ವಿಮರ್ಶೆ || ತಿಮ್ಮಪ್ಪನ ಸನ್ನಿಧಿಯಲ್ಲಿ ಲಡ್ಡು ಲಡಾಯಿ

ವಿಮರ್ಶೆ || ತಿಮ್ಮಪ್ಪನ ಸನ್ನಿಧಿಯಲ್ಲಿ ಲಡ್ಡು ಲಡಾಯಿ

ಬರಹ : ಡಾ. ಎಂ.ಎಸ್.ಮಣಿ, ಹಿರಿಯ ಪತ್ರಕರ್ತರು

ಇವತ್ತು ದೃಶ್ಯ, ಮುದ್ರಣ ಮತ್ತು ಸಾಮಾಜಿಕ ಮಾಧ್ಯಮಗಳೆಲ್ಲವೂ ಸಂಘರ್ಷ,  ಹಿಂಸೆ, ಯುದ್ಧ, ರಕ್ತಪಾತ, ಧರ್ಮ, ಜಾತೀಯತೆ, ವಿನಾಶ ಮತ್ತು ಮೌಢ್ಯಗಳಗಳ ಸುದ್ದಿಗಳನ್ನಷ್ಟೆ ವೈಭವೀಕರಿಸಿ ಪಸರಿಸುತ್ತಿವೆ .  ಮನುಷ್ಯ ಜೀವನ ನಷ್ಟದ ಬಗ್ಗೆ,  ಹಸಿವಿನ ಬಗ್ಗೆ, ಅಸ್ಪೃಶ್ಯತೆ ಬಗ್ಗೆ,  ಮಹಿಳಾ ಸಂಕುಲದ ಮೇಲಾಗುತ್ತಿರುವ ದೌರ್ಜನ್ಯಗಳ ಕುರಿತಾಗಲಿ, ಲಿಂಗ, ವರ್ಣ ತಾರತಮ್ಯದ ಬಗ್ಗೆಯಾಗಲಿ  ನೈಜ ಸುದ್ದಿ  ಬಿತ್ತರಿಸುತ್ತಿಲ್ಲ.

ಒಂದೊಮ್ಮೆ ಬಿತ್ತರಿಸಿದರೂ, ಟಿಆರ್ ಪಿ ತಂದು ಕೊಡುವಂತಿರಬೇಕು ಅದು ಹೀಗಾಗಿಯೇ ದೌರ್ಜನ್ಯದ ಚಟುವಟಿಕೆಗಳು ನಮ್ಮೆಲ್ಲರ ಜೀವನದ ಮೇಲೆ ಮಾತ್ರವಲ್ಲದೆ, ನಮ್ಮ ಆರ್ಥಿಕ ಪ್ರಗತಿಯ ಮೇಲೆಯೂ ಗಂಭೀರವಾದ ಹಾನಿಯನ್ನುಂಟು ಮಾಡುತ್ತಿದೆ. ಅಯೋಧ್ಯೆಯಲ್ಲಿ ರಾಮದೇಗುಲ ಎದ್ದ ನಂತರ,  ಕೋಮು ಗಲಭೆಗಳಿಲ್ಲದೆ “ಸಹಬಾಳ್ವೆಯ ಭಾರತ’ ಅಂದರೆ ಬುದ್ಧ ಭಾರತದ ನಿರ್ಮಾಣವಾಗುತ್ತದೆ.

“ಶಾಂತಿಯುತ ಸಹಬಾಳ್ವೆ’ಯ ಭಾರತವನ್ನು ಕಾಣಬಹುದೆಂದು ಕಲ್ಪಿಸಿಕೊಂಡಿದ್ದೆ. ಬುದ್ಧ, ಬಸವ, ಕನಕ ,ನಾರಾಯಣ ಗುರು ಅವರ ಸಂದೇಶಗಳ ಮೇಲೆ ಪ್ರೀತಿಯ ಸೇತುವೆಗಳನ್ನು ನಿರ್ಮಿಸುವ ಬದಲು, ಧಾರ್ಮಿಕ ವಿಭಜನೆಯ ಗೋಡೆಗಳನ್ನು  ಲಡ್ಡು ಗಳೆಂಬ ಇಟ್ಟಿಗೆಗಳ ಮೂಲಕ ಕಟ್ಟಲಾಗುತ್ತಿದೆ. ಸದ್ಯ ಬೆಳೆಯುತ್ತಿರುವ ಧಾರ್ಮಿಕ ದ್ವೇಷ ಮತ್ತು ಧಾರ್ಮಿಕ ಹಗೆತನ ಬುದ್ಧನ ನೆಲವನ್ನು ಛಿದ್ರಗೊಳಿಸಬಿಡಲಿದೆಯೇ  ಎಂಬ ಭೀತಿಯೂ ಕಾಡುತ್ತಿದೆ. ಇವತ್ತಿನ ಸನ್ನಿವೇಶ ಕಂಡಾಗ ನಮ್ಮ  ದೇಶ ಏಕೆ ಇಷ್ಟೊಂದು  ಕೋಮು ಕಲಹ, ಅಸುರಕ್ಷಿತ, ಶಾಂತಿ ರಹಿತ,  ಸ್ವಜನಪಕ್ಷಪಾತ, ಭ್ರಷ್ಟಾಚಾರ ಪೀಡಿತವಾಗಿದೆ ಎಂಬ ಪ್ರಶ್ನೆಗಳು ಎಲ್ಲರನ್ನೂ ಕಾಡದೆ ಇರದು. 

ನಮ್ಮ ದೇಶದ ಆಡಳಿತಗಾರರಲ್ಲೊಂದು  ಮನವಿ ಇದೆ. ಅದು ತಾವುಗಳೆಲ್ಲರೂ ವಿಶ್ವಶಾಂತಿ ಗಾಗಿ ಶ್ರಮಿಸುವ ಮೊದಲು, ವಿಶ್ವ ವೇದಿಕೆಗಳಲ್ಲಿ ಬುದ್ಧನ ನೆಲದ ಪ್ರತಿನಿಧಿ ಎಂದು ಹೆಮ್ಮೆಯಿಂದ ಬೀಗುವ ಮೊದಲು, ನಮ್ಮೊಳಗೆ ಶಾಂತಿ ಸ್ಥಾಪನೆಗೆ ಮುಂದಾಗಿ ಬಹುಶಃ ಇವನ್ನೇ ವೇದಗಳು ಹೇಳುತ್ತವೆ. ಇದನ್ನೇಕೆ ಹೇಳುತ್ತಿರುವೆನೆಂದರೆ ,  ಲಡ್ಡು ತಯಾರಿಸಲು ಪ್ರಾಣಿಗಳ ಕೊಬ್ಬು ಬಳಸಲಾಗಿದೆ. ಇದಕ್ಕಾಗಿ ರಾಷ್ಟ್ರಮಟ್ಟದಲ್ಲಿ ಸನಾತನ ಧರ್ಮ ರಕ್ಷಾ ಮಂಡಳಿ  ರಚಿಸಬೇಕೆಂಬ ಆಂಧ್ರ ಉಪಮುಖ್ಯಮಂತ್ರಿ ಪವನ್ ಕಲ್ಯಾಣ್ ಹೇಳಿಕೆಯು ಮತ್ತೊಂದು ಹೊಸ ವಿವಾದವನ್ನು ಹುಟ್ಟಿ ಹಾಕಿ ಬಿಟ್ಟಿದೆ. ಇದು  ಕೋಮು ಉದ್ವಿಗ್ನತೆಗೆ ಬಹುದೊಡ್ಡ ಕಾರಣವಾಗುವ ಸಾಧ್ಯತೆಗಳಿವೆ. 

