ಬೆಂಗಳೂರು: ಎಸ್ಬಿಐ ಬ್ರಾಂಚ್ ಮ್ಯಾನೇಜರ್ ಕನ್ನಡ ಮಾತನಾಡಲು ನಿರಾಕರಿಸಿರುವುದು ಖಂಡನೀಯ ಎಂದು ಸಿಎಂ ಸಿದ್ದರಾಮಯ್ಯ ವಿಷಾದ ವ್ಯಕ್ತಪಡಿಸಿದ್ದಾರೆ. ಈ ಸಂಬಂಧ ಎಕ್ಸ್ ಪೋಸ್ಟ್ ಮಾಡಿರುವ ಅವರು, ಆನೇಕಲ್ನ ಸೂರ್ಯನಗರ ಮ್ಯಾನೇಜರ್ ನಡವಳಿಕೆ ಖಂಡನೀಯವಾಗಿದೆ. ಅಧಿಕಾರಿಯನ್ನು ವರ್ಗಾವಣೆ ಮಾಡಿರುವ ಎಸ್ಬಿಐ ಕ್ರಮ ಮೆಚ್ಚುವಂತದ್ದಾಗಿದ್ದು, ಆ ಮೂಲಕ ಈ ವಿವಾದಕ್ಕೆ ತೆರೆಬಿದ್ದಿದೆ ಎಂದಿದ್ದಾರೆ. ಇಂಥ ಘಟನೆಗಳು ಮರುಕಳಿಸಬಾರದು. ಎಲ್ಲ ಬ್ಯಾಂಕ್ ಉದ್ಯೋಗಿಗಳು ಗ್ರಾಹಕರನ್ನು ಗೌರವಯುತವಾಗಿ ನಡೆಸಿಕೊಳ್ಳಬೇಕು. ಸ್ಥಳೀಯ ಭಾಷೆಯಲ್ಲಿ ಮಾತನಾಡಲು ಎಲ್ಲ ಪ್ರಯತ್ನವನ್ನು ಮಾಡಬೇಕು” ಎಂದು ಮನವಿ ಮಾಡಿದ್ದಾರೆ.

ಎಲ್ಲ ಬ್ಯಾಂಕ್ ಉದ್ಯೋಗಿಗಳಿಗೆ ಕಡ್ಡಾಯವಾಗಿ ಸ್ಥಳೀಯ ಭಾಷೆ, ಸಂಸ್ಕೃತಿ ಬಗ್ಗೆ ತರಬೇತಿ ನೀಡಲು ಕೇಂದ್ರ ಹಣಕಾಸು ಸಚಿವಾಲಯಕ್ಕೆ ಮನವಿ ಮಾಡುತ್ತೇನೆ. ಸ್ಥಳೀಯ ಭಾಷೆಯನ್ನು ಗೌರವಿಸುವುದು ಜನರನ್ನು ಗೌರವಿಸಿದ ಹಾಗೆ” ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ. ಆನೇಕಲ್ ತಾಲೂಕಿನ ಚಂದಾಪುರದ ಸೂರ್ಯನಗರದಲ್ಲಿನ ಎಸ್ಬಿಐ ಬ್ಯಾಂಕ್ ಮ್ಯಾನೇಜರ್ ಚಳವಳಿಗಾರರೊಬ್ಬರಿಗೆ ಕನ್ನಡ ಮಾತನಾಡುವುದೇ ಇಲ್ಲ ಎಂದು ಪಟ್ಟು ಹಿಡಿದ ವಿಡಿಯೋ ವೈರಲಾಗಿತ್ತು. ಇದಕ್ಕೆ ಸಾಮಾಜಿಕ ಜಾಲತಾಣದಲ್ಲಿ ಕನ್ನಡಿಗರು ಆಕ್ರೋಶ ವ್ಯಕ್ತಪಡಿಸಿದ್ದರು. ಎಂದಿನಂತೆ ಕನ್ನಡ ಮಾತನಾಡದ ಮಹಿಳಾ ಮ್ಯಾನೇಜರ್ ಕೇವಲ ಇಂಗ್ಲಿಷ್ , ಹಿಂದಿಯಲ್ಲಿಯೇ ಪ್ರತಿಕ್ರಿಯಿಸುತ್ತಿರುವುದನ್ನು ಮೊಬೈಲ್ ಮೂಲಕ ದೃಶ್ಯ ಸೆರೆ ಮಾಡುತ್ತಲೇ, ತಮ್ಮ ಖಾತೆಯಲ್ಲಿ ಹರಿಬಿಟ್ಟ ಸ್ಥಳೀಯ ಮಹೇಶ್ ರೆಡ್ಡಿ ಎಂಬುವರು ‘ಕನ್ನಡ ಮಾತನಾಡಲೇ ಬೇಕು. ಅದು ಆರ್ಬಿಐ ನಿಯಮ’ ಎಂದು ಪಟ್ಟು ಹಿಡಿದಿದ್ದರು.
ಈ ವೇಳೆ ಮ್ಯಾನೇಜರ್ ಸವಾಲು ಹಾಕುತ್ತಲೇ ‘ಆರ್ಬಿಐ ನಲ್ಲಿ ಗೈಡ್ಲೈನ್ಸ್ ಎಲ್ಲಿದೆ. ಕನ್ನಡ ಮಾತನಾಡಬೇಕು ಎಂಬ ಮ್ಯಾಂಡೇಟರಿ ಏನಿಲ್ಲ. ನಾನು ಕನ್ನಡ ಮಾತನಾಡುವುದಿಲ್ಲ ‘ ಎಂದು ಅವರೂ ಕೂಡಾ ವಿಡಿಯೋ ಮಾಡಿಕೊಂಡಿದ್ದರು.ವಿಡಿಯೋ ವೈರಲಾಗುತ್ತಿದ್ದಂತೆಯೇ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದರು. ಆನೇಕಲ್ ಸುತ್ತಲಿನ ಎಲ್ಲ ಖಾಸಗಿ ಬ್ಯಾಂಕ್ಗಳಲ್ಲಿ ಪರಭಾಷಿಗರೇ ಕಾಣುತ್ತಿದ್ದು, ಸ್ಥಳೀಯರಿಗೆ ಬ್ಯಾಂಕ್ ಸೇವೆಗಳ ಸಮಗ್ರ ಮಾಹಿತಿ ದೊರೆಯದೇ ಪರದಾಡುತ್ತಿರುವ, ಬೆನ್ನಲ್ಲೇ ಆಗಾಗ ಇಂತಹ ಘಟನೆಗಳು ಮರುಕಳಿಸುತಿವೆ ಎಂಬ ಕೂಗು ಜೋರಾಗಿದೆ. ಈ ಹಿಂದೆ ಎಲ್ಲಾ ಬ್ಯಾಂಕ್ ಮ್ಯಾನೇಜರ್ಗಳನ್ನು ಸಭೆ ಕರೆದಿದ್ದ ತಹಶೀಲ್ದಾರ್ ಸ್ಥಳೀಯ ಭಾಷೆಯಲ್ಲಿ ವ್ಯವಹರಿಸಿ ಎಂದು ಸೂಚನೆ ನೀಡಿದ್ದರು.