ವಿಮರ್ಶೆ || ಇನ್ನೂ ಬದಲಾಗದ ಬ್ರಿಟಿಷ್ ಮನಸ್ಥಿತಿ : ಎಮರ್ಜೆನ್ಸಿ ಕತೆ ಹೇಳಲು ಏಕೆ ಅವಸರ?

ವಿಮರ್ಶೆ || ಇನ್ನೂ ಬದಲಾಗದ ಬ್ರಿಟಿಷ್ ಮನಸ್ಥಿತಿ : ಎಮರ್ಜೆನ್ಸಿ ಕತೆ ಹೇಳಲು ಏಕೆ ಅವಸರ?

ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹತ್ತಿಕ್ಕುವ ಕೆಲಸ ಪ್ರಜಾಪ್ರಭುತ್ವದಲ್ಲಿ ಒಂದಲ್ಲಾ ಒಂದು ರೀತಿಯಲ್ಲಿ ನಡೆಯುತ್ತಲೇ ಇರುತ್ತದೆ. ದೃಶ್ಯ ಮಾಧ್ಯಮಕ್ಕೆ ಇದು ಬೇಗನೆ ಅನ್ವಯಿಸುತ್ತದೆ  ಎಮರ್ಜೆನ್ಸಿ ಎನ್ನುವ ಹಿಂದಿ ಚಲನಚಿತ್ರ ಈಗ ಸೆನ್ಸಾರ್ ಪ್ರಮಾಣ ಪತ್ರ  ಸಿಗದೆ ತೊಂದರೆಯಲ್ಲಿದೆ. ನಟಿ ಹಾಗೂ ಬಿಜೆಪಿ ಸಂಸದೆ ಕಂಗನಾ ರನೌತ್ ಇಂದಿರಾಗಾಂಧಿ ಪಾತ್ರದಲ್ಲಿ ಅಭಿನಯಿಸಿ, ನಿರ್ದೇಶಿಸಿರುವ ಚಿತ್ರಕ್ಕೆ ಬಿಡುಗಡೆಯ ಭಾಗ್ಯ ದೊರಕಬೇಕಾದರೆ ಚರಿತ್ರೆಯ ಆಧಾರಗಳನ್ನು ನೀಡಲೇ ಬೇಕಾದ ಅನಿವಾರ್ಯತೆಗೆ  ಒಳಗಾಗಿದ್ದಾರೆ.

ದೇಶದಲ್ಲಿ ತುರ್ತು ಪರಿಸ್ಥಿತಿ ಜಾರಿಯಾದ ಸಮಯ, ಅದಕ್ಕೆ ಕಾರಣರಾದ ಅಂದಿನ ಪ್ರಧಾನಿ ಇಂದಿರಾ ಗಾಂಧಿ ಅವರ ಬಗ್ಗೆ ಚಲನಚಿತ್ರ ನಿರ್ಮಿಸುವುದು ಚಿತ್ರರಂಗದಲ್ಲಿ ಕೆಲವರಿಗೆ ಪ್ರಿಯವಾದ ವಸ್ತುವಾಗಿದೆ. ಈ ವಸ್ತುವಿನ ಮೂಲಕ ಕೇಂದ್ರದಲ್ಲಿ ಆಳುವ ಸರ್ಕಾರವನ್ನು ಸಂಪ್ರೀತಗೊಳಿಸಬಹುದು ಎನ್ನುವುದು ಕೆಲವರ ವ್ಯಾವಹಾರಿಕ ಲೆಕ್ಕಾಚಾರವಾಗಿರಬಹುದು. ಕೇಂದ್ರ ಸರ್ಕಾರದ ಧೋರಣೆಗೆ ತಕ್ಕಂತೆ ಸಿನಿಮಾ ನಿರ್ಮಿಸಿದರೆ ಮಾರುಕಟ್ಟೆಗೂ ಅನುಕೂಲ, ಪ್ರಶಸ್ತಿ ಪಡೆಯಲೂ ಅನುಕೂಲ, ರಾಜಕೀಯ ನೇತಾರರ ಹತ್ತಿರಕ್ಕೆ ಹೋಗಲು, ಅವರ ಗಮನ ಸೆಳೆಯಲು ಕೂಡ ಇದನ್ನು ಬಳಸಬಹುದು ಎನ್ನುವುದು ಒಂದು ಲೆಕ್ಕಾಚಾರ. ಆದರೆ ಕೇಂದ್ರದಲ್ಲಿ ಆಳುವ ಪಕ್ಷದ ಸಂಸದೆಯೂ ಆಗಿರುವ ಕಂಗನಾಗೆ ಈ ಓಲೈಕೆ ಅಗತ್ಯವಿರಲಿಲ್ಲ. ಭಾರತದ ಚರಿತ್ರೆಯಲ್ಲಿ ಅತ್ಯಂತ ಶಕ್ತಿಶಾಲಿ ಮಹಿಳೆ ಎಂದು ಪರಿಗಣಿಸಲಾಗಿರುವ ಅಂದಿನ ಪ್ರಧಾನಿ ಇಂದಿರಾಗಾಂಧಿ ಅವರ ಪಾತ್ರದಲ್ಲಿ ಸ್ವತಃ ಕಂಗನಾ ಅವರೇ ಕಾಣಿಸಿಕೊಂಡಿದ್ದಾರೆ.