ಇದರ ಮೂಲಕ ವಿವಾದ ಗಡಿ, ಭಾಷೆಗಳನ್ನು ದಾಟಿ ದೇಶದ ಉದ್ದಗಲ ಪಸರಿಸುವ ಅಂದಾಜಿದೆ.ಸನಾತನ ವಿರೋಧಿ ಶಕ್ತಿಗಳನ್ನು  ಹಣಿಯುವ ಎಲ್ಲಾ ಸಾಧ್ಯತೆಗಳು ಹೆಚ್ಚಾಗಿವೆ. ಆಡಳಿತದ 100 ದಿನಗಳ ವೈಫಲ್ಯ ಮರೆಮಾಚಲು ಇಂತಹದ್ದೊಂದು ವಿವಾದವನ್ನು ತೇಲಿ ಬಿಡಲಾಗಿದೆ ಎಂಬುದು  ಸ್ಥಳೀಯರ ಅಂಬೋಣ . ಆದರೆ ದೇಶದ ಉದ್ದಗಲ ಹಿಂದೂ ಬಲ  ಹೆಚ್ಚಿಸಿಕೊಳ್ಳಲು  ಲಡ್ಡು ಒಂದು ಹವಿಸ್ಸಾಗಿಸುವ ಸಾಧ್ಯತೆಗಳನ್ನು ತಳ್ಳಿಹಾಕುವಂತಿಲ್ಲ.

 ಇದುವರೆಗೂ ಮೌನವಾಗಿದ್ದ ವಿಶ್ವ ಹಿಂದೂ ಪರಿಷತ್ ದಿಢೀರನೆ  ಸಭೆಯನ್ನು ನಡೆಸುವ ದುದ್ದಿ ದೊಡ್ಡದಾಗಿತ್ತು. ದೇಶದ ಪ್ರತಿಯೊಬ್ಬ ಹಿಂದೂಗಳ ನರ ನಾಡಿಗಳಲ್ಲಿ ಲಡ್ಡು ಮೂಡಿಸುವ ಕಿಚ್ಚು ಬಲು ದೊಡ್ಡದೆಂಬ ಅಂದಾಜನ್ನು ಪ್ರಕಾಶ್ ರಾಜ್ ಅವರಂತಹ  ನಟರು ಗುರುತಿಸಿ ಆತಂಕ ವ್ಯಕ್ತಪಡಿಸುತ್ತಿದ್ದಾರೆ. ಜೊತೆಗೆ ಪವನ್ ಅವರ ಅಭಿಪ್ರಾಯವನ್ನು ತೀವ್ರವಾಗಿ ಟೀಕಿಸುತ್ತಿದ್ದಾರೆ. ಪ್ರಾದೇಶಿಕ ಸಮಸ್ಯೆಯನ್ನು ರಾಷ್ಟ್ರೀಯ ವಿವಾದವನ್ನಾಗಿಸುತ್ತಿದ್ದಾರೆಂದು ಆಪಾದಿಸಿದ್ದಾರೆ. ಕೋಮು ಉದ್ವಿಗ್ನತೆಯನ್ನು ಹೆಚ್ಚಿಸುವ ಬದಲು ಸ್ಥಳೀಯವಾಗಿ ತನಿಖೆಗೊಳ ಪಡಿಸಲು ಸಲಹೆಯನ್ನು ನೀಡಿದ್ದಾರೆ. ತಪ್ಪಿತಸ್ಥರು ಕಂಡು ಬಂದರೆ,  ಕಠಿಣ ಕ್ರಮ ಕೈಗೊಳ್ಳಿ ಆತಂಕಗಳನ್ನು ಹರಡಬೇಡಿ. ಕೋಮು ದ್ವೇಷ ಬಿತ್ತಬೇಡಿ ಎಂದು ಕೋರಿಕೊಂಡಿದ್ದಾರೆ. ನಿಜ ನಾವು ಮೊದಲು ನಮ್ಮ ದೇಶದೊಳಗಿನ ಕೋಮು ದ್ವೇಷ ಮತ್ತು ಹಗೆತನದ ಗೋಡೆಗಳನ್ನು ಕೆಡವದ ಹೊರತು,  ವಿಶ್ವದ ಉದ್ದಗಲ ನೆಲೆಸಿರುವ ವಿಭಜನೆ, ಹಗೆತನ ಕೋಮು ದ್ವೇಷದ ಗೋಡೆಗಳನ್ನು ಕೆಡುವಲು ಸಾಧ್ಯವೇ ಇಲ್ಲ. 

