ಬಳ್ಳಾರಿ: ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಎ2 ಆರೋಪಿಯಾಗಿ ಬಳ್ಳಾರಿ ಜೈಲಿನಲ್ಲಿರುವ ನಟ ದರ್ಶನ್ಗೆ ರೇಣುಕಾಸ್ವಾಮಿ ಆತ್ಮ ಕಾಡುತ್ತಿದೆಯಂತೆ. ಇದನ್ನು ಸ್ವತಃ ದರ್ಶನ್ ಅವರೇ ಜೈಲು ಅಧಿಕಾರಿಗಳ ಬಳಿ ಪದೇಪದೆ ಹೇಳಿಕೊಳ್ಳುತ್ತಿದ್ದಾರೆಂದು ಜೈಲಿನ ಮೂಲಗಳು ತಿಳಿಸಿವೆ.
ಮೂಲಗಳ ಪ್ರಕಾರ ಪ್ರತೇಕ ಸೆಲ್ನಲ್ಲಿರುವ ನಟ ದರ್ಶನ್ಗೆ ಬೆಳಗಿನ ಜಾವ ಕಿರುಚಾಡುವ ಮತ್ತು ಚೀರಾಡುವ ಶಬ್ಧ ಕೇಳಿಸುತ್ತಿದೆಯಂತೆ. ಅಲ್ಲದೆ, ಮಲಗಿರುವಾಗ ಕನಸಿನಲ್ಲಿಯೂ ರೇಣುಕಾಸ್ವಾಮಿಯ ಮುಖ ಕಾಣಿಸಿಕೊಳ್ಳುತ್ತಿದೆಯಂತೆ. ಇದರಿಂದ ಇಲ್ಲಿ ನನಗೆ ಒಂಟಿಯಾಗಿ ಇರಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ನನ್ನನ್ನು ಬೆಂಗಳೂರು ಜೈಲಿಗೆ ಮತ್ತೆ ಸ್ಥಳಾಂತರ ಮಾಡಿ ಎಂದು ನಟ ದರ್ಶನ್, ಜೈಲು ಅಧಿಕಾರಿಗಳ ಬಳಿ ಮನವಿ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.
ಇನ್ನು ಜೈಲಿನಲ್ಲಿ ನಟ ದರ್ಶನ್ ಅವರಿಗೆ ಆರೋಗ್ಯ ಸಮಸ್ಯೆಗಳು ಕೂಡ ಕಾಡುತ್ತಿವೆ. ತೀವ್ರ ಬೆನ್ನುನೋವಿನಿಂದ ಬಳಲುತ್ತಿದ್ದಾರಂತೆ. ಕೂರಲು ಹಾಗೂ ನಿಲ್ಲಲು ಸಾಧ್ಯವಾಗದೇ ನೋವು ಅನುಭವಿಸುತ್ತಿದ್ದಾರಂತೆ. ನೋವು ನಿವಾರಕ ಮಾತ್ರೆಗಳನ್ನು ನುಂಗಿದರೂ ಕೂಡ ನೋವು ಕಡಿಮೆಯಾಗುತ್ತಿಲ್ಲ ಎಂದು ದರ್ಶನ್ ಹೇಳಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.
ದರ್ಶನ್ ಅವರ ಬೆನ್ನು ನೋವಿಗೆ ಶಸ್ತ್ರಚಿಕಿತ್ಸೆ ಮಾಡಿಸಬೇಕು, ಇಲ್ಲವಾದರೆ ಕಷ್ಟ ಎಂದು ವೈದ್ಯರು ಕೂಡ ಹೇಳಿದ್ದಾರೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲೇ ಚಿಕಿತ್ಸೆ ಪಡೆಯಲು ದರ್ಶನ್ ಒತ್ತಾಯ ಮಾಡುತ್ತಿದ್ದಾರಂತೆ. ಆರೋಗ್ಯದ ಆಧಾರದ ಮೇಲೂ ಜಾಮೀನಿಗೆ ಮನವಿ ಮಾಡುವ ಸಾಧ್ಯತೆಯು ಇದೆ ಎಂದು ತಿಳಿದುಬಂದಿದೆ. ಅಂದಹಾಗೆ ಬೆಂಗಳೂರಿನ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಐಷಾರಾಮಿ ಸೌಲಭ್ಯಗಳು ಸಿಗುತ್ತಿವೆ ಎಂಬ ಆರೋಪ ಕೇಳಿಬಂದ ಬೆನ್ನಲ್ಲೇ ದರ್ಶನ್ ಅವರನ್ನು ಬಳ್ಳಾರಿ ಕೇಂದ್ರ ಕಾರಾಗೃಹಕ್ಕೆ ಸ್ಥಳಾಂತರ ಮಾಡಲಾಗಿದೆ.
