ಕೇಂದ್ರ ಸರ್ಕಾರಿ ನೌಕರರ ನಿವೃತ್ತಿ ವಯಸ್ಸನ್ನು 62 ವರ್ಷಕ್ಕೆ ಹೆಚ್ಚಿಸಲು ಕೇಂದ್ರ ಸಚಿವ ಸಂಪುಟ ಒಪ್ಪಿಗೆ ನೀಡಿದೆ ಎನ್ನುವ ಪೋಸ್ಟ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಎಕ್ಸ್, ವಾಟ್ಸಾಪ್, ಫೇಸ್ಬುಕ್ ಸೇರಿದಂತೆ ಸಾಮಾಜಿಕ ಮಾಧ್ಯಮಗಳಲ್ಲಿ ಆದೇಶ ಪತ್ರ ಎನ್ನಲಾದ ಫೋಟೋವನ್ನು ವ್ಯಾಪಕವಾಗಿ ಶೇರ್ ಮಾಡಲಾಗುತ್ತಿದೆ.
ಆದರೆ ನಿಜಕ್ಕೂ ಕೇಂದ್ರ ಸರ್ಕಾರಿ ನೌಕರರ ನಿವೃತ್ತಿ ವಯಸ್ಸನ್ನು ಹೆಚ್ಚಿಸಲಾಗಿದೆಯಾ? ಏನಿದು ಆದೇಶ? ಇದರಲ್ಲಿ ನಿಜ ಎಷ್ಟಿದೆ ಎನ್ನುವ ಮಾಹಿತಿ ಇಲ್ಲಿದೆ.
ಈಗ ವೈರಲ್ ಆಗುತ್ತಿರುವ ಆದೇಶ ಪತ್ರ ನಕಲಿಯಾಗಿದ್ದು, ಕೇಂದ್ರ ಸರ್ಕಾರ ಅಂತಹ ಯಾವುದೇ ಆದೇಶ ನೀಡಿಲ್ಲ. ಭಾರತ ಸರ್ಕಾರ ಕೇಂದ್ರ ಸರ್ಕಾರಿ ನೌಕರರ ನಿವೃತ್ತಿ ವಯಸ್ಸನ್ನು 62 ವರ್ಷಕ್ಕೆ ಏರಿಕೆ ಮಾಡಿಲ್ಲ ಎಂದು ಕೇಂದ್ರ ಸರ್ಕಾರದ ಪತ್ರಿಕಾ ಮಾಹಿತಿ ಬ್ಯೂರೋ ಸ್ಪಷ್ಟಪಡಿಸಿದೆ. ಕೇಂದ್ರ ಸರ್ಕಾರಿ ನೌಕರರ ನಿವೃತ್ತಿ ವಯಸ್ಸನ್ನು ಏರಿಕೆ ಮಾಡುವ ಯಾವುದೇ ಪ್ರಸ್ತಾವನೆ ಸರ್ಕಾರದ ಮುಂದೆ ಇಲ್ಲ ಎಂದು ಸ್ವತಃ ಕೇಂದ್ರ ಸರ್ಕಾರವೇ ಲೋಕಸಭೆ ದೃಢಪಡಿಸಿದೆ. ಆದ್ದರಿಂದ ಈಗ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೆಯಾಗುತ್ತಿರುವ ಮಾಹಿತಿಯು ಸಂಪೂರ್ಣವಾಗಿ ಸುಳ್ಳಾಗಿದೆ.
ಕೇಂದ್ರ ಸರ್ಕಾರ ನೌಕರರ ನಿವೃತ್ತಿ ವಯಸ್ಸನ್ನು ಹೆಚ್ಚಿಸುವ ಯಾವುದೇ ಪ್ರಸ್ತಾವನೆಯನ್ನು ಮಾಡಿಲ್ಲ. ಕೇಂದ್ರ ಸಚಿವ ಸಂಪುಟ ಅಂತಹ ಯಾವುದೇ ಪ್ರಸ್ತಾವನೆಯನ್ನು ಅನುಮೋದಿಸಿಲ್ಲ. ನಿವೃತ್ತಿ ವಯಸ್ಸು ಏರಿಕೆ ಬಗ್ಗೆ ಸರ್ಕಾರ ಅಧಿಕೃತವಾಗಿ ಎಲ್ಲಿಯೂ ಹೇಳಿಲ್ಲ. ಒಂದು ವೇಳೆ ಸರ್ಕಾರ ಅಂತಹ ಪ್ರಸ್ತಾವನೆ ಮಾಡಿದ್ದರೆ ಅದನ್ನು ಮಾಧ್ಯಮಗಳು ವರದಿ ಮಾಡುತ್ತಿದ್ದವು.