ನಮ್ಮೊಳಗಿನ ಅಧಿಕಾರ,  ಅಂತಸ್ತಿನ ದುರಾಸೆ,   ಮೇಲರಿಮೆ- ಕೀಳರಿಮೆ, ಭ್ರಷ್ಠಚಾರದ ಮನಸತ್ವ ಸ್ವಜನ ಪಕ್ಷಪಾತದ ಗುಣಾವ ಗುಣಗಳು ಘರ್ಷಣೆಗಳನ್ನು, ಅಶಾಂತಿಯನ್ನು ಹುಟ್ಟು ಹಾಕುತ್ತಿವೆ.  ಸ್ವಾರ್ಥ ಸಾಧನೆಗಾಗಿ ನಮ್ಮವರ ಮೇಲೆಯೇ ಸವಾರಿ ಮಾಡಲು ಕಿಂಚಿತ್ತೂ ಚಿಂತಿಸುತ್ತಿಲ್ಲ.  ಕೆಲ ರಾಜಕಾರಣಿಗಳ ಅಧಿಕಾರ ಲಾಲಸೆಗಾಗಿ ಕೋಮುಗಲಭೆ ಮತ್ತು ರಕ್ತಪಾತಗಳು ನಡೆಯುತ್ತಿವೆ.  ಇವರು ಮನುಷ್ಯರನ್ನು ಪ್ರೀತಿಸುವ ಮತ್ತು ಗೌರವಿಸುವ ಬದಲು ವಿಭಜಿಸುತ್ತಿದ್ದಾರೆ. ಇವತ್ತು ನಮಗೆ ಬೇಕಿರುವುದು ಬುದ್ಧ,  ಬಸವ, ಕನಕ, ನಾರಾಯಣ ಗುರುಗಳ ಸಾಮರಸ್ಯದ ಭಾರತವೇ ಹೊರತು,  ಕೋಮು ದ್ವೇಷದ ಭಾರತವಲ್ಲ. ಇದರ ನಡುವೆ ಗುಜರಾತ್ ಕೋ ಆಪರೇಟಿವ್ ಮಿಲ್ಕ್ ಮಾರ್ಕೆಟಿಂಗ್ ಫೆಡರೇಶನ್ಗೆ ಮಾನಹಾನಿ ಮತ್ತು ಹಾನಿ ಉಂಟುಮಾಡುವ ಉದ್ದೇಶದಿಂದ ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಪೋಸ್ಟ್ಗಳನ್ನು ಹರಿಯ ಬಿಡಲಾಗಿದೆ ಎಂದು ಅಹ್ಮದಾಬಾದ್ನ  ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ದೂರು  ದಾಖಲಿಸಲಾಗಿದೆ. ಇದರಲ್ಲಿ ಸ್ಪಿರಿಟ್ ಆಫ್ ಕಾಂಗ್ರೆಸ್, ಬಂಜಾರ 1991,  ಸೆಕ್ಯುಲರ್ ಬೆಂಗಾಲಿ, ರಾಹುಲ್ 1700, ಚಂದನ್ ಎಐಪಿಸಿ, ಪೊà್ರಫಾಪ್ ್ಮ,ನ ಪ್ರಿಟಿ ಪದ್ಮಜ  ಎಂಬುವುಗಳನ್ನು ಹೆಸರಿಸಲಾಗಿದೆ. ದೇಗುಲಕ್ಕೆ ತುಪ್ಪ ಪಪೂರೈಕೆ ಮಾಡುವ ಎಆರ್ ಡೈರಿ ಇದನ್ನು ನಿರಾಕರಿಸಿದೆ.ದಿಂಡಿಗಲ್ ಮೂಲದ ಎಆರ್ ಡೈರಿ ಫುಡ್ ಪ್ರೈವೇಟ್ ಲಿಮಿಟೆಡ್ ಪ್ರತಿ ಕೆಜಿ ತುಪ್ಪಕ್ಕೆ 320 ಪಡೆಯುತ್ತಿತ್ತು . ಸದ್ಯ ಎ ಆರ್ ಡೈರಿಯನ್ನು ಕಪ್ಪು ಪಟ್ಟಿಗೆ ಸೇರಿಸಲಾಗಿದೆ.  ಹಾಗೆಯೇ  ಶೋಕಾಸ್ ನೋಟಿಸ್ ಗೆ ತೃಪ್ತಿಕರ ವಿವರಣೆ ಬರದಿದ್ದಲ್ಲಿ ಕ್ರಿಮಿನಲ್ ಮೊಕದ್ದಮೆ ಹೂಡಲು ಟಿಟಿಡಿ ಚಿಂತಿಸಿದೆ . 

ತುಪ್ಪದ ಪೂರೈಕೆ ಟೆಂಡರನ್ನು ಮಾರ್ಚ್ 12ರಂದು ನೀಡಲಾಗಿತ್ತು . ಮೇ 8ರಂದು ಅಂತಿಮಗೊಳಿಸಲಾಗಿತ್ತು . ಮೇ15 ರಂದು  ಸರಬರಾಜು ಆದೇಶಗಳನ್ನು ಹೊರಡಿಸಲಾಗಿರುತ್ತದೆ. ಇಷ್ಟಕ್ಕೂ ತುಪ್ಪದಲ್ಲಿ ಪಾಮ್,  ತೆಂಗಿನಕಾಯಿ, ಸೋಯಾಬಿನ್,  ಸೂರ್ಯಕಾಂತಿ ,ಇತರ ಸಸ್ಯಜನ್ಯ ಎಣ್ಣೆಗಳಲ್ಲಿ ಪ್ರಾಣಿಗಳ ಕೊಬ್ಬು ಸೇರಿವೆ.  ಇಲ್ಲಿ ಶುದ್ಧೀಕರಿಸಿದ ತಾಳೆ ಎಣ್ಣೆಯಲ್ಲಿ 120 ರಿಂದ 125 ರೂಗಳಾಷ್ಟಾಗುತ್ತದೆ. ಟ್ಯಾಲೋ ಎಣ್ಣೆ ಪ್ರತಿ ಕೆಜಿಗೆ 80 ರಿಂದ 85 ರೂಗಳಷ್ಟಿದೆ.  ಸಹಕಾರಿ ಡೈರಿಗಳು ದಿನಕ್ಕೆ ಸರಾಸರಿ 600 ಲಕ್ಷ ಕೆಜಿ ಹಾಲನ್ನು ಸಂಗ್ರಹಿಸುತ್ತಿವೆ. 

