ಬೆಂಗಳೂರು: ಪರಿಶಿಷ್ಠ ಜಾತಿ ಒಳಮೀಸಲಾತಿ ಸಂಬಂಧ ಸಮೀಕ್ಷೆ ಅವಧಿಯನ್ನು ವಿಸ್ತರಿಸಲು ತೀರ್ಮಾನಿಸಲಾಗಿದೆ ಎಂದು ಏಕಸದಸ್ಯ ಆಯೋಗ ಅಧ್ಯಕ್ಷ ಹೆಚ್.ಎನ್.ನಾಗಮೋಹನ್ ದಾಸ್ ತಿಳಿಸಿದ್ದಾರೆ.

ವಿಧಾನಸೌಧದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಶಾಸಕರುಗಳು, ಹಲವು ಸಂಘ-ಸಂಸ್ಥೆಗಳು ಸಮೀಕ್ಷೆ ವೇಳೆ ಉದ್ಭವಿಸಿರುವ ಕೆಲವೊಂದು ಸಮಸ್ಯೆಗಳನ್ನು ಸರಿಪಡಿಸಲು ಸಮೀಕ್ಷಾ ದಿನಾಂಕವನ್ನು ವಿಸ್ತರಿಸಬೇಕೆಂದು ಕೋರಿದ್ದಾರೆ. ಈ ಹಿನ್ನೆಲೆಯಲ್ಲಿ ಅವಧಿ ವಿಸ್ತರಿಸಲು ತೀರ್ಮಾನಿಸಲಾಗಿದೆ. ಅದರಂತೆ ಮನೆ-ಮನೆ ಭೇಟಿ ನೀಡಿ ಸಮೀಕ್ಷೆಯನ್ನು ಮೇ 25ರವರೆಗೆ ವಿಸ್ತರಿಸಲಾಗಿದೆ. ವಿಶೇಷ ಶಿಬಿರ (ಸಮೀಕ್ಷಾ ಬ್ಲಾಕ್ ವ್ಯಾಪ್ತಿಯಲ್ಲಿ) ಮೇ26ರಿಂದ ಮೇ28ರವರೆಗೆ ವಿಸ್ತರಿಸಲಾಗಿದೆ. ಆನ್ಲೈನ್ ಮೂಲಕ ಸ್ವಯಂ ಘೋಷಣೆ ದಿನಾಂಕವನ್ನು ಮೇ19ರಿಂದ ಮೇ28ರವರೆಗೆ ವಿಸ್ತರಿಸಲಾಗಿದೆ ಎಂದು ತಿಳಿಸಿದರು.
“ಒಳಮೀಸಲಾತಿ ಸಂಬಂಧ ಸಮೀಕ್ಷೆಯನ್ನು ಮೇ5ರಿಂದ ಗಣತಿದಾರರು ಮನೆ-ಮನೆಗೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸುವುದರ ಮೂಲಕ ರಾಜ್ಯಾದ್ಯಂತ ಈಗಾಗಲೇ ಪ್ರಾರಂಭಿಸಲಾಗಿದೆ. ಈ ಮೊದಲು ಸಮೀಕ್ಷೆಯನ್ನು 3 ಹಂತಗಳಲ್ಲಿ ನಡೆಸಲು ತೀರ್ಮಾನಿಸಲಾಗಿದೆ. ಅದರಂತೆ ಮನೆ ಮನೆಗೆ ತೆರಳಿ ಸಮೀಕ್ಷೆ ನಡೆಸುವ ದಿನಾಂಕವನ್ನು ಮೇ5ರಿಂದ ಮೇ17ರವರೆಗೆ ಮಾಡಲು ನಿಗದಿಪಡಿಸಲಾಗಿತ್ತು. ವಿಶೇಷ ಶಿಬಿರ (ಸಮೀಕ್ಷಾ ಬ್ಲಾಕ್ ವ್ಯಾಪ್ತಿಯಲ್ಲಿ) ದಿನಾಂಕವನ್ನು ಮೇ19ರಿಂದ ಮೇ21ರವರೆಗೆ ನಿಗದಿಪಡಿಸಲಾಗಿತ್ತು. ಆನ್ಲೈನ್ ಮೂಲಕ ಸ್ವಯಂ ಘೋಷಣೆಗೆ ಮೇ19 ರಿಂದ ಮೇ23ರವರೆಗೆ ನಿಗದಿಪಡಿಸಲಾಗಿತ್ತು.