ರೇಣುಕಸ್ವಾಮಿ ಕೊಲೆ ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿರುವ ನಟ ದರ್ಶನ್ ಜಾಮೀನು ಅರ್ಜಿ ವಿಚಾರಣೆ ಬೆಂಗಳೂರಿನ 57ನೇ ಸಿಸಿಎಚ್ ಕೋರ್ಟ್ನಲ್ಲಿ ಅ.8ರಂದು ನಡೆಯಲಿದೆ. ರೇಣುಕಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ದರ್ಶನ್ ಪರ ಹಿರಿಯ ವಕೀಲ ಸಿ.ವಿ.ನಾಗೇಶ್ ಎರಡು ದಿನಗಳ ಕಾಲ ಸುದೀರ್ಘವಾದ ವಾದ ಮಂಡಿಸಿದ್ದರು. ಇನ್ನು ಮಂಗಳವಾರ ವಿಚಾರಣೆ ಆರಂಭವಾಗುತ್ತಿದಂತೆ ಎಸ್ಪಿಪಿ ಪ್ರಸನ್ನ ಕುಮಾರ್ ವಾದ ಮಂಡಿಸಲಿದ್ದಾರೆ. ದರ್ಶನ್ ಜಾಮೀನು ಭವಿಷ್ಯ ಏನಾಗಲಿದೆ ಎಂಬ ಕುತೂಹಲ ಮೂಡಿಸಿದೆ. ಈ ಮಧ್ಯೆ ದರ್ಶನ್ ಅಭಿಮಾನಿಗಳು ಸಿ.ವಿ.ನಾಗೇಶ್ ಅವರ ವಾದವನ್ನು ಮಾಧ್ಯಮಗಳಲ್ಲಿ ನೋಡಿ ದರ್ಶನ್ಗೆ ಜಾಮೀನು ಸಿಕ್ಕೆ ಸಿಗುತ್ತದೆ ಎಂಬ ಭರವಸೆಯಲ್ಲಿದ್ದಾರೆ.
ನಾಗೇಶ್ ಅವರು ತಮ್ಮ ವಾದದ ವೇಳೆ ಚಾರ್ಜ್ಶೀಟ್ನಲ್ಲಿ ಉಲ್ಲೇಖಿಸಲಾಗಿರುವ ಅಂಶಗಳಲ್ಲಿ 20 ಅನುಮಾಗಳನ್ನು ವ್ಯಕ್ತಪಡಿಸಿದ್ದಾರೆ. ಆರ್.ಆರ್ ನಗರ ಶೆಡ್ನ ಸೆಕ್ಯುರಿಟಿ ರೂಮ್ನ ಎರಡು ಸಿಸಿ ಕ್ಯಾಮರಾಗಳ ದೃಶ್ಯವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇದನ್ನು ಪಿಎಸ್ಐ ವಿನಯ್ ಹೇಳಿಕೆಯಲ್ಲಿ ಉಲ್ಲೇಖಿಸಲಾಗಿದೆ. ಆದರೆ ಆರೋಪಿಗಳು ಡಿವಿಆರ್ ಸಾಕ್ಷ್ಯಾಧಾರ ನಾಶಪಡಿಸಿದ್ದಾರೆಂದು ಆರೋಪಿಸಲಾಗಿದೆ. ಆದರೆ ಜೂನ್ 9ರಂದೇ ಪಿಎಸ್ಐ ವಿನಯ್ ಇದನ್ನು ಆರೋಪಿ ಎ-14 ಆರೋಪಿ ಆದ ಪ್ರದೂಶ್ಗೆ ಕಳುಹಿಸಿದ್ದಾರೆ. ಇದು ಹೇಗೆ ಸಾಧ್ಯವಾಯಿತು? ಆ ವಿಡಿಯೋ ಡಿಲೀಟ್ ಮಾಡಿದ್ದು ಯಾರು? ಎಂಬುದು ಮಿಲಿಯನ್ ಡಾಲರ್ ಪ್ರಶ್ನೆ ಆಗಿದೆ ಎಂದು ವಾದ ಮಂಡಿಸಿದ್ದರು.
ಪಿಎಸ್ಐ ವಿನಯ್ ಮೊಬೈಲ್ ಅನ್ನು ಏಕೆ ಸೀಜ್ ಮಾಡಿಲ್ಲ? ಅವರ ಮೊಬೈಲ್ನಿಂದ ವಿಡಿಯೋನ ಏಕೆ ರಿಟ್ರೀವ್ ಮಾಡಿಲ್ಲ ಎಂಬ ಪ್ರಶ್ನೆಗೆ ಉತ್ತರವಿಲ್ಲ. ರಕ್ತದ ಕಲೆ ಇರುವ ಎರಡು ಮರದ ಕೊಂಬೆ ವಶಕ್ಕೆ ಪಡೆದಿದ್ದಾರೆ. ಎಫ್ಎಸ್ಎಲ್ ವರದಿಯಲ್ಲಿ ರಕ್ತವೇ ಇಲ್ಲ ಎಂದಿದೆ. ಇಂತಹ ತನಿಖೆ ಆಧಾರದಲ್ಲಿ ಆರೋಪಿಗೆ ಗಲ್ಲು ಶಿಕ್ಷೆ ವಿಧಿಸಲು ಸಾಧ್ಯವೇ ಎಂದು ಮಂಡಿಸಿದ ವಾದದಲ್ಲಿ ಪೊಲೀಸರನ್ನೇ ಟಾರ್ಗೆಟ್ ಮಾಡಿದ್ದರು. ಪೊಲೀಸರ ತನಿಖಾ ವರದಿ ಮಲಗುವಾಗ ಓದಬಹುದಾದ ಅರೇಬಿಯನ್ ನೈಟ್ಸ್ ಕಥೆಯಂತಿದೆ ಎಂದು ವ್ಯಂಗ್ಯವಾಡಿದ್ದರು.