ಬೆಂಗಳೂರು: ಪರಿಶಿಷ್ಟ ಜಾತಿ ಒಳ ಮೀಸಲಾತಿ ಕುರಿತು ಗೃಹ ಸಚಿವ ಪರಮೇಶ್ವರ್ ನೇತೃತ್ವದಲ್ಲಿ ಅಕ್ಟೋಬರ್ 21ರಂದು ಸಭೆ ನಡೆಯುತ್ತಿದ್ದು, ಸಭೆಯಲ್ಲಿ ಮಹತ್ವದ ನಿರ್ಧಾರ ಕೈಗೊಳ್ಳುವ ಸಾಧ್ಯತೆಗಳಿವೆ.
ಪರಮೇಶ್ವರ್ ಅವರು ದಲಿತ ಮುಖಂಡರಾಗಿದ್ದು, ಅಕ್ಟೋಬರ್ 21 ರಂದು ವಿಧಾನಸೌಧದಲ್ಲಿ ಎಸ್‌ಸಿ ಸಮುದಾಯದ ಶಾಸಕರ ಸಭೆ ನಡೆಸಿ ಅಂತಿಮ ನಿರ್ಧಾರ ಕೈಗೊಂಡು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ವರದಿ ಸಲ್ಲಿಸುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.
ಸಮಾಜ ಕಲ್ಯಾಣ ಸಚಿವ ಡಾ.ಎಚ್.ಸಿ.ಮಹದೇವಪ್ಪ, ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಕೆ.ಎಚ್.ಮುನಿಯಪ್ಪ, ಆರ್ಡಿಪಿಆರ್ ಸಚಿವ ಪ್ರಿಯಾಂಕ್ ಖರ್ಗೆ, ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಶಿವರಾಜ ತಂಗಡಗಿ, ವಿಧಾನಸಭೆ ಉಪಸಭಾಪತಿ ರುದ್ರಪ್ಪ ಎಂ.ಲಮಾಣಿ ಸೇರಿದಂತೆ ಇತರರು ಸಭೆಯಲ್ಲಿ ಪಾಲ್ಗೊಳ್ಳುವ ನಿರೀಕ್ಷೆಯಿದೆ.
ಈಗಾಗಲೇ ಮಳವಳ್ಳಿ ಶಾಸಕ ಪಿ.ಎಂ.ನರೇಂದ್ರಸ್ವಾಮಿ ನೇತೃತ್ವದ ಸಮಿತಿ, ಎಂಎಲ್‌ಸಿ ಸುಧಾಮದಾಸ್ ಸೇರಿದಂತೆ ಸದಸ್ಯರನ್ನೊಳಗೊಂಡ ಸಮಿತಿಯು ಮೀಸಲಾತಿ ವರ್ಗೀಕರಣದ ಕುರಿತು ಹಲವು ಸುತ್ತಿನ ಚರ್ಚೆ ನಡೆಸಿದೆ.
ಏತನ್ಮಧ್ಯೆ ಅಕ್ಟೋಬರ್ 18 ರಂದು ನಡೆಯುವ ಸಚಿವ ಸಪುಟ ಸಭೆಯಲ್ಲಿ ಜಾತಿ ಗಣತಿ ಕುರಿತಂತೆಯೂ ಚರ್ಚೆಗಳು ನಡೆಯಲಿದ್ದು, ಸಭೆಯಲ್ಲಿ ಜಾತಿ ಗಣತಿ ವರದಿ ಬಿಡುಗಡೆ ಕುರಿತು ನಿರ್ಧಾರ ಕೈಗೊಳ್ಳುವ ಸಾಧ್ಯತೆ ಎನ್ನಲಾಗಿದೆ.
ಇನ್ನು ಎಸ್ಸಿ ವರ್ಗದ ಎಲ್ಲಾ ನಾಯಕರು ಒಳಮೀಸಲಾತಿಗೆ ಒಪ್ಪಿಗೆ ನೀಡಿದ್ದಾರೆ. ಆದರೆ, ವೈಜ್ಞಾನಿಕ ರೀತಿಯಲ್ಲಿರಬೇಕು ಎಂದು ಒತ್ತಾಯಿಸಿದ್ದಾರೆ. ಎಲ್ಲಾ ನಾಯಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ನಿರ್ಧಾರ ಕೈಗೊಳ್ಳಲಾಗುವುದು ಎಂದು ಶಾಸಕರೊಬ್ಬರು ಹೇಳಿದ್ದಾರೆ.