ಮೇ15ರ ಅಂತ್ಯಕ್ಕೆ ಮನೆ ಮನೆ ಸಮೀಕ್ಷೆಯಲ್ಲಿ 73.72%ರಷ್ಟು ಪ್ರಗತಿ ಸಾಧಿಸಲಾಗಿದೆ. ರಾಜ್ಯದ 31 ಜಿಲ್ಲೆಗಳಲ್ಲಿ 18,41,258 ಎಸ್ಸಿ ಕುಟುಂಬಗಳ ಸಮೀಕ್ಷೆ ನಡೆಸಲಾಗಿದ್ದರೆ, ಬಿಬಿಎಂಪಿ ವ್ಯಾಪ್ತಿಯಲ್ಲಿ 55,027 ಎಸ್ಸಿ ಕುಟುಂಬಗಳನ್ನು ಸಮೀಕ್ಷೆ ನಡೆಸಲಾಗಿದೆ. ಆ ಮೂಲಕ ಒಟ್ಟು 18,96,285 ಎಸ್ಸಿ ಕುಟುಂಬಗಳನ್ನು ಸಮೀಕ್ಷೆ ನಡೆಸಲಾಗಿದೆ. ಸುಮಾರು 1,10,32,556 ಎಸ್ಸಿಯೇತರ ಕುಟುಂಬಗಳನ್ನು ಭೇಟಿ ಮಾಡಲಾಗಿದೆ” ಎಂದರು.
“ಇಂದು ಮಧ್ಯಾಹ್ನ 12 ಗಂಟೆವರೆಗೆ 49,814 ಎಸ್ಸಿ ಕುಟುಂಬಗಳ ಸಮೀಕ್ಷೆ ನಡೆಸಲಾಗಿದೆ. ಸಂಜೆ ವೇಳೆಗೆ ಒಟ್ಟು ಎಸ್ಸಿ ಕುಟುಂಬಗಳ ಸಂಖ್ಯೆ 20 ಲಕ್ಷ ದಾಟುವ ವಿಶ್ವಾಸ ಇದೆ. ಸದ್ಯ 31,006 ಜನ ಲಾಗ್ಇನ್ ಆಗಿ ಸಮೀಕ್ಷೆ ನಡೆಸುತ್ತಿದ್ದಾರೆ. 2011 ಜಾತಿ ಗಣತಿ ಪ್ರಕಾರ ರಾಜ್ಯದಲ್ಲಿ 21,40,304 ಪರಿಶಿಷ್ಟ ಜಾತಿ ಕುಟುಂಬಗಳಿದ್ದು, 2025ರ ವೇಳೆಗೆ ಸುಮಾರು 25,72,050 ಕುಟುಂಬಗಳು ಇರಬಹುದು ಎಂದು ಅಂದಾಜಿಸಲಾಗಿದೆ” ಎಂದು ತಿಳಿಸಿದರು.
ಅಪಾರ್ಟ್ಮೆಂಟ್ಗಳಲ್ಲಿ ಸಮೀಕ್ಷೆಗೆ ಅಡ್ಡಿಪಡಿಸುತ್ತಿರುವುದು ಆಯೋಗದ ಗಮನಕ್ಕೆ ಬಂದಿದೆ. ಅಡ್ಡಿ ಪಡಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ಯಾರೂ ಸಮೀಕ್ಷೆ ಕರ್ತವ್ಯಕ್ಕೆ ಅಡ್ಡಿಪಡಿಸಬಾರದು. ನಿಮ್ಮಲ್ಲಿನ ಮಾಹಿತಿ ನೀಡಿ ಅಷ್ಟೇ. ಯಾರೂ ಸಮೀಕ್ಷೆಗೆ ತಡೆ ಮಾಡುತ್ತಾರೆ ಅವರು ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಪಾಲಿಕೆಗೆ ಈ ಸಂಬಂಧ ಕ್ರಮ ಕೈಗೊಳ್ಳಲು ಸೂಚನೆ ನೀಡಿದ್ದೇವೆ” ಎಂದರು.