ಅವರೇ ನಿರ್ದೇಶನಕ್ಕೂ ಮುಂದಾಗಿದ್ದಾರೆ. ಎಲ್ಲವೂ ವ್ಯವಸ್ಥಿತವಾಗಿಯೇ ನಡೆದಿದ್ದರೆ ಸೆಪ್ಟೆಂಬರ್ 6 ರಂದೇ ಎಮರ್ಜೆನ್ಸಿ ಬಿಡುಗಡೆಯಾಗಬೇಕಿತ್ತು. ಆದರೆ ಕೇಂದ್ರ ಸೆನ್ಸಾರ್ ಪ್ರಮಾಣೀಕೃತ ಮಂಡಳಿ ಈ ಚಿತ್ರಕ್ಕೆ ಪ್ರಮಾಣ ಪತ್ರ ನೀಡಲು ಹಿಂದೇಟು ಹಾಕಿದೆ. ಈ ಚಿತ್ರ ನಿರ್ಮಿಸಲು ಮುಂಬೈನ ಮನೆಯನ್ನೂ ಮಾರಿಕೊಂಡದ್ದಾಗಿ ಪರಿತಪಿಸುತ್ತಿರುವ ಕಂಗನಾ, ಮುಂಬೈ ಹೈಕೋರ್ಟಿಗೆ ದೂರು ನೀಡಿದ್ದಾರೆ. ಈ ಸಿನಿಮಾ ಬಿಡುಗಡೆಯಾದರೆ ಸಾರ್ವಜನಿಕ ಸುವ್ಯವಸ್ಥೆಗೆ ಧಕ್ಕೆ ಎದುರಾಗಬಹುದು ಎಂದು ಸೆನ್ಸಾರ್ ಮಂಡಳಿಯ ಪರವಾಗಿ ನ್ಯಾಯಾಲಯಕ್ಕೆ ತಿಳಿಸಲಾಗಿದೆ. ಈ ಕಾರಣದಿಂದ ಸಿನಿಮಾ ಪ್ರದರ್ಶನಕ್ಕೆ ಅವಕಾಶ ನೀಡದಿದ್ದರೆ ಸೃಜನಾತ್ಮಕ ಸ್ವಾತಂತ್ರ್ಯ ವನ್ನು ಹತ್ತಿಕ್ಕಿದಂತಾಗುತ್ತದೆ ಎಂದು ನ್ಯಾಯಾಲಯವು ಸೆನ್ಸಾರ್ ಮಂಡಳಿಗೆ ತಿಳಿಸಿ, ಅಡ್ಡಗೋಡೆ ಮೇಲೆ ದೀಪವಿಟ್ಟಂತೆ ಮಾತನಾಡಬೇಡಿ, ಯಾವ ಕಾರಣಕ್ಕೆ ಅನುಮತಿ ನೀಡುತ್ತಿಲ್ಲ ಎಂದು ಸ್ಪಷ್ಟವಾಗಿ ತಿಳಿಸುವಂತೆ ತಾಕೀತು ಮಾಡಿದೆ. ಚುನಾವಣೆಗಳು ಇಲ್ಲದಿದ್ದರೆ ಕೇಂದ್ರ ಸರ್ಕಾರವೇ ಹಸ್ತಕ್ಷೇಪ ಮಾಡುತ್ತಿತ್ತೇನೋ.

 ವಿಚಲಿತಗೊಂಡಂತೆ ತೋರುವ ಸೆನ್ಸಾರ್ ಮಂಡಳಿ, ಎಮರ್ಜೆನ್ಸಿ ಚಿತ್ರಕ್ಕೆ 13 ಕಟ್ಗಳನ್ನು ನೀಡಿದೆ. ಈ ಸಿನಿಮಾ ಬಗ್ಗೆ ಸಿಖ್ ಸಮುದಾಯದವರು ತೀವ್ರ ಆಕ್ಷೇಪ ವ್ಯಕ್ತ ಪಡಿಸಿ, ದೂರುಗಳನ್ನು ಸಲ್ಲಿಸಿದ್ದಾರೆ. ಇಂದಿರಾಗಾಂಧಿ ಅವರ ಹತ್ಯೆಯ ನಂತರ ನಡೆದ ಗಲಭೆಯಲ್ಲಿ ಸಿಖ್ ಸಮುದಾಯದ ಬಗ್ಗೆ ತಪ್ಪು ಅಭಿಪ್ರಾಯಗಳಿರುವ ದೃಶ್ಯಗಳನ್ನು ತೆಗೆಯುವಂತೆ ಸೂಚನೆ ನೀಡಲಾಗಿದೆ.

