ರೇಣುಕಾ ಸ್ವಾಮಿ ಕೊಲೆ ಆರೋಪಿ ನಟ ದರ್ಶನ್ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದು, ತಮಗೆ ಮಲಗಲು ಹೆಚ್ಚುವರಿ ಹಾಸಿಗೆ ಮತ್ತು ದಿಂಬು ಬೇಕೆಂದು ಮನವಿ ಮಾಡಿದ್ದರು. ಜೈಲಧಿಕಾರಿಗಳು ಹೆಚ್ಚುವರಿ ಹಾಸಿಗೆ-ದಿಂಬು ನೀಡಲು ನಿರಾಕರಿಸಿದ ಕಾರಣ ದರ್ಶನ್ ಕೋರ್ಟ್ ಮೆಟ್ಟಿಲೇರಿದ್ದರು. ಕೆಲ ದಿನಗಳ ಹಿಂದೆ ನಡೆದ ವಾದದ ಸಮಯದಲ್ಲಿ ನಟ ದರ್ಶನ್ ಪರ ವಕೀಲರು, ಜೈಲಧಿಕಾರಿಗಳು ಕೋರ್ಟ್ ಆದೇಶವನ್ನು ಉಲ್ಲಂಘಿಸಿದ್ದಾರೆ. ದರ್ಶನ್ ಅವರಿಗೆ ಹೆಚ್ಚುವರಿ ಹಾಸಿಗೆ, ದಿಂಬು, ಬೆಡ್ಶೀಟ್ ನೀಡಿಲ್ಲ ಎಂದು ವಾದಿಸಿದ್ದರು. ಅರ್ಜಿಯ ಬಗ್ಗೆ ಹಲವು ಬಾರಿ ವಾದ-ಪ್ರತಿವಾದಗಳು ನಡೆದಿದ್ದವು, ಜೈಲಿಗೆ ಕಾನೂನು ಪ್ರಾಧಿಕಾರ ಸದಸ್ಯರು ಭೇಟಿ ನೀಡಿ ಪರಿಶೀಲನೆಯನ್ನೂ ಮಾಡಿದ್ದರು. ವಾದಗಳನ್ನು ಆಲಿಸಿದ್ದ ನ್ಯಾಯಾಧೀಶರು ಆದೇಶವನ್ನು ಕಾಯ್ದಿರಿಸಿದ್ದರು. ಇಂದು (ಅಕ್ಟೊಬರ್ 29) ಆದೇಶ ಹೊರಬಿದ್ದಿದೆ.
ರೇಣುಕಾ ಸ್ವಾಮಿ ಕೊಲೆ ಆರೋಪಿ ದರ್ಶನ್ ಅವರಿಗೆ ತಿಂಗಳಿಗೊಮ್ಮೆ ಹಾಸಿಗೆ, ಬಟ್ಟೆಗಳನ್ನು ಒದಗಿಸುವಂತೆ ನ್ಯಾಯಾಲಯ ಆದೇಶಿಸಿದೆ. ಮತ್ತೊಬ್ಬ ಆರೋಪಿ ಪವಿತ್ರಾ ಅವರಿಗೂ ಇದೇ ಆದೇಶ ಅನ್ವಯ ಆಗಲಿದೆ. ಆದರೆ ದರ್ಶನ್ ಕೇಳಿದಂತೆ ದಿಂಬು, ಕನ್ನಡಿ, ಬಾಚಣಿಗೆ ಹಾಗೂ ಇನ್ನಿತರೆ ಸೌಲಭ್ಯಗಳು ಅವರಿಗೆ ಸಿಕ್ಕಿಲ್ಲ. ಈ ಹಿಂದೆ ದರ್ಶನ್ ಹಾಗೂ ಇತರೆ ಆರೋಪಿಗಳ ಜಾಮೀನು ರದ್ದು ಮಾಡಿದ್ದ ಸುಪ್ರೀಂಕೋರ್ಟ್, ದರ್ಶನ್ ಹಾಗೂ ಇತರೆ ಆರೋಪಿಗಳಿಗೆ ವಿಶೇಷ ಸೌಲಭ್ಯ ನೀಡದಂತೆ ಸೂಚಿಸಿತ್ತು. ಅದರಂತೆ ಜೈಲಧಿಕಾರಿಗಳು ದರ್ಶನ್ಗೆ ಯಾವುದೇ ಸೌಲಭ್ಯಗಳನ್ನು ನೀಡಿರಲಿಲ್ಲ. ಹಾಗಾಗಿ ದರ್ಶನ್ ನ್ಯಾಯಾಲಯದ ಮೊರೆ ಹೋಗಿದ್ದರು. ಆದರೆ ನ್ಯಾಯಾಲಯದ ಈಗಿನ ಆದೇಶದಿಂದ ದರ್ಶನ್ಗೆ ಪೂರ್ಣ ಸಂತುಷ್ಟಿ ಸಿಕ್ಕಂತಿಲ್ಲ.
ತಮ್ಮನ್ನು ಬೇರೆ ಬ್ಯಾರಕ್ಗೆ ಸಹ ಸ್ಥಳಾಂತರ ಮಾಡುವಂತೆಯೂ ಸಹ ದರ್ಶನ್ ಕೇಳಿಕೊಂಡಿದ್ದರು. ಆದರೆ ಈ ಅಧಿಕಾರವನ್ನು ಜೈಲಧಿಕಾರಿಗಳಿಗೆ ನ್ಯಾಯಾಲಯ ನೀಡಿದೆ. ದರ್ಶನ್ ಅನ್ನು ಬೇರೆ ಬ್ಯಾರಕ್ಗೆ ಸ್ಥಳಾಂತರಿಸುವ ನಿರ್ಣಯವನ್ನು ಜೈಲಧಿಕಾರಿಗಳು ಕೈಗೊಳ್ಳಲಿ ಎಂದಿದೆ ನ್ಯಾಯಾಲಯ. ದರ್ಶನ್ ಅವರು ಈಗಿರುವ ಬ್ಯಾರಕ್ನಲ್ಲಿ ಬೆಳಕು ಬರುವುದಿಲ್ಲ. ಬಿಸಿಲು ಕಾಣದೆ ಫಂಗಸ್ ಆಗಿದೆ ಎಂದು ಆರೋಪಿಸಿದ್ದರು. ಆದರೆ ದರ್ಶನ್ ಭದ್ರತೆ ದೃಷ್ಟಿಯಿಂದ ಬೇರೆ ಬ್ಯಾರಕ್ಗೆ ಅವರನ್ನು ಸ್ಥಳಾಂತರ ಮಾಡಿಲ್ಲ ಎಂದು ಜೈಲಧಿಕಾರಿಗಳು ನ್ಯಾಯಾಲಯಕ್ಕೆ ತಿಳಿಸಿದ್ದರು.
For More Updates Join our WhatsApp Group :