ಇದರಲ್ಲಿ 450 ಕೆಜಿ ಎಲ್ಕೆಪಿಡಿ ದ್ರವ ಹಾಲು ಮತ್ತು 50 ಕೆಜಿ ಕೆಪಿಡಿ ಮೊಸರು, ಲಸ್ಸಿ ಮತ್ತು ಇತರ ಉತ್ಪನ್ನಗಳಾಗಿ ಮಾರಾಟ ಮಾಡಲಾಗುತ್ತಿದೆ. ಇನ್ನೂ ಕೆನೆ ತೆಗೆದ ಹಾಲಿನ ಪುಡಿ, ಕೊಬ್ಬಿನಂತಹ ಸರಕುಗಳನ್ನು ತಯಾರಿಸಲು 100 ಕೆಜಿಯಷ್ಟು ಎಲ್ ಕೆಪಿಡಿಯನ್ನು ಉಪಯೋಗಿಸಲಾಗುತ್ತಿದೆ. ಗೊತ್ತಿರಲಿ , ಹಾಲಿನಿಂದ ಮೊಸರು, ಮೊಸರಿನಿಂದ ಮಜ್ಜಿಗೆ, ಮಜ್ಜಿಗೆಯಿಂದ ಬೆಣ್ಣೆ, ಬೆಣ್ಣೆಯಿಂದ ತುಪ್ಪ ತಯಾರಿಸಲಾಗುತ್ತಿದೆ.  ಬೆಣ್ಣೆ ಕಾಯಿಸುವಾಗ ಅದರೊಳಗಡೆ ನುಗ್ಗೆ ಮರದಎಲೆ, ಅರಿಶಿಣ,  ಕೊಂಚ ರವೆ, ಎಲಕ್ಕಿ  ಹಾಕಿ ಕಾಯಿಸುವ ಪರಿಪಾಠವೂ ಇದೆ.  ಇದನ್ನು ಒಂದು ಹದದಲ್ಲಿ ಕಾಯಿಸಿದಾಗ ಅದು ಸುವಾಸನೆ ಹೊರ ಸೂಸುಸುತ್ತದೆ. ಉತ್ತಮವಾಗಿ ಕಾಯಿಸಿ,  ಆರಿಸಿದ ತುಪ್ಪ ಬಹುದಿನ ಕೆಡದೆ ಉತ್ತಮವಾಗಿರುತ್ತದೆ. ಇದೇನೇ ಇರಲಿ ಪರಂಗಿಯರ ಆಳ್ವಿಕೆಯಲ್ಲಿ ತುಪ್ಪ ಪ್ರಾಣಿಗಳ ಕೊಬ್ಬನ್ನು ಹೊಂದಿತ್ತು. ಅವತ್ತು ಕೂಡ ತುಪ್ಪವನ್ನು ಕಲಬೆರೆಕೆಗೊಳಿಸುವುದರಿಂದ ರಕ್ಷಿಸಲು ಕಾನೂನು ಇತ್ತೇ  ಹೊರತು, ಇತರ ಖಾದ್ಯಗಳೊಂದಿಗೆ ಬೆರೆಸುವುದರ ವಿರುದ್ಧ ಇರಲಿಲ್ಲ. ಇಲ್ಲಿ ಲಡ್ಡುಗಳ ತಯಾರಿಕೆಯಲ್ಲಿ ಬಳಸುವ ತುಪ್ಪದಲ್ಲಿ ಕಲಬೆರೆಕೆ ವರದಿ ಬಂದಿರುವುದು ನಿಜ. ಆದರೆ ಎಸ್ -ಮೌಲ್ಯಗಳು ವಿಚಲನಗೊಂಡಾಗ ಮೀನಿನ ಎಣ್ಣೆ, ದನದ ಟ್ಯಾಲೋ ಸೇರಿದಂತೆ ಕೊಬ್ಬುಗಳಿರುತ್ತವೆ ಎಂದು ಉಲ್ಲೇಖಿಸುತ್ತದೆ. ಆದಾಗ್ಯೂ ದನದ ಟ್ಯಾಲೋದಂತಹ ಕೊಬ್ಬು ಗುರ್ತಿಸಲು ಹೆಚ್ಚಿನ ಪರೀಕ್ಷೆಯ ಅಗತ್ಯವಿದೆ. ಕಲಬೆರಕೆ  ಕುರಿತು ಪ್ರಯೋಗಾಲಯ ಹೇಳಿದರೂ, ಅವು ಪ್ರಾಣಿಗಳ ಕೊಬ್ಬಿನ ಇರುವಿಕೆಯನ್ನು ಖಚಿತವಾಗಿ ಸಾಬೀತುಪಡಿಸಿಲ್ಲ. ಕಲಬೆರಕೆ ತುಪ್ಪವನ್ನು ತಿರುಪತಿ ದೇಗುಲದಲ್ಲಿ ಬಳಸಲಾಗಿಲ್ಲ ಎಂದು ಕಾರ್ಯನಿರ್ವಾಹಕ ಅಧಿಕಾರಿ ಉತ್ತರ ಕೊಟ್ಟಿದ್ದಾರೆ.

ಹಾಗೆಯೇ ರಾಷ್ಟ್ರೀಯ ಡೈರಿ ಡೆವಲಪ್ಮೆಂಟ್ ಬೋರ್ಡ್  ಸೆಂಟರ್ ಫಾರ್ ಅನಾಲಿಸಿಸ್ ಅಂಡ್ ಲರ್ನಿಂಗ್ ಇನ್ ಅನಿಮಲ್ ಫುಡ್ ಎಂಬ ಪ್ರಯೋಗಾಲಯ ವರದಿಯೊಂದಿಗೆ ಎಚ್ಚರಿಕೆಯನ್ನು ನೀಡಿದೆ. ಅದು ಸಮೃದ್ಧವಾದ ಆಹಾರಗಳನ್ನು ಹಸು ಅತಿಯಾಗಿ ತಿನ್ನುವಾಗ ತಪ್ಪು ಧನಾತ್ಮಕ ಫಲಿತಾಂಶ ಹೊರಬರುವ ಸಾಧ್ಯತೆಗಳಿವೆ ಎಂದಿದೆ. ಧಾರ್ಮಿಕ ಭಾವನೆಗಳಿಗೆ ಘಾಸಿಯಾಯಿತೆಂದು ಅರಿತ  ಮನಗಳಿಗೆ, ಇದು ಅಷ್ಟೊಂದು ಆಳವಾಗಿ ಚಿಂತನೆಗೆ ಹಚ್ಚುವುದು ಕಷ್ಟಕರ. ಹೈದರಾಬಾದ್ನಲ್ಲಿ ಪ್ರಯೋಗದಲ್ಲಿ ಇರುವಾಗ ಗುಜರಾತ್ ಪ್ರಯೋಗಾಲಯದ ಬೆನ್ನು ಬಿದ್ದ ಬಗ್ಗೆಯೂ ಚರ್ಚೆ ಆಗಬೇಕಿದೆ. ಇದು ನಿಯಮಿತ ಪರೀಕ್ಷೆಯೇ  ದೂರು ಕೊಟ್ಟವರು ಯಾರು ಎಂಬ ಪ್ರಶ್ನೆಗಳಿಗೂ ಉತ್ತರ ಸಿಗಬೇಕಿದೆ.