ಹಿಂಸೆ ವಿಜೃಂಭಿಸಿರುವ  ಮೂರು ದೃಶ್ಯಗಳನ್ನ ತೆಗೆಯುವಂತೆಯೂ ಸೂಚಿಸಲಾಗಿದೆ. ಖಲಿಸ್ತಾನ್ ಚಳವಳಿಯ ನಾಯಕ ಜರ್ನಲ್ ಸಿಂಗ್ ಬಿಂಡ್ರನ್ ವಾಲೆ ಹಾಗೂ ಸಂಜಯ್ ಗಾಂಧಿ ಅವರ ಮಾತುಕತೆ ಮತ್ತು ಇಂದಿರಾಗಾಂಧಿ ಮತ್ತು ಸೇನಾ ಮುಖ್ಯಸ್ಥರು ಆಪರೇಷನ್ ಬ್ಲೂಸ್ಟಾರ್ ಕಾರ್ಯಾಚರಣೆ ಬಗ್ಗೆ ಮಾತುಕತೆ ನಡೆಸುತ್ತಿರುವ ದೃಶ್ಯಗಳನ್ನು ಕಟ್ ಮಾಡಲು ಸೂಚಿಸಲಾಗಿದೆ.

ಪಂಡಿತ್ ಜವಹರಲಾಲ್ ನೆಹರೂ ಅವರು ಅಸ್ಸಾಂ ಮತ್ತು ಚೀನಾ ಗಡಿ ಕುರಿತಂತೆ ಮಾತನಾಡಿರುವ ವಿಷಯಕ್ಕೆ ಸಂಬಂಧಿಸಿದಂತೆ ಚಾರಿತ್ರಿಕ ಆಧಾರಗಳನ್ನು ಒದಗಿಸುವಂತೆ ನಿರ್ದೇಶಕರಿಗೆ ಸೆನ್ಸಾರ್ ಮಂಡಳಿ ಸೂಚನೆ ನೀಡಿದೆ.

ನಮ್ಮದೇ ಸರ್ಕಾರವಿದೆ ಏನು ಮಾಡಿದರೂ ನಡೆಯುತ್ತದೆ ಎನ್ನುವ ಧೋರಣೆಯಿಂದ ಚಲನಚಿತ್ರ ನಿರ್ಮಿಸಿದರೆ ಇಂತಹ ಆಘಾತಗಳಿಗೂ ಕೆಲವೊಮ್ಮೆ ಒಳಗಾಗಬೇಕಾಗುತ್ತದೆ. 2017 ರಲ್ಲಿ ಮಧುರ್ ಭಂಡಾರಕರ್ ಇಂದು ಸರ್ಕಾರ್ ಎಂಬ ಚಲನಚಿತ್ರ ನಿರ್ಮಿಸಿದರು. ಎಮರ್ಜೆನ್ಸಿಯ ಕತೆ. ಇಂದಿರಾಗಾಂಧಿ ಕತೆ. ಈ ಚಿತ್ರಕ್ಕೂ ಸೆನ್ಸಾರ್ ಮಂಡಳಿ ಹಲವಾರು ಕಟ್ಗಳನ್ನು ನೀಡಿ ಪ್ರದರ್ಶನಕ್ಕೆ ಅವಕಾಶ ನೀಡಿತು. ಈ ಚಿತ್ರದಲ್ಲೂ ಆಕ್ಷೇಪಾರ್ಹ ಸನ್ನಿವೇಶಗಳಿದ್ದು, ಚಿತ್ರ ಪ್ರದರ್ಶನಕ್ಕೆ ತಡೆ ನೀಡಬೇಕೆಂದು ಸಿಖ್ ಸಮುದಾಯದ ಮುಖಂಡರು ಮುಂಬೈ ಹೈಕೋರ್ಟ್ಗೂ, ಸುಪ್ರಿಂಕೋರ್ಟಿಗೂ ಮೊರೆ ಹೋಗಿದ್ದರು. ಆದರೆ ಎಲ್ಲೂ ಅವರಿಗೆ ತಡೆ ಸಿಗಲಿಲ್ಲ. ಚಲನಚಿತ್ರವೂ ಬಾಕ್ಸ್ ಆಫೀಸಿನಲ್ಲಿ ಸುದ್ದಿ ಮಾಡಲಿಲ್ಲ.  2023 ರಲ್ಲೇ ಇಂದಿರಾಸ್ ಎಮರ್ಜೆನ್ಸಿ ಎಂಬ ಸಾಕ್ಷ್ಯಚಿತ್ರವನ್ನು ತುರ್ತು ಪರಿಸ್ಥಿತಿ ಬಗ್ಗೆ ತಯಾರಿಸಲಾಯಿತು ಇದೂ ಸುದ್ದಿ ಮಾಡುವಲ್ಲಿ ವಿಫಲವಾಯಿತು.

