ಬ್ಯಾಲ್ಯ : ಬುಧವಾರ ರಾತ್ರಿ ಸುರಿದ ಮಳೆಗೆ ಪುರವರ ಹೋಬಳಿ ಕೋಡಗದಾಲ ಗ್ರಾಮದ ಕೆರೆ ತುಂಬಿ ಕೋಡಿ ಬಿದ್ದಿದೆ. ಕೋಡಿ ನೀರು ಬ್ಯಾಲ್ಯ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಿಂಗರಗೊಂಡನಹಳ್ಳಿ ಗ್ರಾಮದ ಪಕ್ಕದಲ್ಲಿ ತುಂಬಿ ಹರಿಯುತ್ತಿದೆ. ಇದರಿಂದಾಗಿ ಆಚೆ ದಡದಲ್ಲಿ 10 ಮಂದಿ ವಲಸೆ ಕಾರ್ಮಿಕರು ಸಿಕ್ಕಿಕೊಂಡಿದ್ದರು.
ವಿಷಯ ತಿಳಿದ ಗ್ರಾಮಸ್ಥರು, ಮಧುಗಿರಿ ಅಗ್ನಿಶಾಮಕ ದಳದವರಿಗೆ ಮಾಹಿತಿ ನೀಡಿದ್ದಾರೆ. ಆಗ ತಕ್ಷಣ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳದವರು ಹತ್ತು ಮಂದಿ ವಲಸೆ ಕಾರ್ಮಿಕರನ್ನು ಹಳ್ಳದ ಮೂಲಕ ಹೊರ ಕರೆತಂದು ರಕ್ಷಿಸಿದ್ದಾರೆ. ಅಗ್ನಿಶಾಮಕ ದಳದವರ ಕಾರ್ಯಾಚರಣೆಗೆ ಗ್ರಾಮಸ್ಥರು ಪ್ರಶಂಸಿಸಿದ್ದಾರೆ.
ಅಗ್ನಿ ಶಾಮಕ ಠಾಣಾಧಿಕಾರಿ ಜಿ.ಹನುಮಂತಯ್ಯ, ಪ್ರಧಾನ ಅಗ್ನಿ ಶಾಮಕ ಪಾತಲಿಂಗಪ್ಪ, ಅಗ್ನಿ ಶಾಮಕರುಗಳಾದ ಪ್ರಸನ್ನ, ಶಿವಾನಂದ ನಿಂಗಾಪುರಿ, ಪೈಜಲ್ ಖಾನ್, ಶ್ರೀಕಾಂತ್ ಸತ್ತಿಗೇರಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.
ಗ್ರಾಮದ ಮುಖಂಡರಾದ ನರಸಿಂಹಮೂರ್ತಿ, ಫಯಾಜ್, ಮತೀನ್ ಮುಂತಾದವರು ಕಾರ್ಯಾಚರಣೆಗೆ ಸಹಕರಿಸಿದರು. ಮುಖಂಡ ನರಸಿಂಹಮೂರ್ತಿ ಮಾತನಾಡಿ ಗುರುವಾರ ಬೆಳಗ್ಗೆಯಿಂದ ಸತತವಾಗಿ ಬ್ಯಾಲ್ಯ ಗ್ರಾಮ ಪಂಚಾಯಿತಿ ಪಿ.ಡಿ.ಓಗೆ ಫೋನ್ ಮಾಡುತ್ತಿದ್ದರೂ ರಿಸೀವ್ ಮಾಡಲಿಲ್ಲ. ಆಗ ಮಧುಗಿರಿ ಇ.ಒ ರವರಿಗೆ ಫೋನ್ ಮಾಡಿದಾಗ ತಕ್ಷಣ ಸಂಪರ್ಕಕ್ಕೆ ಸಿಕ್ಕಿದರಲ್ಲದೆ, ಪಿ.ಡಿ.ಓ.ಗೆ ವಿಷಯ ತಿಳಿಸಿದ್ದಾರೆ. ಆ ನಂತರ ಪಿ.ಡಿ.ಓ ನಮಗೆ ಫೋನ್ ಮಾಡಿ ಮಾಹಿತಿ ಪಡೆದುಕೊಂಡರು ಎಂದು ಬೇಸರಿಸಿದರು.