ಇನ್ನೂ ಪೊರೈಕೆಯಾದ 68 ಸಾವಿರ  ಕೆಜಿ ತುಪ್ಪದಲ್ಲಿ , 20 ಸಾವಿರ ಕೆಜಿ ಕಳಪೆ ಎಂಬುದನ್ನು ಕಂಡು ಹಿಡಿದ ನಂತರ ಟಿಟಿಡಿ ಮಾರಾಟಗಾರರನ್ನು ಕಪ್ಪು ಪಟ್ಟಿಗೆ ಸೇರಿಸಿದೆ. ತುಪ್ಪ ರವಾನೆಯ ಗುಣ ಮಟ್ಟವನ್ನು ಖಚಿತ ಪಡಿಸಿಕೊಳ್ಳಲು ರಸಾಯನ ಶಾಸ್ತ್ರದ ವಿಶ್ಷೇಷಣೆ ಸೇರಿದಂತೆ, ಕಠಿಣ ಪ್ರಯೋಗಾಲಯದ ಪರೀಕ್ಷೆಗೆ ಒಳಪಡಿಸಲಾಗುತ್ತದೆ ಎಂದು ಟಿಟಿಡಿ ಕಾರ್ಯನಿರ್ವಾಹಕ ಅಧಿಕಾರಿ ಜೆ. ಶ್ಯಾಮರಾವ್ ಹೇಳಿದ್ದಾರೆ . ಅಲ್ಲದೆ  4 ಟ್ಯಾಂಕರ್ಗಳನ್ನು ಮಾನವ ಸಂವೇದನಾ ಗ್ರಹಿಕೆಯ ಆಧಾರದ ಮೇಲೆ ಕಳಪೆ ಗುಣಮಟ್ಟದಿಂದ ಕೂಡಿರುವುದನ್ನು ಕಂಡು ಹಿಡಿಯಲಾಗಿದೆ. ಈ ತುಪ್ಪವನ್ನು ಬಳಕೆಯನ್ನೇ ಮಾಡಿರುವುದಿಲ್ಲ ಎಂದು ಕಾರ್ಯನಿರ್ವಾಹಕ ಅಧಿಕಾರಿ ತಿಳಿಸಿರುತ್ತಾರೆ.

ಹಾಗೆಯೇ ಟಿಟಿಡಿ ಇತಿಹಾಸದಲ್ಲಿ ಮೊದಲ ಬಾರಿಗೆ ಮಾದರಿಗಳನ್ನು ಪರೀಕ್ಷೆಗಾಗಿ ಬಾಹ್ಯ ಪ್ರಯೋಗಾಲಯಗಳಿಗೆ ಕಳುಹಿಸಲಾಗಿದೆ ಎಂದು ಕೂಡ ಹೇಳಿರುತ್ತಾರೆ . ತಿರಸ್ಕರಿಸಿದ ತುಪ್ಪದ  ಪರೀಕ್ಷಾ ವರದಿಯಿಂದ ವಿವಾದ ಮಾಡುತ್ತಿದ್ದರೆಂದು ಮಾಜಿ ಮುಖ್ಯಮಂತ್ರಿ ಜಗನ್ ವಿಷಾದ ವ್ಯಕ್ತಪಡಿಸಿದ್ದಾರೆ . ಹಿಂದೂ ಜನರ ಭಾವನೆಗಳಿಗೆ ಧಕ್ಕೆ ತರುವ ಉದ್ದೇಶದಿಂದ ಪ್ರಾಣಿಗಳ ಕೊಬ್ಬನ್ನು ತುಪ್ಪದಲ್ಲಿ ಬೆರೆಸಿದಂತೆ ತೋರುತ್ತಿದೆ ಎಂದು ಟಿಟಿಡಿ ಮಾಜಿ ಕಾರ್ಯನಿರ್ವಾಹಕ ಅಧಿಕಾರಿ ಕೃಷ್ಣ ಹೇಳಿರುತ್ತಾರೆ . ಇನ್ನೂ  ಹಸುವಿನ ನೈಜ ತುಪ್ಪ ತಿಳಿ ಚಿನ್ನದ ಹಳದಿ ಬಣ್ಣವನ್ನು ಹೊಂದಿರುತ್ತದೆ . ತುಪ್ಪ ಹೆಚ್ಚು ಪ್ರಕಾಶಮಾನವಾಗಿ ಕಂಡು ಬಂದರೆ , ಅದು ಅಶುದ್ಧತೆಯಿಂದ ಕೂಡಿರುತ್ತದೆ .  ಇದನ್ನು ಕಂಡು ಹಿಡಿಯಬೇಕೆಂದರೆ ಮನೆಯ ಬಿಸಿ ಮಾಡಿದ ಹೆಂಚಿನ ಮೇಲೆ ಒಂದು ಟೀ ಚಮಚದ ತುಪ್ಪ ಸುರಿದರೆ ಅದು ಶೇಷವಿಲ್ಲದೆ ಕರಗಿಬಿಡುತ್ತದೆ.ಅಶುದ್ಧವಾಗಿದ್ದರೆ ದುರ್ವಾಸನೆ ಹೊರಬರುತ್ತದೆ. ಗುಣಮಟ್ಟ ಪರೀಕ್ಷೆಗೆಗಾಗಿ ತುಪ್ಪದ ಮಾದರಿಗಳನ್ನು ಹೊರ ಪ್ರಯೋಗಾಲಯಗಳಿಗೆ ಕಳುಹಿಸಿರುವುದೇ ಇಲ್ಲ. 

ಇದರಿಂದಾಗಿ ಸರಬರಾಜು ದಾರರು ಕಳಪೆ ಗುಣಮಟ್ಟದ ತುಪ್ಪ ಪೂರೈಸಲು  ಕಾರಣ ವಾಗಿದೆ.  ಇನ್ನೂ 320 ರೂ. ಕೊಟ್ಟು ಕೆಜಿ ತುಪ್ಪ ಖರೀದಿಸಿದರೆ  ಅದ್ಹೇಗೆ  ಗುಣಮಟ್ಟ ದ ತುಪ್ಪ  ಸಿಗಲು ಸಾಧ್ಯವಾಗುತ್ತದೆ. ದುರಂತ ಎಂದರೆ, ಗುಜರಾತ್ ನಲ್ಲೊಮ್ಮೆ 3 ಸಾವಿರ ಕೆಜಿ ಕಲಬೆರಕೆ  ತುಪ್ಪದ ಮೇಲೆ ದಾಳಿಯಾಗಿತ್ತು. ಇನ್ನು ವಿಚಿತ್ರ ಎಂದರೆ ಒಮ್ಮೆ ದೆಹಲಿಯ ಮಾಳವೀಯ ನಗರದಲ್ಲಿ 450 ಕೆಜಿ ನಕಲಿ ತುಪ್ಪವನ್ನು ವಶಪಡಿಸಿಕೊಳ್ಳಲಾಗಿತ್ತು . ಇದಕ್ಕೂ ಮುಂಚಿತವಾಗಿ 1886 ರಲ್ಲಿ ಕಲಬೆರಕೆ ತುಪ್ಪ ಮಾರಾಟದ ಬಗ್ಗೆ ಮೊದಲ ವರದಿಯನ್ನು ಆಂಗ್ಲ ಪತ್ರಿಕೆಯೊಂದು ಪ್ರಕಟಿಸಿತ್ತು. ಕಲಬೆರಕೆ  ತುಪ್ಪ ಪ್ರಕರಣದಲ್ಲಿ ಪೂನಂಚಂದ್  ದುಯೆರಾ ಆರೋಪಿಯಾಗಿದ್ದರು. ಇವರು ಹಾಲಿನಿಂದ ಬಂದ “ತುಪ್ಪ’ ಪ್ರಾಣಿಗಳ ಕೊಬ್ಬು ಎಂದಿದ್ದರು.  ಇವರ ಪರವಾಗಿ ಹರಿ ಶಂಕರ್ ಎಂಬ ವಕೀಲರು ವಕಾಲತ್ತು  ವಹಿಸಿದ್ದರು. ಹೀಗೆ ತುಪ್ಪದ ಕಲಬೆರಕೆಗೆ ಸುಧೀರ್ಘ ಇತಿಹಾಸವಿದೆ. ಸತ್ತ ಪ್ರಾಣಿಗಳಿಂದ ಮತ್ತು ತರಕಾರಿ ಕೊಬ್ಬಿನಿಂದ ಕೋಕಮ್ ಮತ್ತು ಬೆಣ್ಣೆಯಂತಹ ನೈಸರ್ಗಿಕ ಅಥವಾ ವನಸ್ಪತಿಯನ್ನು ತಯಾರಿಸಬಹುದಾಗಿದೆ.  ಸಸ್ಯಜನ್ಯ ಎಣ್ಣೆಯನ್ನು ಹೈಡ್ರೋಜನಿಕರಣ ಪ್ರಕ್ರಿಯೆಯ ಮೂಲಕ ಘನೀಕರಿಸಿ ವನಸ್ಪತಿ ತಯಾರಿಸಬಹುದಾಗಿದೆ . ಇದನ್ನು ತರಕಾರಿ ತುಪ್ಪ ಎಂತಲೂ ಕರೆಯುವರು.      