ಸ್ಪಷ್ಟನೆ ಕೊಟ್ಟಿದ್ದ ಸಚಿವ ಜಿತೇಂದ್ರ ಸಿಂಗ್
2023ರ ಆಗಸ್ಟ್ ತಿಂಗಳಿನಲ್ಲಿ ಕೇಂದ್ರ ಸರ್ಕಾರಿ ನೌಕರರ ನಿವೃತ್ತಿ ವಯಸ್ಸನ್ನು 62 ವರ್ಷಕ್ಕೆ ಏರಿಕೆ ಮಾಡಬಹುದು ಎನ್ನುವ ವರದಿಗಳು ಬಂದಿದ್ದವು. ಆಗಸ್ಟ್ 9, 2023ರಲ್ಲಿ ನಿವೃತ್ತಿ ವಯಸ್ಸು ಏರಿಕೆ ಬಗ್ಗೆ ಲೋಕಸಭೆಯಲ್ಲಿ ಕೇಳಿದ ಪ್ರಶ್ನೆಗೆ ಕೇಂದ್ರ ಸಚಿವ ಜಿತೇಂದ್ರ ಸಿಂಗ್, ಅಂತಹ ಯಾವುದೇ ಪ್ರಸ್ತಾವನೆ ಸರ್ಕಾರದ ಮುಂದೆ ಇಲ್ಲ ಎಂದು ಸ್ಪಷ್ಟಪಡಿಸಿದ್ದರು.
6 ನವೆಂಬರ್ 2024ರಂದು ನಡೆದ ಇತ್ತೀಚಿನ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ, ಕ್ಯಾಬಿನೆಟ್ ‘ಪಿಎಂ ವಿದ್ಯಾಲಕ್ಷ್ಮಿ’ ಯೋಜನೆ ಜಾರಿ ಮಾಡಲು ಅನುಮೋದನೆ ನೀಡಲಾಗಿದೆ. ಇದು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಹಣಕಾಸಿನ ನೆರವು ನೀಡಲು ರೂಪಿಸಿದ ಯೋಜನೆಯಾಗಿದೆ. ಕೇಂದ್ರ ರೈಲ್ವೇ ಸಚಿವ ಅಶ್ವಿನಿ ವೈಷ್ಣವ್ ಈ ಯೋಜನೆ ಬಗ್ಗೆ ಮಾಹಿತಿ ನೀಡಿದ್ದರು.
ಕೇಂದ್ರ ಸರ್ಕಾರಿ ನೌಕರರ ನಿವೃತ್ತಿ ವಯಸ್ಸನ್ನು 62ಕ್ಕೆ ಹೆಚ್ಚಿಸುವ ಕುರಿತು 7ನೇ ಕೇಂದ್ರ ವೇತನ ಆಯೋಗ (ಸಿಪಿಸಿ) ಯಾವುದೇ ಶಿಫಾರಸ್ಸು ಮಾಡಿಲ್ಲ. 5 ನೇ ಕೇಂದ್ರ ವೇತನ ಆಯೋಗವು (CPC) ಕೇಂದ್ರ ಸರ್ಕಾರಿ ನೌಕರರ ನಿವೃತ್ತಿ ವಯಸ್ಸನ್ನು 58 ರಿಂದ 60 ಕ್ಕೆ ಏರಿಸಲು ಶಿಫಾರಸು ಮಾಡಿತ್ತು, ನಿವೃತ್ತಿ ವಯಸ್ಸು ಗರಿಷ್ಠ 60 ವರ್ಷ ಮೀರಬಾರದು ಎಂದು ಹೇಳಿದೆ.