1975 ರಲ್ಲಿ ತುರ್ತು ಪರಿಸ್ಥಿತಿ ಸಮಯದಲ್ಲೇ ಈ ರೀತಿಯ ಒಂದು ನಿಷೇಧ ಪ್ರಸಂಗ ನಡೆಯಿತು. ಆ ಸಮಯದಲ್ಲಿ ಆಂಧಿ ಎನ್ನುವ ಹಿಂದಿ ಚಲನಚಿತ್ರವೊಂದು ಬಿಡುಗಡೆಯಾಗಿ ಯಶಸ್ವಿಯಾಗಿ  ಪ್ರದರ್ಶನಗೊಳ್ಳುತ್ತಿತ್ತು. ಈ ಚಿತ್ರದಲ್ಲಿ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಹಾಗೂ ಕಾಂಗ್ರೆಸ್ ಪಕ್ಷದ ಪ್ರತಿಷ್ಠೆಗೆ ಧಕ್ಕೆ ತಂದಿದೆ ಎನ್ನುವ ಕಾರಣ ನೀಡಿ ಚುನಾವಣಾ ಆಯೋಗವೇ ಆಂಧಿ ಚಲನಚಿತ್ರವನ್ನು ನಿಷೇಧಿಸಿತು. ಆ ವೇಳೆಗೆ ಈ ಚಿತ್ರ 24 ವಾರಗಳನ್ನು ಪೂರೈಸಿತ್ತು. ಈ ಚಿತ್ರವನ್ನು ಕಮಲೇಶ್ವರ್ ಅವರ ಕತೆಯನ್ನಾಧರಿಸಿ, ಗುಲ್ಜಾರ್ ನಿರ್ದೇಶಿಸಿದ್ದರು. ಚಿತ್ರದಲ್ಲಿ ಬರುವ ಆರತಿದೇವಿ ಎನ್ನುವ ಪಾತ್ರ ಇಂದಿರಾಗಾಂಧಿ ಅವರನ್ನು ಹೋಲುತ್ತದೆ ಎನ್ನುವುದು ಮೊದಲನೆಯ ಆಪಾದನೆ.ಇಂದಿರಾಗಾಂಧಿ ಅವರದೇ ಆದ ವಿಶೇಷ ಕೇಶಶೈಲಿಯನ್ನು ನಾಯಕಿ ಸುಚಿತ್ರಾ ಸೇನ್ ಅಳವಡಿಸಿಕೊಂಡಿದ್ದರು. ಇಂದಿರಾಗಾಂಧಿ ಅವರು ಸೀರೆ ಉಡುವ ಶೈಲಿ, ಹೆಲಿಕಾಪ್ಟರ್ನಿಂದ ಇಳಿದು ಬರುವಾಗ ನಡೆಯುವ ಗತ್ತು ಮೊದಲಾದ ಶೈಲಿಗಳನ್ನು ಇಲ್ಲಿ ಅಳವಡಿಸಿಕೊಳ್ಳಲಾಗಿತ್ತು. ಬಿಹಾರದ ನಾಯಕಿ ತಾರಕೇಶ್ವರಿ ಸಿನ್ಹ  ಅವರನ್ನೂ ಅನುಕರಣೆ ಮಾಡಿರುವು ಕುರುಹು ಚಿತ್ರದಲ್ಲಿ ಕಾಣುತ್ತಿತ್ತು. 1977 ರಲ್ಲಿ ಕೇಂದ್ರದಲ್ಲಿ ಜನತಾಪಕ್ಷ ಅಧಿಕಾರಕ್ಕೆ ಬಂದ ಕೂಡಲೇ ಆಂಧಿ ಚಲನಚಿತ್ರಕ್ಕೆ ಹೇರಲಾಗಿದ್ದ ನಿಷೇಧವನ್ನು ತೆರವುಗೊಳಿಸಲಾಯಿತು. ಈ ಚಿತ್ರಕ್ಕೂ ತುರ್ತು ಪರಿಸ್ಥಿತಿಗೂ ಸಂಬಂಧವೇ ಇಲ್ಲ. ಆಧುನಿಕ ಭಾರತದ ರಾಜಕಾರಣಿಗಳ ವ್ಯಕ್ತಿತ್ವವನ್ನು ತೋರಿಸುವ ಸಲುವಾಗಿ ಈ ಎರಡೂ ಪಾತ್ರಗಳಿಗೆ ತುಲನೆ ಮಾಡಿರುವುದಾಗಿ ಆಂಧಿ ನಿರ್ದೇಶಕ ಗುಲ್ಜಾರ್ ಹೇಳಿದ್ದಾರೆ.