“ಎಸ್ಸಿಯೇತರರು ಅಂದರೆ ಯಾವುದೇ ಮಾಹಿತಿ ಪಡೆಯುವುದು ಬೇಡ ಅಂದಿದ್ದೇವೆ. ಸಮೀಕ್ಷೆ ಮುಗಿದ ಮೇಲೆ ದತ್ತಾಂಶ ವಿಶ್ಲೇಷಣೆ ಮಾಡುತ್ತೇವೆ. ಮಾನದಂಡದ ಪ್ರಕಾರ ಏನೆಲ್ಲಾ ವರ್ಗೀಕರಣ ಆಗಬೇಕು ಅದನ್ನು ಮಾಡಲಿದ್ದೇವೆ. ಇನ್ನು ಯಾವುದೇ ವಿಳಂಬ ಆಗದಂತೆ ವರದಿ ನೀಡುತ್ತೇವೆ. ಆದಿ ಕರ್ನಾಟಕ, ಆದಿ ಆಂಧ್ರ, ಆದಿ ಜಾಂಬವ ಸಂಬಂಧ ಜಾತಿ ಹೆಸರು ಹೇಳಬೇಕು. ಒಂದು ವೇಳೆ ಆದಿ ಕರ್ನಾಟಕ ಅಂದರೆ ಈ 101ರಲ್ಲಿ ಯಾವ ಉಪಜಾತಿ ಎಂದು ಹೇಳಬೇಕು. ಹೇಳಿಲ್ಲವಾದರೆ ಹಾಗೇ ನಮೂದು ಮಾಡಲಾಗುತ್ತದೆ. ಕೆಲ ಮಾನದಂಡದ ಆಧಾರದ ಮೇಲೆ ನಾವು ಮುಂದೆ ಆದಿ ಕರ್ನಾಟಕ, ಆದಿ ಆಂಧ್ರದ ಜಾತಿಯವರನ್ನು ಯಾವ ಉಪಜಾತಿ ಎಂದು ತೀರ್ಮಾನಿಸುತ್ತೇವೆ” ಎಂದು ಹೇಳಿದರು.
ಗಣತಿದಾರರಿಗೆ ಗೌರವಧನ ಪಾವತಿ ಎಷ್ಟು?: ಸಮೀಕ್ಷೆಯಲ್ಲಿ ಪಾಲ್ಗೊಂಡಿರುವ ಶಿಕ್ಷರಿಗೆ ಶಿಕ್ಷಣ ಇಲಾಖೆಯ ಮಾನದಂಡದ ಪ್ರಕಾರ, ಗೌರವಧನ ನೀಡಲಾಗುತ್ತದೆ. ಶಿಕ್ಷಕೇತರರಿಗೆ ತಲಾ 5,000 ರೂ. ಕೊಡಲಾಗುತ್ತದೆ. ಜೊತೆಗೆ ಪ್ರತಿ ಮನೆಗೆ ತಲಾ 100 ರೂ. ಗೌರವಧನ ಪಾವತಿ ಮಾಡಲಾಗುತ್ತದೆ” ಎಂದು ತಿಳಿಸಿದರು.
