ವಿಮರ್ಶೆ || ಮಾದಕ ದ್ರವ್ಯಗಳ ಸುಳಿಯಲ್ಲಿ ವಿದ್ಯಾರ್ಥಿ ಸಮೂಹ

ವಿಮರ್ಶೆ || ಮಾದಕ ದ್ರವ್ಯಗಳ ಸುಳಿಯಲ್ಲಿ ವಿದ್ಯಾರ್ಥಿ ಸಮೂಹ

ಬರಹ  : ಸಾ.ಚಿ.ರಾಜಕುಮಾರ, ತುಮಕೂರು

ಇದೊಂದು ಆತಂಕ ತರುವ ವಿಷಯ. ಜನಸಾಮಾನ್ಯರಿಗೆ ಇಂತಹ ವಿಷಯಗಳೆಲ್ಲಾ ಗೊತ್ತಾಗಲಿಕ್ಕೆ ಸಾಧ್ಯವಿಲ್ಲ. ನಗರ ಪ್ರದೇಶದಲ್ಲಿ ವಾಸಿಸುವವರಿಗೆ, ಮಾದಕ ದ್ರವ್ಯದ ಜಾಲದಲ್ಲಿ ಸಿಲುಕಿದವರಿಗೆ, ಮಕ್ಕಳು ಬಲಿಯಾಗುವ ಪೊàಷಕರಿಗಷ್ಟೆ ಇದರ ತೀವ್ರತೆಯ ಅರಿವಾಗುತ್ತಿದೆ. ಭಯಾನಕವಾಗಿ ಹಬ್ಬುತ್ತಿರುವ ಈ ಸಾಂಕ್ರಾಮಿಕ ರೋಗಕ್ಕೆ ಕಡಿವಾಣ ಹಾಕದಿದ್ದರೆ ಮುಂದಿನ ದಿನಗಳಲ್ಲಿ ವಿದ್ಯಾರ್ಥಿಗಳ ಪಡೆಯೇ ಇದರೊಳಗೆ ಸಿಲುಕಿ ಬೀಳುವ ಅಪಾಯವಿದೆ.

ಮೊನ್ನೆ ಬುಧವಾರ ಕರ್ನಾಟಕ ರಾಜ್ಯ ಸರ್ಕಾರ ಒಂದು ಮಹತ್ವದ ನಿರ್ಧಾರ ಕೈಗೊಂಡಿದೆ. ಮಾದಕ ವಸ್ತು ಮಾರಾಟ ದಂಧೆಕೋರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಕಾನೂನು ತಿದ್ದುಪಡಿ ತರುವ ಜೊತೆಯಲ್ಲಿಯೇ 7 ಸಚಿವರನ್ನೊಳಗೊಂಡ ಕಾರ್ಯಪಡೆಯೊಂದನ್ನು ರಚಿಸಲು ಮುಂದಾಗಿದೆ. ಮಾದಕ ವಸ್ತು ಪೂರೈಕೆ, ಮಾರಾಟ ದಂಧೆ ಮಟ್ಟಾ ಹಾಕುವುದಕ್ಕೆ ಕಾನೂನಿಗೆ ಮತ್ತಷ್ಟು ಬಲ ತುಂಬಿರುವ ಸರ್ಕಾರ ಇಂತಹ ಪ್ರಕರಣಗಳಲ್ಲಿ ಭಾಗಿಯಾಗುವ ಡ್ರಗ್ಸ್ ಪೆಡ್ಲರ್ಗಳಿಗೆ ಕನಿಷ್ಠ 10 ವರ್ಷಗಳಿಂದ ಗರಿಷ್ಠ ಜೀವಾವಧಿ ಕಾರಾಗೃಹ ಶಿಕ್ಷೆ ವಿಧಿಸುವ ಅವಕಾಶವನ್ನು ಒದಗಿಸಲಾಗಿದೆ. ಪೊಲೀಸ್ ಅಧಿಕಾರಿಗಳಿಗೂ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ.