 ಇದಲ್ಲದೆ,  ತುಪ್ಪವನ್ನು ಸಸ್ಯಹಾರಿ ಎಂದೂ ಪರಿಗಣಿಸಲಾಗಿದೆ. ಆದರೂ ಪೂನಂ ಚಂದ್ ದುಯೆರಾ ಪ್ರಕಾರ ಪ್ರಾಣಿಗಳ ಕೊಬ್ಬಾಗಿದೆ. ಉತ್ತರ ಭಾರತದಲ್ಲಿ ಬಾಲಾಜಿ ಎಂದು ಕರೆಯಲ್ಪಡುವ ತಿರುಪತಿ ತಿಮ್ಮಪ್ಪ ದೇವರಿಗೆ ಎಲ್ಲಾ ಧರ್ಮದವರು ಗೌರವ ಭಾವನೆಯನ್ನು ಹೊಂದಿದ್ದಾರೆ . ಅದಕ್ಕೀಗ ಧಕ್ಕೆಯೊದಗಿ ಬಂದಿದೆ

ತಿರುಪತಿ ತಿಮ್ಮಪ್ಪನ ಲಡ್ಡುಗಳಲ್ಲಿ ಕಲಬೆರೆಕೆ ಇದೇ ಮೊದಲಲ್ಲ . ಸಸ್ಯದ ಕೊಬ್ಬಿನೊಂದಿಗೆ ಕಲಬೆರಕೆ ಕಂಡುಬಂದ ಸರಕುಗಳನ್ನು ತಿರಸ್ಕರಿಸಲಾಗಿದೆ . ಜೊತೆಗೆ ಪೊರೈಕೆದಾರರನ್ನು ಕಪ್ಪು ಪಟ್ಟಿಗೂ ಸೇರಿಸಲಾಗಿದೆ . ಟಿಟಿಡಿಗೆ ಐದು ಜನ ತುಪ್ಪದ ಪೂರೈಕೆದಾರಿದ್ದರು . ಪ್ರೀಮಿಯರ್ ಅಗ್ರಿಫುಡ್ಸ್,  ಕೃಪಾ ಫಾರಂ ಡೈರಿ, ವೈಷ್ಣವಿ ,  ]à ಪರಾಗ್ ಮಿಲ್ಕ್ ಮತ್ತು ಏ.ಆರ್ ಡೈರಿ ಆಗಿವೆ. ಇವರು ವಿಧಿಸಿದ ಬೆಲೆ ರೂ. 320 ರಿಂದ 411ರೂ ಗಳಾಷ್ಟಾಗಿತ್ತು. ಇನ್ನೂ ]àವಾರಿ ಲಡ್ಡುಗೆ 5 ಶತಮಾನಗಳ ಇತಿಹಾಸ ಇದೆ . ಇದು ತುಪ್ಪ ಮತ್ತು ಸಕ್ಕರೆಯಿಂದ ಸಮೃದ್ಧವಾಗಿದೆ ಎಂಬ ಭಾವನೆ ಭಕ್ತಾದಿಗಳಲ್ಲಿದೆ. ತಿರುಪತಿ ತಿಮ್ಮಪ್ಪನ ಲಡ್ಡು ನಮ್ಮ ದೇಶ ಮಾತ್ರವಲ್ಲದೆ ವಿದೇಶಗಳಲ್ಲಿಯೂ ಬಹು ಬೇಡಿಕೆಯನ್ನು ಹೊಂದಿದೆ. ನಿತ್ಯ 3 ಲಕ್ಷ ಲಡ್ಡುಗಳ ಮಾರಾಟವಾಗುತ್ತಿವೆ. 

ವರ್ಷಕ್ಕೆ 1  ಕೋಟಿ ಲಡ್ಡು ಪ್ರಸಾದವಾಗಿ ಭಕ್ತರಿಗೆ ವಿನಿಯೋಗವಾಗುತ್ತಿದೆ. ವಾರ್ಷಿಕ 500 ಕೋಟಿ ವ್ಯಾಪಾರ -ವ್ಯವಹಾರದ ನಂಟಿದೆ.  ಇದಕ್ಕೆ ಜಿಐ ಟ್ಯಾಗ್ ಮತ್ತು ಬೌದ್ಧಿಕ ಆಸ್ತಿ ಹಕ್ಕು ಕೂಡ 2009ರಲ್ಲಿ ಲಭಿಸಿದೆ.  ನಿತ್ಯ 1ಟನ್  ಕಡಲೆ ಹಿಟ್ಟಿನಿಂದ ತಯಾರಾಗುವ ಲಡ್ಡು 10 ಟನ್ ಸಕ್ಕರೆಯನ್ನು, 700 ಕೆಜಿ ಗೋಡಂಬಿಯನ್ನು,  150 ಕೆಜಿ ಏಲಕ್ಕಿಯನ್ನು, ಸುಮಾರು 500 ಲೀಟರ್ ತುಪ್ಪವನ್ನು,  500 ಕೆಜಿ ಕಲ್ಲುಸಕ್ಕರೆ,  540 ಕೆಜಿ ದ್ರಾಕ್ಷಿಯನ್ನು ಒಳಗೊಳ್ಳುತ್ತಿದೆ. 