ಚಲನಚಿತ್ರವೊಂದನ್ನು ನಿಷೇಧಿಸುವುದಾಗಲಿ, ಸೆನ್ಸಾರ್ ಮಂಡಳಿ ಪ್ರಮಾಣ ಪತ್ರ ನೀಡದೆ ಕಾರಣಕೇಳುವುದಾಗಲಿ, ಚಲನಚಿತ್ರ ಪ್ರದರ್ಶನ ನಿಷೇಧಿಸುವಂತೆ ಚಳವಳಿ ನಡೆಸುವುದಾಗಲಿ ಹೊಸ ಬೆಳವಣಿಗೆ ಏನಲ್ಲ. ಚಲನಚಿತ್ರ ಉದಯಿಸಿದ ಕಾಲದಿಂದಲೇ ಈ ನಿಷೇಧ ಪ್ರವೃತ್ತಿ ಆರಂಭವಾಗಿದೆ. ಸತ್ಯವನ್ನು ಸಾಕ್ಷಾತ್ತಾಗಿ, ಪರಿಣಾಮಕಾರಿಯಾಗಿ ತೋರಿಸುವ ಹಾಗೂ ಅದನ್ನು ಪ್ರೇಕ್ಷಕರಿಗೆ ಮನವರಿಕೆ ಮಾಡಿಕೊಟ್ಟು ಸಾಮಾಜಿಕ ಪರಿವರ್ತನೆಗೆ ಹಾದಿಯಾಗಬಲ್ಲಿ ಸಾಧ್ಯತೆಗಳನ್ನು ಈ ಮಾಧ್ಯಮ ಹೊಂದಿದೆ. ಸಿನಿಮಾ ಎಂಬ ಮ್ಯಾಜಿಕ್ಕನ್ನು ಕಂಡು ಹಿಡಿದ ಲೂಮಿಯೇರ್ ಸಹೋದರರು ತಾವೇ ಆವಿಷ್ಕರಿಸಿದ ಕ್ಯಾಮರಾ ಮೂಲಕ ಚಲಿಸುವ ರೈಲು, ಮೃಗಾಲಯದ ಹುಲಿ ಸಿಂಹ, ನೃತ್ಯ, ಜಾತ್ರೆ ಇತ್ಯಾದಿ ದೃಶ್ಯಗಳನ್ನು ಚಿತ್ರೀಕರಿಸಿ ಪ್ರದರ್ಶಿಸುತ್ತಿದ್ದರು.

ಇಂತಹ ಒಂದು ಕಿರುಚಿತ್ರ ವೃತ್ತಿನಿರತ ನರ್ತಕಿಯರೊಂದಿಗೆ ರಾಜಕುಮಾರ ನೆಪೋಲಿಯನ್ ನರ್ತಿಸುವುದಾಗಿತ್ತು. ಈ ಚಿತ್ರ ಪ್ರದರ್ಶನವನ್ನು ನಿಷೇಧಿಸಿದ ಸೋವಿಯತ್ ಸರ್ಕಾರ, ಚಿತ್ರದ ರೀಲುಗಳನ್ನು ಮುಟ್ಟುಗೋಲು ಹಾಕಿಕೊಂಡಿತು. ಅಂದರೆ ಸಿನಿಮಾ ನಿಷೇಧ ಎನ್ನುವುದು ಅದರ ಹುಟ್ಟಿನಿಂದಲೇ ಆರಂಭವಾಗಿದೆ.