ಶಾಲಾ ಕಾಲೇಜು ಮಕ್ಕಳು ಮತ್ತು ಯುವ ಜನಾಂಗ ಮಾದಕ ವ್ಯಸನಿಗಳಾಗಿ ಹಾಳಾಗುತ್ತಿರುವುದರ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿರುವ ಸರ್ಕಾರ ಇದಕ್ಕೆ ಕಡಿವಾಣ ಹಾಕಲೇಬೇಕೆಂದು ಕೆಲವು ಕಠಿಣ ಕ್ರಮಗಳನ್ನು ಕೈಗೊಳ್ಳಲು ಮುಂದಾಗಿದೆ. ಶಾಲಾ ಕಾಲೇಜು ಮಕ್ಕಳು ಆರಂಭಿಕ ಹಂತದಲ್ಲಿ ಸಹವಾಸ ದೋಷದಿಂದ ಇಂತಹ ಚಟಗಳಿಗೆ ಬೀಳುತ್ತಾರೆ. ನಂತರ ಇತರೆಯವರನ್ನೂ ಸೆಳೆಯುತ್ತಾರೆ. ಒಮ್ಮೆ ಈ ಜಾಲದೊಳಗೆ ಸಿಲುಕಿಬಿಟ್ಟರೆ ಅಕ್ರಮ ಚಟುವಟಿಕೆಗಳಿಗೂ ಭಾಗಿಯಾಗುತ್ತಾರೆ. ಇತ್ತೀಚಿನ ಕೆಲವು ಘಟನೆಗಳನ್ನು ಗಮನಿಸಿದರೆ ಯುವಕರು ಆಕ್ರೋಶಗೊಳ್ಳುವುದು, ಸ್ಥಿಮಿತ ಕಳೆದು ಕೊಳ್ಳುತ್ತಿರುವುದು, ಕೊಲೆ ಸುಲಿಗೆಗಳಲ್ಲಿ ಭಾಗಿಯಾಗುತ್ತಿರುವುದು, ಸಾಲ ಮಾಡುತ್ತಿರುವುದು, ಪೊàಷಕರನ್ನು ಯಾಮಾರಿಸುತ್ತಿರುವುದು, ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗುತ್ತಿರುವುದು ಇವೆಲ್ಲವೂ ಅತ್ಯಂತ ಗಾಬರಿ ಹುಟ್ಟಿಸುತ್ತಿವೆ.

 ಶಾಲಾ ಕಾಲೇಜುಗಳಲ್ಲಿ  ನೈತಿಕ ಶಿಕ್ಷಣ ಮರೆಯಾಗುತ್ತಿರುವುದು ಒಂದು ಕಡೆ ಆತಂಕಕ್ಕೆ ಕಾರಣವಾದರೆ, ವಿದ್ಯಾರ್ಥಿಗಳ ಚಲನವಲನವನ್ನು ಪೊàಷಕರು ಹಾಗೂ ಶಿಕ್ಷಕರು ಗಮನಿಸದೆ ಇರುವುದು ಮತ್ತೊಂದು ಕಾರಣ. ಪರಿಣಾಮವಾಗಿ ಶಾಲಾ ಹಂತದಲ್ಲಿಯೇ ವಿದ್ಯಾರ್ಥಿಗಳು ದುವ್ಯಸನಗಳಿಗೆ ಬಲಿಯಾಗುತ್ತಿದ್ದಾರೆ.