ಇಂತಹ ಗುಣ ವಿಶೇಷವುಳ್ಳ ಲಡ್ಡು  ದೇಶದಲ್ಲಿ ಕಾನೂನು ಮತ್ತು ಸುವ್ಯವಸ್ಥೆಗೆ ಭಂಗ ತರುವ, ಅಪಾಯಕಾರಿ ಆಗುವ ಲಕ್ಷಣಗಳಿವೆ ಇದೇನೆ ಇರಲಿ ಗುಜರಾತ್ನ  ಪರೀಕ್ಷಾ ಪ್ರಯೋಗಾಲಯ ಲಡ್ಡುಗಳ ತಯಾರಿಕೆಯಲ್ಲಿ ಬಳಸುವ ತುಪ್ಪದಲ್ಲಿ ಗೋಮಾಂಸ ಟ್ಯಾಲೋ, ಹಂದಿಯ ಕೊಬ್ಬು ಮತ್ತು ಮೀನಿನ ಎಣ್ಣೆ ಇರುವುವಿಕೆ ಕುರಿತು ವರದಿ ಹೊರಹೊಮ್ಮಿಸಿದೆ.  ನಿಕಟ ಪೂರ್ವ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಅಧಿಕಾರದ ಅವಧಿಯಲ್ಲಿ ಪ್ರಾಣಿಗಳ ಕೊಬ್ಬಿನಿಂದ ಕಲುಷಿತಗೊಂಡ ತುಪ್ಪವನ್ನು ಲಡ್ಡು ತಯಾರಿಸಲು ಬಳಸಲಾಗಿದೆ ಎಂದು ಆಪಾದಿಸಲಾಗಿದೆ. ಕಲಬೆರಕೆಯಲ್ಲಿ ಜಗನ್ ಮೋಹನ್ ರೆಡ್ಡಿ ಪಾತ್ರದ ಬಗ್ಗೆ  ಹೇಳಿರುವುದಿಲ್ಲ . ಯುವಜನ ಶ್ರಮಿಕ ರೈತ ಕಾಂಗ್ರೆಸ್ ಪಕ್ಷದ ಸರ್ಕಾರ ಇದ್ದಾಗ  ಲಡ್ಡುಗಳ ತಯಾರಿಕೆಯಲ್ಲಿ ಶುದ್ಧ ತುಪ್ಪದ ಬದಲು ಪ್ರಾಣಿಗಳ ಕೊಬ್ಬನ್ನು ಒಳಗೊಂಡಿರುವ ತುಪ್ಪದೊಂದಿಗೆ,  ಗುಣಮಟ್ಟವಿಲ್ಲದ ಪದಾರ್ಥಗಳಿಂದ ತಯಾರಿಸಲಾಗಿದೆ ಎಂದು ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು  ಆಪಾದಿಸಿದ್ದಾರೆ .

ಎ.ಆರ್. ಡೈರಿ ಪೂರೈಸುವ ಶಂಕಿತ ಕಲಬೆರಕೆ ತುಪ್ಪವನ್ನು ಲಡ್ಡು ತಯಾರಿಕೆಯಲ್ಲಿ ಬಳಸಿಲ್ಲವೆಂದು ಟಿಟಿಡಿ ಕಾರ್ಯನಿರ್ವಹಣಾಧಿಕಾರಿ ಜಿ.ಶ್ಯಾಮಲಾ ಅವರು 40 ಪುಟಗಳ ವರದಿಯನ್ನು ಸಲ್ಲಿಸಿದ್ದಾರೆ. ಸುಪ್ರೀಂ ಕೋರ್ಟ್ ಮೇಲುಸ್ತುವಾರಿಯಲ್ಲಿ ತನಿಖೆ ನಡೆಯಲೆಂದು  ರಾಜ್ಯ ಸಭಾಸದಸ್ಯ ಸುಬ್ರಮಣಿಯಂ ಸ್ವಾಮಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದಾರೆ. ಇರಲಿ, 2024ರಲ್ಲಿ ನಾಯ್ಡು ಅವರು ಟಿಡಿಪಿ ಅಧಿಕಾರಿಕೆ ಬಂದರೆ  ತಿರುಪತಿ ದೇಗುಲದ ಹದೆಗೆಟ್ಟ ಲಡ್ಡು ಗುಣಮಟ್ಟದ ಬಗ್ಗೆ ತನಿಖೆ ನಡೆಸುವುದಾಗಿ ಘೋಷಿಸಿದ್ದರು. ಅದರಂತೆ ರಾಷ್ಟ್ರೀಯ ಸಂಶೋಧನಾ ಸಂಸ್ಥೆಯ ಮಾಜಿ ಪ್ರಧಾನಿ ವಿಜ್ಞಾನಿ ಡಾ. ಸುರೇಂದ್ರನಾಥ್, ಡೈರಿ ತಜ್ಞ ಡಾ. ವಿಜಯ ಭಾಸ್ಕರ್ ರೆಡ್ಡಿ, ತೆಲಂಗಾಣ ಪಶು ವೈದ್ಯಕೀಯ ವಿಶ್ವವಿದ್ಯಾಲಯದ ಡಾ. ಸ್ವರ್ಣಲತಾ  ಮತ್ತು ಐಐಎಂ ಬೆಂಗಳೂರಿನ ಡಾ. ಮಹದೇವನ್ ಅವರನ್ನೊಳಗೊಂಡ  ಸಮಿತಿಯನ್ನು ರಚಿಸಲಾಗಿದೆ.

ಕೇಂದ್ರ ಆರೋಗ್ಯ ಸಚಿವ ಜೆಪಿ ನಡ್ದ ಅವರು ಲಡ್ಡು ಕುರಿತು ವರದಿಯನ್ನು ಕೇಳಿದ್ದಾರೆ. ಇಲ್ಲಿ ಚಂದ್ರಬಾಬು ನಾಯ್ಡು ತಮ್ಮ ಸಮೀಪದ ಪ್ರತಿಸ್ಪರ್ಧಿ ಜಗನ್ ಮೋಹನ್ ರೆಡ್ಡಿ ಅವರನ್ನು ಹಣಿಯಲು ಹಿಂದೂ-ಕ್ರೈಸ್ತ ವಿವಾದವನ್ನು ಹುಟ್ಟು ಹಾಕಿರುವರೇ ?  ಅಮಾಯಕ ಹಿಂದೂ ಸಂಘಟನಾಕಾರರಲ್ಲಿ  ಕೋಮು ಭಾವನೆ  ಕೆರಳಿಸಲು ಬಳಸಿಕೊಂಡಿದ್ದಾರೆಯೇ ?  ಸರ್ಕಾರದ ನೂರು ದಿನಗಳ ಸಾಧನೆ ಮರೆ ಮಾಚಲು ,  ವಿಷಯಾಂತರಗೊಳಿಸಲು ಬಯಸಿರುವರೇ ? ಗೊತ್ತಾಗಬೇಕಿದೆ . ಇದೇನೇ ಇರಲಿ , ಭಾರತದಲ್ಲಿರುವ ದೇಗುಲಗಳಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಪರಿಶೀಲಿಸಲು ರಾಷ್ಟ್ರ ಮಟ್ಟದಲ್ಲಿ  ಸನಾತನ ಧರ್ಮ ರಕ್ಷಣಾ ಮಂಡಳಿ   ರಚಿಸಬೇಕೆಂದು ನಟ ಉಪಮುಖ್ಯಮಂತ್ರಿ ಪವನ್ ಕಲ್ಯಾಣ್ ಧ್ವನಿ ಎತ್ತಿ ಉಪವಾಸ ಕೂತಿದ್ದಾರೆ. ಜೊತೆಗೆ ತಿರುಪತಿ ದೆಗುಲವನ್ನು ಮಹಾಶಾಂತಿ ಹೋಮ,ಪಂಚಗಮ್ಯ ಪ್ರೊಕ್ಷಣೆಯನ್ನು ಮಾಡಿಸಿದ್ದಾರೆ. 