 ಬ್ರಿಟನ್ನಲ್ಲಿ 1928 ರಲ್ಲೇ ಲಾ ಕೊಲೈಎತ್ಲಾ ಕ್ಲರ್ಜಿಎನ್ನುವ ಚಲನಚಿತ್ರವನ್ನು ನಿಷೇಧಿಸಲಾಯಿತು. ಪಾದ್ರಿಗಳನ್ನು ಕುರಿತಾದ ಈ ಚಿತ್ರ ನಿಗೂಢವಾಗಿದೆ. ಈ ಚಿತ್ರ ಏನು ಹೇಳುತ್ತಿದೆ ಎಂಬುದೇ ಅರ್ಥವಾಗುವುದಿಲ್ಲ ಅರ್ಥಾನುಸಂಬಂಧವಿಲ್ಲದೆ ಬಾಲಿಶ ಚಿತ್ರ ಎನ್ನುವ ಕಾರಣ ನೀಡಿ ಈ ಚಿತ್ರವನ್ನು ನಿಷೇಧಿಸಲಾಯಿತು. ಸಿನಿಮಾ ಮಾಧ್ಯಮದ ಅರ್ಥಪೂರ್ಣ ಉದ್ದೇಶವನ್ನು ಮರೆತು, ಅದನ್ನು ಪ್ರಚೋದನೆಗೆ, ಧರ್ಮ ರಾಜಕಾರಣಕ್ಕೆ, ಲೈಂಗಿಕ ಅತಿರೇಕಗಳ ಪ್ರದರ್ಶನಕ್ಕೆ ಬಳಸಿಕೊಳ್ಳುವ ಲಂಗು ಲಗಾಮಿಲ್ಲದ ಪ್ರವೃತ್ತಿಯೇ ನಿಷೇಧ ಪ್ರವೃತ್ತಿಗೆ ಕಾರಣವಾಗಿದೆ, 1911 ರ ನಂತರ ಸೆನ್ಸಾರ್ ಸ್ವೀಡನ್ನಲ್ಲಿ ಮೊದಲ  ಬಾರಿಗೆ ಜಾರಿಗೆ ಬರಲು ಇಂತಹ ಚಟುವಟಿಕೆಯೇ ಕಾರಣವಾಯಿತು.

 2023 ರ ಕೇರಳ ಸ್ಟೋರಿ ಎನ್ನುವ ಚಲನಚಿತ್ರ ಕೂಡ ರಾಜಕೀಯ ಕಾರಣಗಳಿಂದಲೇ ವಿವಾದಕ್ಕೆ ಈಡಾಯಿತು. ಈ ಚಿತ್ರದ ಟ್ರೈಲರ್ ಬಿಡುಗಡೆಯಾಗಿದ್ದೇ ತಡ, ಮುಸ್ಲಿಂ ಸಮುದಾಯವನ್ನು ಅವಹೇಳನ ಮಾಡುವ, ಸುಳ್ಳುಗಳೇ ತುಂಬಿರುವ ಆಧಾರರಹಿತ ಕತೆ ಇರುವ ಈ ಚಲನಚಿತ್ರವನ್ನು ನಿಷೇಧಿಸಬೇಕೆಂದು ಕಾಂಗ್ರೆಸ್ ದೂರಿತು. ಕೇರಳದಲ್ಲಿ 32000 ಮಹಿಳೆಯರನ್ನು ಮತಾಂತರಗೊಳಿಸಿ, ಸಿರಿಯಾ, ಇರಾಕ್ ದೇಶಗಳಿಗೆ ಬಲವಂತವಾಗಿ ಕಳುಹಿಸಲಾಗಿದೆ ಎಂದು ಹೇಳುವುದು ಆಧಾರರಹಿತ ಮಾಹಿತಿ ಎಂಬುದು ಕಾಂಗ್ರೆಸ್ ಆರೋಪ. ಸಂಘ ಪರಿವಾರದ ಈ ಹುನ್ನಾರದಿಂದ ಸಮುದಾಯಕ್ಕೂ ಕೇರಳ ರಾಜ್ಯಕ್ಕೂ ಕಳಂಕ ಎಂದು ದೂರಲಾಯಿತು. ಈ ಚಿತ್ರದಲ್ಲಿ ಲವ್ಜಿಹಾದ್, ಹಿಜಾಬ್ ಚರ್ಚೆ ಕೂಡ ಬರುತ್ತದೆ. ಈ ವಿಷಯದಲ್ಲಿ ರಾಜಕೀಯ ದಾಳಗಳು ಹೇಗೆ ಉದುರಿವೆ ಎಂದರೆ ಈ ಚಿತ್ರ ಚುನಾವಣಾ ಆಯೋಗದ ಕಣ್ಣಿಗೂ ಬೀಳದೆ, ದೂರದರ್ಶನ ಚಾನಲ್ನಲ್ಲೇ ಪ್ರಸಾರವಾಗುತ್ತದೆ.

