ ವ್ಯಾಪ್ತಿಯಲ್ಲಿ 500 ಕಾರ್ಡ್ಗಳು ಇದ್ದರೆ, ಅದಕ್ಕಷ್ಟೇ ರೇಷನ್ ಮೂಟೆ ಬರುತ್ತವೆ. ಅದಕ್ಕಿಂತ ಹೆಚ್ಚಿನ ಫಲಾನುಭವಿಗಳಿಗೆ ಹೇಗೆ ಕೊಡಲು ಸಾಧ್ಯ ಎಂದಿದ್ದಾರೆ. ಕಾರ್ಡ್ದಾರ ಪ್ರಮಾಣ ನೋಡಿಕೊಂಡು ಇಂತಿಷ್ಟು ಪ್ರಮಾಣದ ರೇಷನ್ ಪೂರೈಕೆ ಆಗಿರುತ್ತದೆ.
ಬೇರೆ ಬೇರೆ ಕಡೆಗಳಲ್ಲಿ ವಲಸೆ ಕಾರ್ಮಿಕರಿಗೂ ನೀಡುತ್ತಿದ್ದಾರೆ. ಅಕ್ಕಿ ಖಾಲಿ ಆದಾಗ ಅಕ್ಕಿ ಇಲ್ಲ ಎಂದು ಹೇಳುತ್ತೇವೆ. ಅಂತೋದಯ ಕಾರ್ಡ್ದಾರರು ರಾಜ್ಯದ ಬೇರೆ ಬೇರೆ ಕಡೆಗಳಲ್ಲಿ ಅಕ್ಕಿ ಪಡೆಯಲು ಸಾಧ್ಯವಿಲ್ಲ. ಅವರು ತಮ್ಮ ಊರುಗಳಲ್ಲೇ ಪಡೆಯಬೆಕು ಎಂದು ಅವರು ವಿವರಿಸಿದರು. ತಮ್ಮ ಊರು ಬಿಟ್ಟು ಬೇರೆಡೆ ಉದ್ಯೋಗ ಹುಡುಕಿ ಬರುವ ಅರ್ಹ ಫಲಾನುಭವಿಗಳಿಗೆ ರಾಜ್ಯದ ಯಾವುದೇ ನ್ಯಾಯಬೆಲೆ ಅಂಗಡಿಯಲ್ಲೂ ಪಡಿತರ ಸಿಗುವಂತೆ ಮಾಡಬೇಕು ಎಂದು ಕಾರ್ಮಿಕರು, ವಿವಿಧ ಕಂಪನಿ ಸ್ಟಾಪ್ ವರ್ಕರ್ಗಳು ಆಗ್ರಹಿಸಿದ್ದಾರೆ. ಈ ಕುರಿತು ಪ್ರತಿಕ್ರಿಯೆಗಾಗಿ ರಾಜ್ಯ ಆಹಾರ ಮತ್ತು ನಾಗರಿಕ ಸರಬರಾಜು ಎಚ್.ಮುನಿಯಪ್ಪ ಅವರಿಗೆ ಕರೆ ಮಾಡಿದರೂ ಸಂಪರ್ಕ ಸಾಧ್ಯವಾಗಲಿಲ್ಲ.