ಬೆಂಗಳೂರು: ಗಾಂಜಾ ಹಾವಳಿಗೆ ಎಷ್ಟೇ ಕಡಿವಾಣ ಹಾಕಿದ್ರು ಅದರ ರೆಂಬೆ, ಕೊಂಬೆಗಳು ಮಾತ್ರ ಇನ್ನೂ ಯುವ ಪೀಳಿಗೆಯನ್ನ ನಾಶ ಮಾಡೋದನ್ನ ಬಿಟ್ಟಿಲ್ಲ. ಎಷ್ಟೇ ಹದ್ದಿನ ಕಣ್ಣು ಇಟ್ಟರು ಗಾಂಜಾ ವ್ಯಸನಿಗಳು, ಪೆಡ್ಲರ್‌ಗಳು ತಮ್ಮ ಚಾಳಿಯನ್ನು ಮುಂದುವರಿಸಿದ್ದಾರೆ.
ಮನೆಯ ಹೂ ಪಾಟ್‌ನಲ್ಲೇ ಗಾಂಜಾ ಗಿಡ ಬೆಳೆದ ದಂಪತಿ ಸದಾಶಿವನಗರ ಪೊಲೀಸರ ಕೈಗೆ ಲಾಕ್ ಆಗಿದ್ದಾರೆ. 15 ವಿವಿಧ ಮಾದರಿಯ ಹೂವಿನ ಗಿಡಗಳ ಮಧ್ಯೆ ಇವರು ಗಾಂಜಾ ಗಿಡ ಬೆಳೆಸಿದ್ದು ಸಖತ್ತಾಗೇ ಯಾಮಾರಿಸಲು ಪ್ರಯತ್ನಿಸಿದ್ದಾರೆ.
ನೇಪಾಳ ಮೂಲದ ಊರ್ಮಿಳಾ ಹಾಗೂ ಗುರುಂಗ್ ದಂಪತಿ ಸದಾಶಿವನಗರದ MSR ನಗರದಲ್ಲಿ ನೆಲೆಸಿದ್ದರು. ಗಾಂಜಾ ಗಿಡದ ಬಗ್ಗೆ ಚೆನ್ನಾಗಿ ತಿಳಿದಿದ್ದ ಇವರು ಮನೆಯ ಹೂ ತೋಟದಲ್ಲಿ ಗಾಂಜಾ ಗಿಡವನ್ನು ಬೆಳೆಸಿ ಸಿಕ್ಕಿಬಿದ್ದಿದ್ದಾರೆ.
ಇತ್ತೀಚಿಗೆ ಊರ್ಮಿಳಾ ಅವರು ತನ್ನ ಮನೆಯ ಬಾಲ್ಕನಿಯಲ್ಲಿ ರೀಲ್ಸ್ ಮಾಡಿ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದರು. ಆ ರೀಲ್ಸ್‌ನಲ್ಲಿ ಗಾಂಜಾ ಗಿಡ ಕಾಣಿಸಿದ್ದು ವಿಶೇಷವಾಗಿತ್ತು. ಗಾಂಜಾ ಗಿಡ ಇರೋ ಬಗ್ಗೆ ವ್ಯಕ್ತಿಯೊಬ್ಬರು ಪೊಲೀಸರಿಗೆ ಮಾಹಿತಿ ನೀಡಿದ್ದರು.
ರೀಲ್ಸ್ ಲೇಡಿಯ ಮನೆಯಲ್ಲಿ ಗಾಂಜಾ ಗಿಡ ನೋಡಿದ ಪೊಲೀಸರು ನಂತರ ವಿಳಾಸ ಪತ್ತೆ ಹಚ್ಚಿ ಮನೆಗೆ ಹೋಗಿದ್ದಾರೆ. ಈ ವೇಳೆ 15 ವಿವಿಧ ಮಾದರಿಯ ಹೂವಿನ ಗಿಡಗಳ ಮಧ್ಯೆ ಇದ್ದ ಗಾಂಜಾ ಗಿಡ ಪತ್ತೆಯಾಗಿದೆ. ಊರ್ಮಿಳಾ ಮನೆಗೆ ಭೇಟಿ ಕೊಟ್ಟ ಪೊಲೀಸರು, 54 ಗ್ರಾಂ ತೂಕದ ಸೊಪ್ಪು ವಶಕ್ಕೆ ಪಡೆದಿದ್ದಾರೆ. ಇದರ ಜೊತೆಗೆ ಈ ದಂಪತಿ ಮೇಲೆ ಪ್ರಕರಣ ದಾಖಲಿಸಿ ವಿಚಾರಣೆ ನಡೆಸುತ್ತಿದ್ದಾರೆ.