ಮಾಹಿತಿ ನೀಡದ ಇಲಾಖೆಗಳಿಗೆ ನೋಟಿಸ್: “ಎಸ್ಸಿ ಸಿಬ್ಬಂದಿ ವರ್ಗದ ಉಪಜಾತಿಗಳ ಬಗ್ಗೆ ಇಲಾಖಾವಾರು ಮಾಹಿತಿ ಕೇಳಲಾಗಿದ್ದು, ರಾಜ್ಯದಲ್ಲಿನ ವಿಶ್ವವಿದ್ಯಾಲಯದಲ್ಲಿ ವ್ಯಾಸಂಗ ಮಾಡುತ್ತಿರುವ ಎಸ್ಸಿ ವಿದ್ಯಾರ್ಥಿಗಳ ಮಾಹಿತಿ ಬಂದಿದೆ. ಅದರ ವಿಶ್ಲೇಷಣೆ ನಡೆಸಲಾಗುತ್ತಿದೆ. ಉಳಿದಂತೆ 40 ಇಲಾಖೆಗಳಿಂದ ಎಸ್ಸಿ ಉದ್ಯೋಗಿಗಳ ಉಪಜಾತಿಗಳ ಮಾಹಿತಿ ಬಂದಿದೆ. ಅದರ ಜೊತೆಗೆ ಎಸ್ಸಿ ಸಮುದಾಯದ ರಾಜಕೀಯ ಪ್ರಾತಿನಿದ್ಯ ಬಗ್ಗೆನೂ ಮಾಹಿತಿ ಕೇಳಿದ್ದೇವೆ. ಅದರ ಮಾಹಿತಿಯೂ ಬಂದಿದೆ. ಪೂರ್ಣ ಮಾಹಿತಿ ನೀಡದ ಇಲಾಖೆಗೆ ಎಚ್ಚರಿಕೆ ನೀಡಿದ್ದು, ನೋಟಿಸ್ ಕೂಡ ನೀಡಲಾಗಿದೆ” ಎಂದರು.
ಬಿಬಿಎಂಪಿ ವ್ಯಾಪ್ತಿಯಲ್ಲಿ ಸಮೀಕ್ಷೆ ಕುಂಠಿತ: ಪ್ರಾರಂಭಿಕ ಹಂತದ ಸಮೀಕ್ಷೆಯಲ್ಲಿ ಬಿಬಿಎಂಪಿ ವ್ಯಾಪ್ತಿಯಲ್ಲಿ ಪ್ರಗತಿ ಕುಂಠಿತವಾಗಿದ್ದು, ಈ ಬಗ್ಗೆ ಬಿಬಿಎಂಪಿಯ ಮುಖ್ಯ ಆಯುಕ್ತರು ಹಾಗೂ ವಲಯ ಆಯುಕ್ತರುಗಳೊಂದಿಗೆ ಮೇ12ರಂದು ಸಭೆ ನಡೆಸಲಾಗಿದೆ. ಬಿಬಿಎಂಪಿ ವ್ಯಾಪ್ತಿಯಲ್ಲಿ ಸರ್ಕಾರಿ ಶಾಲಾ ಶಿಕ್ಷಕರ ಕೊರತೆಯಿರುವುದನ್ನು ಗಮನಿಸಿ, ಸಮರ್ಪಕವಾಗಿ ಸಮೀಕ್ಷೆಯನ್ನು ಕೈಗೊಳ್ಳಲು ಸಮರ್ಥರಿರುವ ಪದವಿ ಹೊಂದಿದ ಆಶಾ ಕಾರ್ಯಕರ್ತೆಯರನ್ನು ಅಥವಾ ಅಂಗನವಾಡಿ ಕಾರ್ಯಕರ್ತರನ್ನು ಗಣತಿದಾರರನ್ನಾಗಿ ನೇಮಕ ಮಾಡಿಕೊಳ್ಳಲು ಸೂಚಿಸಲಾಗಿದೆ. 2ನೇ ಹಂತದ ತರಬೇತಿಯನ್ನು ಕೂಡ ನೀಡಲಾಗಿದೆ. ಪ್ರಸ್ತುತ ಸಮೀಕ್ಷೆ ತ್ವರಿತಗತಿಯಲ್ಲಿ ಸಾಗುತ್ತಿದೆ” ಎಂದು ತಿಳಿಸಿದರು.