ಇದರಲ್ಲಿ ನೀತಿ-ನಿರೂಪಕರು ,  ಧಾರ್ಮಿಕ ಮುಖ್ಯಸ್ಥರು,  ನ್ಯಾಯಾಂಗ , ಮಾಧ್ಯಮ ,  ನಾಗರಿಕರೆಲ್ಲರನ್ನೂ  ಕೂಡಿರುವಂತಿರಬೇಕೆಂದು ಅಭಿಪ್ರಾಯ ಪಟ್ಟಿದ್ದಾರೆ .  ಸನಾತನ ಧರ್ಮವನ್ನು ಅಪವಿತ್ರ ಗೊಳಿಸುವುದನ್ನು ತಡೆಗಟ್ಟಲು ನಾವೆಲ್ಲರೂ ಒಗ್ಗೂಡಬೇಕೆಂದು ಸಾಮಾಜಿಕ ಮಾಧ್ಯಮದಲ್ಲಿ ಮನವಿ ಮಾಡಿದ್ದಾರೆ. ಹಿಂದೊಮ್ಮೆ ತಿರುಪತಿಯ 7 ಬೆಟ್ಟಗಳಲ್ಲಿ 3 ಬೆಟ್ಟಗಳನ್ನು ಚರ್ಚುಗಳಿಗೆ ಹಸ್ತಾಂತರಿಸಲಾಗುತ್ತದೆ ಎಂಬ ಸುದ್ದಿಯನ್ನು ಹರಿಯ ಬಿಡಲಾಗಿತ್ತು.  ಆಂಧ್ರ ಪ್ರದೇಶದಲ್ಲಿ ಧಾರ್ಮಿಕ ಮತಾಂತರವನ್ನು ಉತ್ತೇಜಿಸಲು  ತಮ್ಮ ಅಧಿಕೃತ ಸ್ಥಾನವನ್ನು ಬಳಸಿಕೊಂಡು ಹಿಂದೂಗಳಿಗೆ ದ್ರೋಹ ಎಸಗಲಾಗುತ್ತಿದೆ ಎಂದು ಎರಡು 2021ರಲ್ಲಿ ನಾಯ್ಡು ಆಪಾದಿಸಿದ್ದರು . ರಾಮ ತೀರ್ಥಕ್ಕೆ ಭೇಟಿ ಕೊಟ್ಟಾಗ ರಾಮನ ವಿಗ್ರಹ ಪವಿತ್ರವಾಯಿತೆಂದು ಇದು 127ನೇ ದಾಳಿ ಎಂದು ಪ್ರತಿಪಾದಿಸಿದ್ದರು.  ರೆಡ್ಡಿ ಆಡಳಿತದಲ್ಲಿ ಕ್ರೈಸ್ತ ಧರ್ಮ ಮತಾಂತರಕ್ಕೆ ಅವಕಾಶ ಮಾಡಿಕೊಡಲಾಗಿದೆ ಎಂದಿದ್ದರು .

ಹೀಗೆ ಜಗನ್ ಅವರ ನಂಬಿಕೆಗಳನ್ನು ವೈಯುಕ್ತಿಕವಾಗಿ  ಟೀಕಿಸುತ್ತಾ  ಬಂದಿದ್ದಾರೆ . ಹೀಗಾಗಿ ನಾವಿಂದು ಸುಳ್ಳು ಕಲ್ಪನೆಗಳಿಂದ ಭ್ರಮೆಗಳಿಂದ ,  ಧಾರ್ಮಿಕ ಮೂಲಭೂತವಾದದಿಂದ ಮುಕ್ತರಾಗಬೇಕಿದೆ . ಪ್ರೀತಿ , ದಯೆ , ಸಹಾನುಭೂತಿ, ಸಹನೆ , ನಮ್ರತೆ , ತಾಳ್ಮೆಯ ಗುಣಗಳನ್ನು ಅಳವಡಿಸಿಕೊಳ್ಳಬೇಕಿದೆ .  ಪ್ರೀತಿ ಮತ್ತು ಶಾಂತಿಯನ್ನು ಛಿದ್ರಗೊಳಿಸುವ ದುರ್ಗುಣಗಳನ್ನು ನಾಶಪಡಿಸಿಕೊಳ್ಳಬೇಕಿದೆ.

ಅಂತರ್ಗತ ಮನೋಭಾವದಿಂದ ಮಾತ್ರ ವಿಶಾಲ ದೃಷ್ಟಿಕೋನವನ್ನು ಅಭಿವೃದ್ಧಿಪಡಿಸಿಕೊಳ್ಳಲು ಸಾಧ್ಯ.  ಹಾಗೆಯೇ ಇತರರ ಆಲೋಚನೆ, ನಂಬಿಕೆಗಳನ್ನು ಗೌರವಿಸಲು ಸಾಧ್ಯ. ಅನ್ಯತೆ  ಎಂಬ ಭಾವನೆಯೂ  ಏಕತೆಯ ಭಾವಕ್ಕೆ ದಾರಿ ಮಾಡಿಕೊಡುತ್ತದೆ. ಮನುಕುಲಕ್ಕೆ ಸದ್ಭಾವನೆಯನ್ನು ಹುಟ್ಟು ಹಾಕುತ್ತದೆ .ರಾಜಕೀಯ ಲಾಭಕ್ಕಾಗಿ ದೇವರನ್ನು ಬಳಸಿಕೊಳ್ಳುವುದು ದುರಂತದ  ವಿಚಾರ

Leave a Reply

Your email address will not be published. Required fields are marked *