ರೇಣುಕಾಸ್ವಾಮಿ ಪ್ರಕರಣ: ನಟ ದರ್ಶನ್ಗೆ ಮಧ್ಯಂತರ ಜಾಮೀನು

ಬಳ್ಳಾರಿ ಜೈಲಿಗೆ ದರ್ಶನ್ ತೂಗುದೀಪ್ ಕೆಲವೇ ಗಂಟೆಗಳಲ್ಲಿ ಮತ್ತೆ ಶಿಫ್ಟ್....

ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ಗೆ ಹೈಕೋರ್ಟ್ ಆರು ವಾರಗಳ ಕಾಲ ಮಧ್ಯಂತರ ಜಾಮೀನು ಮಂಜೂರು ಮಾಡಿದೆ. ಆರೋಗ್ಯ ತಪಾಸಣೆಗಾಗಿ ಜಾಮೀನು ಕೋರಿ ದರ್ಶನ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ವಿಶ್ವಜಿತ್ ಶೆಟ್ಟಿ ಈ ಆದೇಶ ನೀಡಿದ್ದಾರೆ. ಆದೇಶದ ವಿಸ್ತೃತ ಪ್ರತಿ ಇನ್ನಷ್ಟೇ ಲಭ್ಯವಾಗಬೇಕಿದೆ.

ಈ ಷರತ್ತುಗಳನ್ನು ವಿಧಿಸಿ ಜಾಮೀನು: ದರ್ಶನ್ ಇಚ್ಚಿಸಿದ ಆಸ್ಪತ್ರೆಯಲ್ಲಿ ದಾಖಲಾಗಬಹುದು. ಮುಂದಿನ ಒಂದು ವಾರದಲ್ಲಿ ಚಿಕಿತ್ಸೆಯ ವಿವರವನ್ನು ನ್ಯಾಯಾಲಯಕ್ಕೆ ಸಲ್ಲಿಸಬೇಕು. ಪಾಸ್ ಪೋರ್ಟ್ ಸರೆಂಡರ್ ಮಾಡಬೇಕು. ಸಾಕ್ಷ್ಯಗಳ ನಾಶಕ್ಕೆ ಮುಂದಾಗಬಾರದು. ಸಾಕ್ಷಿಗಳಿಗೆ ಬೆದರಿಕೆ ಹಾಕಬಾರದು. ನ್ಯಾಯಾಲಯ ಸೂಚನೆ ಇಲ್ಲದೇ ವ್ಯಾಪ್ತಿ ಬಿಟ್ಟು ಹೊರಕ್ಕೆ ಹೋಗಬಾರದು ಎಂಬುದಾಗಿ ನಟ ದರ್ಶನ್ಗೆ ಹೈಕೋರ್ಟ್ ಷರತ್ತುಗಳನ್ನು ವಿಧಿಸಿದೆ.

ದರ್ಶನ್ ಪರ ವಕೀಲರು ಮಾಡಿದ್ದ ವಾದವೇನು?: ಅರ್ಜಿ ಸಂಬಂಧ ಈ ಹಿಂದೆ ನಡೆದಿದ್ದ ವಿಚಾರಣೆ ವೇಳೆ ದರ್ಶನ್ ಪರ ವಕೀಲರು, ನಟ ದರ್ಶನ್ಗೆ ಆರೋಗ್ಯ ತೀವ್ರ ಹದಗೆಟ್ಟಿದೆ. ಇದೀಗ ಶಸ್ತ್ರ ಚಿಕಿತ್ಸೆ ನಡೆಯದಿದ್ದರೇ ಪಾರ್ಶ್ವವಾಯುವಿಗೆ ಗುರಿಯಾಗುವ ಸಾಧ್ಯತೆ ಇದೆ. ಈ ಹಿನ್ನೆಲೆ ಮದ್ಯಂತರ ಜಾಮೀನು ನೀಡಬೇಕು ಎಂದು ಕೋರಿದ್ದರು.

ಸರ್ಕಾರಿ ವಕೀಲರು, ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿ ಚಿಕಿತ್ಸೆ ಪಡೆಯಲು ಸೂಕ್ತ ಕಾರಣಗಳನ್ನು ಅರ್ಜಿದಾರರ ನೀಡಿಲ್ಲ. ಹೀಗಾಗಿ ಜಾಮೀನು ನಿರಾಕರಿಸಬೇಕು ಎಂದು ಕೋರಿದ್ದರು

Leave a Reply

Your email address will not be published. Required fields are marked *