2020ರ ಆಗಸ್ಟ್ ತಿಂಗಳಿನಲ್ಲಿ ಬೆಂಗಳೂರಿನಲ್ಲಿ ಡ್ರಗ್ಸ್ ಮಾಫಿಯಾ ಪತ್ತೆ ಹಚ್ಚುವ ಒಂದು ಅಭಿಯಾನ ನಡೆಯಿತು. ಇಡೀ ರಾಜ್ಯದಲ್ಲಿ ಈ ಕ್ರಮವನ್ನು ವಿಸ್ತರಿಸುವ ಸಲುವಾಗಿ ಆರಂಭಿಸಿದ ಈ ಅಭಿಯಾನದ ಭಾಗವಾಗಿ ಬೆಂಗಳೂರು ನಗರವನ್ನು ಕೇಂದ್ರೀಕರಿಸಲಾಯಿತು. ಆಗ ಎನ್ ಸಿಬಿ ಅಧಿಕಾರಿಗಳು ವಿವಿಧ ಡ್ರಗ್ಸ್ ಜಾಲ ಭೇದಿಸಲು ಹೊರಟಾಗ ದೊಡ್ಡ ದೊಡ್ಡ ಪ್ರಭಾವಿಗಳೆ ಇದರಲ್ಲಿ ಇರುವುದು ಪತ್ತೆಯಾಯಿತು. ಶಾಲಾ ಕಾಲೇಜುಗಳಲ್ಲಿ ಕಲಿಯುವ ಮಕ್ಕಳ ಪೊàಷಕರು ಉನ್ನತ ದರ್ಜೆಯ ಅಧಿಕಾರಿಗಳಾಗಿರುವುದು ಇಲ್ಲವೆ ರಾಜಕಾರಣಿಗಳಾಗಿರುವುದು ಇವೆಲ್ಲವೂ ಬಯಲಾಯಿತು. ಸಿನಿಮಾ ನಟ, ನಟಿಯರು ಸಹ ಡ್ರಗ್ಸ್ ಜಾಲದಲ್ಲಿ ಸಿಲುಕಿರುವುದು ಅಧಿಕಾರಿಗಳಿಗೆ ಸುಳಿವು ಸಿಕ್ಕಿತು. ಅತ್ಯಂತ ಆತಂಕಕಾರಿ ವಿಷಯವೆಂದರೆ, ಶಾಲಾ ಕಾಲೇಜು ವಿದ್ಯಾರ್ಥಿಗಳು ಯುವಕರು ಮಾದಕ ವ್ಯಸನ ಜಾಲದ ಗ್ರಾಹಕರಾಗಿದ್ದಾರೆ ಎಂಬ ಅಂಶ. 14 ವರ್ಷದ ಶಾಲಾ ವಿದ್ಯಾರ್ಥಿಯೊಬ್ಬನಿಗೆ ಕೊರಿಯರ್ ಮೂಲಕ ಡ್ರಗ್ಸ್ ಪೂರೈಕೆ ಮಾಡಿದ ಪ್ರಕರಣವೊಂದು ಬೆಳಕಿಗೆ ಬಂದಿತ್ತು. ಪೊàಷಕರು ನೀಡಿದ ದೂರಿನ ಮೇರೆಗೆ ಬೆಂಗಳೂರಿನ ಕಬ್ಬನ್ ಪಾರ್ಕ್ ಪೊಲೀಸರು ಡ್ರಗ್ಸ್ ಪೆಡ್ಲರ್ನನ್ನು ಬಂಧಿಸಿದ್ದರು. ಬಂಧಿತ ವ್ಯಕ್ತಿ ಸಾಫ್ಟ್ವೇರ್ ಕಂಪನಿಯೊಂದರಲ್ಲಿ ಉದ್ಯೋಗಿ. ಈತ ಡ್ರಗ್ಸ್ ವ್ಯಸನಿಯಾಗಿದ್ದ. ಶಾಲಾ ಕಾಲೇಜು ವಿದ್ಯಾರ್ಥಿಗಳು ಹಾಗೂ ಐಟಿ ಉದ್ಯೋಗಿಗಳಿಗೆ ಈತ ಡ್ರಗ್ಸ್ ಪೂರೈಕೆ ಮಾಡುತ್ತಿದ್ದ ಎಂಬ ಅಂಶ ತನಿಖೆಯಿಂದ ಬಹಿರಂಗಗೊಂಡಿತ್ತು.

ಇಂತಹ ಹತ್ತಾರು ಉದಾಹರಣೆಗಳು ತನಿಖೆಯ ಸಂದರ್ಭದಲ್ಲಿ ಹೊರಬರುತ್ತವೆ. ಉದ್ಯೋಗಿಗಳು ಈ ಜಾಲದಲ್ಲಿ ಸಿಲುಕುತಿತರುವುದು ಒಂದು ಕಡೆಯಾದರೆ, ಭವಿಷ್ಯವನ್ನು ರೂಪಿಸಿಕೊಳ್ಳಬೇಕಾದ ಶಾಲಾಕಾಲೇಜು ವಿದ್ಯಾರ್ಥಿಗಳು ಈ ಜಾಲದೊಳಗೆ ಸಿಲುಕುತ್ತಿರುವುದು ಆತಂಕ ಸೃಷ್ಟಿಸುತ್ತಿರುವ ವಿಷಯ.