 1973 ರಲ್ಲಿ ಎಂ.ಎಸ್.ಸತ್ಯು ಅವರು ನಿರ್ದೇಶಿಸಿದ ಗರಂಹವಾ ಚಲನಚಿತ್ರವನ್ನು ಸೆನ್ಸಾರ್ನವರು ಎಂಟು ತಿಂಗಳ ಕಾಲ ಅಮಾನತ್ತಿನಲ್ಲಿಟ್ಟಿದ್ದರು.  1963 ರಲ್ಲಿ ಗೋಕುಲ ಶಂಕರ್ ಎನ್ನುವ ಸಿನಿಮಾವನ್ನು ನಾಥೂರಾಂ ಗೋಡ್ಸೆ ಕುರಿತಾದ ಕತೆ ಎನ್ನುವ ಕಾರಣಕ್ಕೆ ನಿಷೇಧಿಸಲಾಯಿತು.

1977 ರಲ್ಲಿ ಕಿಸ್ಸಾ ಕುರ್ಸಿ ಕಾ ಎನ್ನುವ ಚಿತ್ರವನ್ನು ತುರ್ತು ಪರಿಸ್ಥಿತಿ ಕಾಲದಲ್ಲಿ  ಕಾಂಗ್ರೆಸ್ ಸರ್ಕಾರವೇ ನಿಷೇಧಿಸಿತು. ಸೆನ್ಸಾರ್ ಮಂಡಳಿಯವರು ಈ ಚಿತ್ರದ ಪ್ರಿಂಟ್ಗಳನ್ನು ವಶ ಪಡಿಸಿಕೊಂಡಿದ್ದರು. ಈ ಮಾಸ್ಟರ್ ಪ್ರಿಂಟ್ಗಳನ್ನು ಸಂಜಯ್ಗಾಂಧಿ ಬೆಂಬಲಿಗರು ಸುಟ್ಟು ಹಾಕಿದರು. ನಂತರದ ದಿನಗಳಲ್ಲಿ ಈ ಚಿತ್ರವನ್ನು ಬೇರೆ ತಾರಾಗಣದೊಂದಿಗೆ ಮರು ನಿರ್ಮಾಣ ಮಾಡಲಾಯಿತು. ರಾಜೀವ್ ಗಾಂಧಿ ಹತ್ಯೆಗೆ ಸಂಬಂಧಪಟ್ಟಂತೆ ತಯಾರಾದ ಕುಟ್ರ ಪತ್ರಿಕೈ ಎನ್ನುವ ತಮಿಳು ಚಲನಚಿತ್ರವನ್ನು 1993 ರಲ್ಲಿ ನಿಷೇಧಿಸಲಾಯಿತು. ಈ ಚಿತ್ರ ಭಾರೀ ಹೋರಾಟದ ನಂತರ 2007 ರಲ್ಲಿ ಬಿಡುಗಡೆಯಾಯಿತು.  ಸಿಕ್ಕಿಂ (1971), ಪತಿ ಪರಮೇಶ್ವರ್ (1987), ಬ್ಯಾಂಡಿಟ್ ಕ್ವೀನ್ (1994), ಫೈರ್ (1996), ಪಾಂಚ್ (2001) ಇವೆಲ್ಲಾ ಒಂದಲ್ಲಾ ಒಂದು ರಾಜಕೀಯ ಕಾರಣಕ್ಕೆ ನಿಷೇಧಕ್ಕೆ ಒಳಗಾದವು. 2003 ರಲ್ಲಿ 1984 ರ ಸಿಖ್ ವಿರೋಧಿ ಗಲಭೆಗೆ ಸಂಬಂಧಪಟ್ಟ ಕತೆಯಿರುವ ಹವಾಯಿನ್ ನಿಷೇಧಕ್ಕೆ ಒಳಗಾಯಿತು, ಬ್ಲ್ಯಾಕ್ ಫ್ರೈಡೆ, ವಾಟರ್, ಪ್ಯಾಪಿಲೋ ಬುದ್ಧ, ಗುರ್ಜರಿ ಆಂದೋಲನ್ ಈ ಚಿತ್ರಗಳ ಪಟ್ಟಿ ದೊಡ್ಡದೇ ಇದೆ. ದಾ ವಿಂಚಿ ಕೋಡ್ ಎಂಬ ಸಿನಿಮಾಕ್ಕೆ ವಿಶ್ವದಾದ್ಯಂತ ನಿಷೇಧ ಹೇರಿದ್ದು,

