ಬೆಂಗಳೂರು: ನಗರಾಭಿವೃದ್ಧಿ ಸಚಿವರೂ ಆದ ಡಿಸಿಎಂ ಡಿಕೆ ಶಿವಕುಮಾರ್ ಅವರು ಬಿಬಿಎಂಪಿ ವ್ಯಾಪ್ತಿಯಲ್ಲಿ ಸೋಮವಾರ ವಿವಿಧ ರಸ್ತೆಗಳ ಡಾಂಬರೀಕರಣ ಹಾಗೂ ಕಾಮಗಾರಿಗಳ ಭೂಮಿ ಪೂಜೆ ಹಾಗೂ ಚಾಲನೆ ನೀಡಿದ್ದಾರೆ. ಸುಗಮ ಸಂಚಾರಕ್ಕಾಗಿ ಮುಖ್ಯರಸ್ತೆಗಳು, ಒಳ ಮುಖ್ಯರಸ್ತೆಗಳಲ್ಲಿ ಡಾಂಬರೀಕರಣ, ಒಳಚರಂಡಿ ವ್ಯವಸ್ಥೆ ಹಾಗೂ ಪಾದಚಾರಿ ಮಾರ್ಗಗಳ ಸುಧಾರಣೆಗೆ ಒತ್ತು ನೀಡಲಾಗುತ್ತಿದೆ. ಈ ಮೂಲಕ ಬ್ರ್ಯಾಂಡ್ ಬೆಂಗಳೂರಿನ ಪರಿಕಲ್ಪನೆಯನ್ನ ಸಾಕಾರಗೊಳಿಸಲಾಗುತ್ತಿದೆ ಎಂದು ಹೇಳಿದ್ದರು. ಈ ಬಗ್ಗೆ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ ಅವರು ವ್ಯಂಗ್ಯವಾಡಿದ್ದಾರೆ.

ಜಗತ್ತಿನ ಬೇರೆಲ್ಲಿಯೂ ಇಂತಹ ಅಬ್ಬರದಿಂದ ನಿಯಮಿತ ಗುಂಡಿ ದುರಸ್ತಿ ಕೆಲಸ ಪ್ರಾರಂಭವಾಗುವುದಿಲ್ಲ ಎಂದು ನಾನು ಭಾವಿಸುತ್ತೇನೆ. ಬೆಂಗಳೂರಿನಲ್ಲಿ ಗುಂಡಿಗಳನ್ನು ಸರಿಪಡಿಸಲು ಮತ್ತು ಅವುಗಳನ್ನು ಪದೇ ಪದೇ ರಿಲೇ ಮಾಡಲು ಖರ್ಚು ಮಾಡುವ ಸಾರ್ವಜನಿಕ ಹಣವು ಮನಸ್ಸಿಗೆ ಮುದ ನೀಡುತ್ತದೆ. ಭಾರತಕ್ಕಿಂತ ಬಹಳ ಹಿಂದುಳಿದ ದೇಶಗಳಲ್ಲಿರುವ ನಗರಗಳು ಸಹ ರಸ್ತೆಗಳನ್ನು ನಿರ್ವಹಿಸುವಲ್ಲಿ ಬೆಂಗಳೂರಿಗಿಂತ ಉತ್ತಮವಾಗಿ ಕಾರ್ಯನಿರ್ವಹಿಸುತ್ತವೆ ಎಂದು ತೇಜಸ್ವಿ ಸೂರ್ಯ ಟಾಂಗ್ ನೀಡಿದ್ದಾರೆ.
ರಾಜರಾಜೇಶ್ವರಿನಗರ ವಿಧಾನಸಭಾ ಕ್ಷೇತ್ರದ ಮಾಗಡಿ ರಸ್ತೆಯ ಸುಮನಹಳ್ಳಿ ಜಂಕ್ಷನ್ನಲ್ಲಿ ರಸ್ತೆ ದುರಸ್ತಿ ಕಾಮಗಾರಿಗೆ ಚಾಲನೆ ನೀಡಿದ ಡಿಕೆ ಶಿವಕುಮಾರ್ ಅವರು ಈ ಮೂಲಕ ಬ್ರ್ಯಾಂಡ್ ಬೆಂಗಳೂರಿನ ಪರಿಕಲ್ಪನೆಯನ್ನು ಸಾಕಾರಗೊಳಿಸಲಾಗುತ್ತಿದೆ ಎಂದಿದ್ದಾರೆ. ಇನ್ನು ಬಿಬಿಎಂಪಿ ಅನುದಾನದ ಅಡಿಯಲ್ಲಿ, ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ 10 ಕೋಟಿ ರೂ. ವೆಚ್ಚದ ಆರ್ಟೀರಿಯಲ್, ಸಬ್ ಆರ್ಟೀರಿಯಲ್ ರಸ್ತೆಗಳ ಚರಂಡಿ, ಪಾದಚಾರಿ ಮಾರ್ಗ, ಮೈಕ್ರೋಸರ್ಫೇಸಿಂಗ್ ಹಾಗೂ ರಸ್ತೆ ಅಭಿವೃದ್ಧಿ ಕಾಮಗಾರಿಗಳಿಗೆ ಮಿನರ್ವ ಸರ್ಕಲ್ ಬಳಿ ಭೂಮಿಪೂಜೆ ನೆರವೇರಿಸಿದ್ದಾರೆ.