ಕೆಲವು ಪ್ರಮುಖ ಕಾಲೇಜುಗಳ ಸುತ್ತಮುತ್ತ ಇರುವ ಅಂಗಡಿಗಳಲ್ಲಿ ಡ್ರಗ್ ್ಸ ಪೂರೈಕೆ ವ್ಯವಸ್ಥಿತವಾಗಿ ನಡೆಯುತ್ತಿದೆ ಎಂಬ ಆರೋಪಗಳಿವೆ. ಬಹುತೇಕ ಪ್ರತಿಷ್ಠಿತ ಕಾಲೇಜುಗಳ ಸುತ್ತಮುತ್ತ ಇಂತಹ ಡ್ರಗ್ಸ್ ಪೂರೈಕೆಯಾಗುತ್ತಿರುವ ವದಂತಿಗಳಿವೆ. ಸಂಬಂಧಿಸಿದ ಇಲಾಖೆಗಳು ಜಂಟಿ ಕಾರ್ಯಾಚರಣೆ ಕೈಗೊಂಡರೆ ಇಂತಹ ಜಾಲವನ್ನು ಹತೋಟಿಗೆ ತರಲು ಸಾಧ್ಯವಿದೆ. ಕೇವಲ ಬೆಂಗಳೂರು ಮಾತ್ರವಲ್ಲದೆ, ಜಿಲ್ಲೆ ಜಿಲ್ಲೆಗಳಿಗೂ ವ್ಯಾಪಿಸಿರುವ ಮಾದಕ ವ್ಯಸನ ಜಾಲ ಕ್ರಮೇಣ ತಾಲ್ಲೂಕು ಮಟ್ಟಗಳಿಗೂ ಹರಡುವ ಅಪಾಯವಿದೆ. ಹೆಚ್ಚಾಗಿ ಸಿರಿವಂತರ ಮಕ್ಕಳು ಈ ಡ್ರಗ್ಸ್ ಸೇವನೆಯಲ್ಲಿ ಸಿಲುಕಿದ್ದು, ಇತರೆಯವರನ್ನೂ ತೊಂದರೆಗೆ ಈಡುಮಾಡುವ ಅಪಾಯಕಾರಿ ಪ್ರವೃತ್ತಿಗಳು ಕಂಡುಬರುತ್ತಿವೆ. ರಾಜಧಾನಿಯಲ್ಲಿ ರಾತ್ರಿವೇಳೆ ನಶೆ ಏರಿಸಿಕೊಂಡು ವಾಹನ ಚಲಾಯಿಸುವ, ಕೆಲವರೊಂದಿಗೆ ಅನುಚಿತವಾಗಿ ವರ್ತಿಸುವ ಪ್ರಕರಣಗಳು ವರದಿಯಾಗುತ್ತಲೇ ಇವೆ. ಸಿನಿಮಾ ನಟರು, ರಾಜಕಾರಣಿಗಳ ಮಕ್ಕಳು, ಅಧಿಕಾರಿಗಳ ಮಕ್ಕಳು ಹೀಗೆ ಸಾಲು ಸಾಲು ಪ್ರಕರಣಗಳು ಕಂಡುಬರುತ್ತವೆ. ಮರ್ಯಾದೆ ಹರಾಜಾಗದೆ ಇರಲಿ ಎಂದು ಪೊàಷಕರು ಪ್ರಕರಣಗಳನ್ನು ಮುಚ್ಚಿ ಹಾಕುವ ಪ್ರಯತ್ನ ಮಾಡಬಹುದು. ಆದರೆ ಇದು ಸಮಾಜಕ್ಕೆ ಎಷ್ಟು ಅಪಾಯಕಾರಿ ಎಂಬುದನ್ನು ಇವರೆಲ್ಲ ಚಿಂತಿಸಬೇಕಲ್ಲವೆ?

ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರವು ಕೆಲವು ಕಠಿಣ ಕ್ರಮಗಳನ್ನು ಕೈಗೊಂಡಿರುವುದು ಸ್ವಾಗತಾರ್ಹ. ಶಿಕ್ಷಣ ಸಂಸ್ಥೆಗಳ ನಿಗಾಕ್ಕೆ ವಿದ್ಯಾರ್ಥಿ ಪೊಲೀಸಿಂಗ್ ವ್ಯವಸ್ಥೆ, ಎನ್ಸಿಸಿ, ಎನ್ಎಸ್ಎಸ್ ಘಟಕಗಳನ್ನು ಇದರೊಳಗೆ ಭಾಗಿಯಾಗುವಂತೆ ಮಾಡುವುದು, ಪ್ರತಿ ಇಲಾಖೆ, ಅಧಿಕಾರಿಗಳಿಗೆ ಉತ್ತರದಾಯಿತ್ವ, ವಿದ್ಯಾರ್ಥಿಗಳ ಜಾಗೃತಿಗೆ ಇಲಾಖೆಗಳ ನಡುವೆ ಸಮನ್ವಯ, ಶಿಕ್ಷಣ ಸಂಸ್ಥೆ ಹಾಸ್ಟೆಲ್ ಮತ್ತು ವಸತಿ ನಿಲಯಗಳಲ್ಲಿ ಜಾಗೃತಿಗೆ ಒತ್ತು ನೀಡಿರುವುದು ಶ್ಲಾಘನೀಯ ಸಂಗತಿ.

ಕೆಲವು ಔಷಧಿ ಮಳಿಗೆಗಳಲ್ಲಿಯೂ ಅನಧಿಕೃತವಾಗಿ ಸಿಂಥಟಿಕ್ಸ್ ಡ್ರಗ್ಸ್, ಸೈಕೋಟ್ರೋಪಿಕ್ ಸಬ್ ಸ್ಪೆನ್ಸಸ್ ಮಾರಾಟ ಮಾಡಲಾಗುತ್ತಿದ್ದು, ಇದರ ಬಗ್ಗೆಯೂ ಸರ್ಕಾರದ ಮಟ್ಟದಲ್ಲಿ ಚರ್ಚೆ ನಡೆದಿದೆ. ಇಂತಹ ಮಾರಾಟವನ್ನು ಕಟ್ಟುನಿಟ್ಟಾಗಿ ನಿರ್ಬಂಧಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಮಾದಕ ವಸ್ತುಗಳ ಹಾವಳಿ ಹೆಚ್ಚಾಗಿರುವ ಸೂಕ್ಷ್ಮ ಪ್ರದೇಶಗಳನ್ನು ಗುರುತಿಸಿ ಅವುಗಳ ಮೇಲೆ ತೀವ್ರ ನಿಗಾ ಇಡುವಂತೆಯೂ ಪೊಲೀಸ್ ಇಲಾಖೆಗೆ ಸೂಚಿಸಿದ್ದಾರೆ. ಹಾಸನ ಜಿಲ್ಲೆಯ ಬೇಲೂರು ತಾಲ್ಲೂಕಿನ ಸರ್ಕಾರಿ ವಸತಿ ಶಾಲೆಯ ಹಾಸ್ಟೆನ್ನಲ್ಲಿ ಗಾಂಜಾ, ಸಿಗರೇಟ್, ವೈಟ್ನರ್ ಬಳಸುತ್ತಿರುವ ಬಗ್ಗೆ ಸಿದ್ದರಾಮಯ್ಯ ಕೆಂಡಾಮಂಡಲವಾಗಿದ್ದಾರೆ. ವಸತಿ ಶಾಲೆಗಳಲ್ಲಿ ಮಕ್ಕಳಿಗೆ ಇವೆಲ್ಲ ಹೇಗೆ ಸಿಗುತ್ತಿವೆ ಎಂದು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಹಾಸ್ಟೆಲ್ಗಳಲ್ಲಿ ಈ ರೀತಿಯ ವಸ್ತುಗಳು ಬಳಕೆಯಾದರೆ ಮುಂದೆ ವಿದ್ಯಾರ್ಥಿಗಳ ಭವಿಷ್ಯವೇನು ಎಂಬುದರ ಬಗ್ಗೆ ಚಿಂತಿಸಬೇಕಲ್ಲವೆ?

Leave a Reply

Your email address will not be published. Required fields are marked *