ಬೆಂಗಳೂರು: ಪರಿಶಿಷ್ಟ ಜಾತಿ ಒಳಮೀಸಲಾತಿ ವರ್ಗೀಕರಣ ಸಮೀಕ್ಷೆ ಇಂದಿನಿಂದ (ಸೋಮವಾರ) ಆರಂಭವಾಗಲಿದೆ. ಮೇ 17ರ ವರೆಗೆ ಮನೆ ಮನೆಗೆ ತೆರಳಿ ಸರ್ಕಾರಿ ಶಾಲಾ ಶಿಕ್ಷಕರು ಸಮೀಕ್ಷೆ ಕಾರ್ಯ ನಡೆಸಲಿದ್ದಾರೆ.

ರಾಜ್ಯಾದ್ಯಂತ ಸುಮಾರು 58,960 ಗಣತಿದಾರರು (Enumerators) ಸಮೀಕ್ಷೆ ಕಾರ್ಯ ನಡೆಸಲಿದ್ದಾರೆ. ಸುಮಾರು 6,000 ಸೂಪರ್ ವೈಸರ್ಸ್ ಗಳನ್ನು ನಿಯೋಜಿಸಲಾಗಿದೆ. ಇವರು ಸಮೀಕ್ಷೆಯ ಮೇಲೆ ನಿಗಾ ವಹಿಸಲಿದ್ದಾರೆ. ಪರಿಶಿಷ್ಟ ಜಾತಿ ಪಟ್ಟಿಯಲ್ಲಿ ಒಟ್ಟು 101 ಜಾತಿಗಳಿವೆ. ಈ ಪೈಕಿ ಆದಿ ಕರ್ನಾಟಕ, ಆದಿ ದ್ರಾವಿಡ ಮತ್ತು ಆದಿ ಆಂಧ್ರ ಉಪ ಜಾತಿಗಳು ಯಾವ ಜಾತಿಗೆ ಸೇರಿವೆ ಎಂಬ ಗೊಂದಲವನ್ನೂ ಇತ್ಯರ್ಥಪಡಿಸಬೇಕಾಗಿದೆ. ದಾಖಲೆ, ಪುರಾವೆ, ಅಂತರ್ ಹಿಂದುಳಿದಿರುವಿಕೆ ಇನ್ನಿತರ ಮಾಹಿತಿ ಸಂಗ್ರಹಿಸಿ ವೈಜ್ಞಾನಿಕ ಮತ್ತು ತರ್ಕಬದ್ಧವಾಗಿ ಎಸ್ಸಿ ಮೀಸಲು ವರ್ಗೀಕರಣ ನಡೆಸಬೇಕಾಗಿದೆ.
ಸಮೀಕ್ಷೆಯ ಸ್ವರೂಪ ಏನಿರಲಿದೆ? ನಿವೃತ್ತ ನ್ಯಾಯಮೂರ್ತಿ ಎಚ್.ಎನ್. ನಾಗಮೋಹನ್ದಾಸ್ ನೇತೃತ್ವದಲ್ಲಿ ಸಮೀಕ್ಷೆ ಕಾರ್ಯ ನಡೆಯಲಿದೆ. ಸಮೀಕ್ಷೆ ವೇಳೆ ಕುಟುಂಬದ ಯಾರಾದರೂ ಒಬ್ಬರು ಗಣತಿದಾರರಿಗೆ ಆಧಾರ್ ಕಾರ್ಡ್ ಅಥವಾ ಕುಟುಂಬದ ಪಡಿತರ ಚೀಟಿಯನ್ನು ತೋರಿಸಬೇಕು. ಅಂತರಜಾತಿ ವಿವಾಹವಾದ ಪ್ರಕರಣಗಳಲ್ಲಿ ಹೆಂಡತಿ ಅಥವಾ ಸೊಸೆಗೆ ಜಾತಿ ಬೇರೆ ಇದ್ದರೆ, ಈ ಮಾಹಿತಿಯನ್ನು ತಿಳಿದು ನಮೂದಿಸುವಂತೆ ಸೂಚನೆ ನೀಡಲಾಗಿದೆ. ಜೊತೆಗೆ ಪರಿಶಿಷ್ಟ ಜಾತಿ ಪ್ರಮಾಣ ಪತ್ರದ ಬಗ್ಗೆಯೂ ಮಾಹಿತಿ ಸಂಗ್ರಹಿಸಲಾಗುತ್ತದೆ
57 ಸಾವಿರ ಶಿಕ್ಷಕರಿಂದ ಸಮೀಕ್ಷೆ: ಶಿಕ್ಷಣ ಇಲಾಖೆಯಿಂದಲೇ 57 ಸಾವಿರ ಶಿಕ್ಷಕರನ್ನು ಸಮೀಕ್ಷೆಗೆ ಬಳಸಿಕೊಳ್ಳಲಾಗುತ್ತಿದೆ. ಸಮೀಕ್ಷೆದಾರರಿಗೆ ಗುರುತಿನ ಚೀಟಿ ನೀಡಲಾಗಿದೆ. ವೈಜ್ಞಾನಿಕ ಸಮೀಕ್ಷೆಗಾಗಿ ಮೊಬೈಲ್ ಅಪ್ಲಿಕೇಶನ್ ಸಿದ್ಧಪಡಿಸಲಾಗಿದ್ದು, ಅದರ ಮೂಲಕವೇ ದಾಖಲೀಕರಣ ಮಾಡಲಾಗುತ್ತದೆ. ಮತದಾರರ ಪಟ್ಟಿಯಲ್ಲಿರುವ ವಿಳಾಸದ ಆಧಾರದ ಮೇಲೆ ಮನೆ ಮನೆ ಭೇಟಿ ನೀಡಿ ಪರಿಶಿಷ್ಟ ಜಾತಿಯ ಕುಟುಂಬಗಳನ್ನು ಗುರುತಿಸಲಾಗುತ್ತದೆ. ಪರಿಶಿಷ್ಟ ಜಾತಿಯವರ ಮನೆಯ ಪ್ರತಿಯೊಂದು ಸದಸ್ಯನ ಮಾಹಿತಿಯನ್ನು ಮೊಬೈಲ್ ಆಪ್ನಲ್ಲಿ ಭರ್ತಿ ಮಾಡಲಾಗುತ್ತದೆ. ಜಾತಿ ಹಾಗೂ ಮೂಲ ಜಾತಿಯನ್ನು ಕಡ್ಡಾಯವಾಗಿ ನಮೂದು ಮಾಡಬೇಕಾಗಿದೆ. ಸಮೀಕ್ಷೆದಾರರು ಮನೆ ಮುಖ್ಯಸ್ಥರ ಮತದಾರರ ಪಟ್ಟಿಯಲ್ಲಿನ ಕ್ರಮಸಂಖ್ಯೆಯನ್ನು ನಮೂದಿಸಲಿದ್ದಾರೆ. ಪರಿಶಿಷ್ಟ ಜಾತಿಯವರ ಪಡಿತರ ಕಾರ್ಡ್, ಆಧಾರ್ ಕಾರ್ಡ್ ಸಂಖ್ಯೆ ನಮೂದಿಸುತ್ತಾರೆ.