ಸುದ್ದಿಯಾಯಿತು.ಡಾನ್ ಬ್ರೌನ್ನ ಅದೇ ಹೆಸರಿನ ಕಾದಂಬರಿಯನ್ನಾಧರಿಸಿದ ಚಿತ್ರ. ಪ್ರಸಿದ್ಧ ಕಲಾವಿದ ಲಿಯೋನಾರ್ಡೋ ಡಾ ವಿಂಚಿ ಬರೆದ ಲಾಸ್ಟ್ ಸಪ್ಪರ್ ಕೃತಿಯೇ ಕಾದಂಬರಿಗೆ ಮೂಲ ಪ್ರೇರಣೆ. ಏಸು ಮ್ಯಾಗ್ದಲೀನಾ ಎಂಬುವವಳನ್ನು ಮದುವೆಯಾಗಿದ್ದ. ಅವರಿಗೊಬ್ಬ ಮಗನೂ ಇದ್ದ ಎಂಬುದು ರೋಚಕ ರಹಸ್ಯ. ವಿಂಚಿಯ ಕಗ್ಗಂಟಾದ ಸಮಸ್ಯೆಯನ್ನು ಬಿಡಿಸಿದಾಗ ಹೊರಬೀಳುವ ಇಂತಹ ರಹಸ್ಯಗಳು, ಏಸು, ಮ್ಯಾಗ್ದಲೀನಾಳ ವಂಶಸ್ಥರು ಇನ್ನೂ ಬದುಕಿರುವ ಸುಳಿವು ನೀಡುತ್ತದೆ. ವ್ಯಾಟಿಕನ್ ಮಾಫಿಯಾಗಳು ಇಂತಹ ರಹಸ್ಯಗಳು ಹೊರಬರದಂತೆ ಹದ್ದುಗಣ್ಣಿಟ್ಟಿವೆ. ವಿಶ್ವದಾದ್ಯಂತ ಪಾದ್ರಿಗಳು ಈ ಸಿನಿಮಾವನ್ನು ನಿಷೇಧಿಸಬೇಕೆಂದು ಒತ್ತಾಯಿಸಿದ್ದಾರೆ.  ಮುಸ್ಲಿಂ ಮೂಲಭೂತವಾದಿಗಳು ಸೆಟಾನಿಕ್ ವರ್ಸಸ್ ಕೃತಿಯನ್ನೇ ನಿಷೇಧಿಸಬೇಕೆಂದು ಹಠ ಹಿಡಿದಿದ್ದರು. ಈಜಿಪ್ಟ್ನಲ್ಲಿ ಯೆಹೂದ್ಯರು ಅಭಿನಯಿಸಿದ ಚಲನಚಿತ್ರಗಳನ್ನು ನಿಷೇಧಿಸಲಾಗಿದೆ.

 ಧರ್ಮಕಾರಣಕ್ಕೆ ಚಲನಚಿತ್ರವೊಂದನ್ನು ನಿಷೇಧಿಸುವ ಕ್ರಿಯೆ ಇರುವಂತೆಯೇ ರಾಜಕಾರಣಕ್ಕೂ ನಿಷೇಧ ಹೇರುವ ಸಂಪ್ರದಾಯ ಹಿಂದಿನಿಂದಲೂ ಇದೆ. ಸ್ವಾತಂತ್ರ್ಯ ಪೂರ್ವದಲ್ಲಿ ಸೆನ್ಸಾರ್ ಆಕ್ಷೇಪ ಮೂಢನಂಬಿಕೆ ಬಿತ್ತುವ  ಚಿತ್ರಗಳ ಮೇಲಿತ್ತು. 1942 ರ ನಂತರ ಯಾವುದೇ ಭಾರತೀಯ ಚಲನಚಿತ್ರಗಳಲ್ಲಿ ಗಾಂಧೀಜಿ ಚಿತ್ರವನ್ನು ತೋರಿಸುವುದನ್ನು ನಿಷೇಧಿಸಲಾಗಿತ್ತು. ನೆಹರೂ, ಚರಕ ಹೀಗೆ ಸ್ವಾತಂತ್ರ್ಯ ಹೋರಾಟ ದೃಶ್ಯಗಳನ್ನು ಸೆನ್ಸಾರ್ ಮಂಡಳಿ ಗಂಭೀರವಾಗಿ ಪರಿಗಣಿಸಿ ಕತ್ತರಿಸಿ ಹಾಕುತ್ತಿತ್ತು. ಆ ರೀತಿಯ ಮನೋಭಾವವಿರುವ ಬ್ರಿಟಿಷ್ ಮನಸ್ಥಿತಿ ನಮ್ಮಲ್ಲಿ ಇನ್ನೂ ಬದಲಾಗಿಲ್ಲ ಎನ್ನವುದು ಎಮರ್ಜೆನ್ಸಿ ಚಿತ್ರವನ್ನು ಸೆನ್ಸಾರ್ ಮಂಡಳಿ ಹಿಡಿದಿಟ್ಟುಕೊಂಡಿರುವ ರೀತಿಯಿಂದಲೇ ಗೊತ್ತಾಗುತ್ತದೆ.

Leave a Reply

Your email address will not be published. Required fields are marked *