ಬೆಂಗಳೂರು: ಹೆಣ್ಮಕ್ಕಳು ಯಾವಾಗಲೂ ಟಾಪ್ ಅನ್ನೋದು ಮತ್ತೊಮ್ಮೆ ಸಾಬೀತಾಗಿದೆ. ಇಂದು ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟವಾಗಿದ್ದು, ರಾಜ್ಯದಲ್ಲಿ ವಿದ್ಯಾರ್ಥಿನಿಯರೇ ಮೇಲುಗೈ ಸಾಧಿಸಿದ್ದಾರೆ. ಶಿಕ್ಷಣ ಸಚಿವ ಮಧು ಬಂಗಾರಪ್ಪ ಇಂದು ರಾಜ್ಯದಲ್ಲಿ ದ್ವಿತೀಯ ಪಿಯುಸಿ ಫಲಿತಾಂಶವನ್ನು ಪ್ರಕಟಿಸಿದರು. ರಾಜ್ಯದಲ್ಲಿ ಕಲಾ ವಿಭಾಗದಲ್ಲಿ ಬಳ್ಳಾರಿಯ ಪಿಯು ಕಾಲೇಜಿನ ಸಂಜನಾ ಬಾಯಿ ಪ್ರಥಮ ಸ್ಥಾನದಲ್ಲಿ ಉತ್ತೀರ್ಣರಾಗಿದ್ದಾರೆ.

ರಾಜ್ಯದಲ್ಲಿ 6,37,805 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. ಇದರಲ್ಲಿ ಒಟ್ಟು 4,68,439 ಮಕ್ಕಳು ತೇರ್ಗಡೆಯಾಗಿದ್ದಾರೆ. ಫಲಿತಾಂಶದಲ್ಲಿ ಉತ್ತಮ ಅಂಕ ಪಡೆದ ರಾಜ್ಯದ ಜಿಲ್ಲೆಗಳಲ್ಲಿ ಉಡುಪಿಗೆ ಮೊದಲ ಸ್ಥಾನ (93.90%), ಯಾದಗಿರಿಗೆ (48.4%) ಕೊನೆಯ ಸ್ಥಾನ ಇದೆ. ದ್ವಿತೀಯ ಸ್ಥಾನ ದಕ್ಷಿಣ ಕನ್ನಡ (93.57%), ಬೆಂಗಳೂರು ದಕ್ಷಿಣ (85.36%) ತೃತೀಯ ಸ್ಥಾನ, ಕೊಡಗಿಗೆ (83.84%) ನಾಲ್ಕನೇ ಸ್ಥಾನ ಸಿಕ್ಕಿದೆ.
ಇನ್ನೂ ಬಳ್ಳಾರಿಯ ಸಂಜನಾ ಬಾಯಿ ಕಲಾ ವಿಭಾಗದಲ್ಲಿ 600ಕ್ಕೆ 597 ಅಂಕ ಪಡೆದು ರಾಜ್ಯಕ್ಕೆ ಪ್ರಥಮ ಸ್ಥಾನದಲ್ಲಿ ತೇರ್ಗಡೆಯಾಗಿದ್ದಾರೆ. ಎರಡನೇ ಸ್ಥಾನದಲ್ಲಿ 600ಕ್ಕೆ 596 ಅಂಕಗಳನ್ನು ಪಡೆದು ನಿರ್ಮಾಲಾ ಉತ್ತೀರ್ಣರಾಗಿದ್ದಾರೆ. ವಾಣಿಜ್ಯ ವಿಭಾಗದಲ್ಲಿ ದೀಪಶ್ರೀ 600ಕ್ಕೆ 599 ಅಂಕ ಪಡೆದಿದ್ದರೆ, ವಿಜ್ಞಾನ ವಿಭಾಗದಲ್ಲಿ ಅಮೂಲ್ಯ ಕಾಮತ್ ಹೆಚ್ಚು ಅಂಕ (600ಕ್ಕೆ 599) ಗಳಿಸಿ ಪ್ರಥಮ ಸ್ಥಾನದಲ್ಲಿ ಉತ್ತೀರ್ಣರಾಗಿದ್ದಾರೆ.
134 ಕಾಲೇಜುಗಳಲ್ಲಿ 100% ಫಲಿತಾಂಶ ಬಂದಿದೆ. ಇದರಲ್ಲಿ 13 ಕಾಲೇಜುಗಳು ಸರ್ಕಾರಿ ಕಾಲೇಜುಗಳಾಗಿವೆ. 123 ಕಾಲೇಜುಗಳು ಶೂನ್ಯ ಫಲಿತಾಂಶ ಪಡೆದಿವೆ. ರಾಜ್ಯದಲ್ಲಿ ಪ್ರಥಮ ಸ್ಥಾನದಲ್ಲಿ ತೇರ್ಗಡೆಯಾಗಿರುವ ಸಂಜನಾ ಬಾಯಿ ಸಂತಸ ವ್ಯಕ್ತಪಡಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಸಂಜನಾ, ‘ನನಗೆ ತುಂಬಾ ಖುಷಿಯಾಗಿದೆ. ಅಪ್ಪ ಅಮ್ಮ ತುಂಬಾ ಸಹಕಾರ ಮಾಡುತ್ತಿದ್ದರು. ಶಿಕ್ಷಕರು ತುಂಬಾ ಸಹಾಯ ಮಾಡುತ್ತಿದ್ದರು. ನಾನು ಕೂಡ ನಿತ್ಯ ಮೂರರಿಂದ ನಾಲ್ಕು ಗಂಟೆ ಓದಿಕೊಳ್ಳುತ್ತಿದ್ದೇ. ಎಲ್ಲಾ ಚಾಪ್ಟರ್ ಕವರ್ ಮಾಡ್ತಾಯಿದ್ದೆ. ನನಗೆ ಎಷ್ಟು ಸಾಧ್ಯನೋ ಅಷ್ಟು ಬೆಸ್ಟ್ ಕೊಟ್ಟಿದ್ದೇನೆ’ ಎಂದಿದ್ದಾರೆ.
ಇನ್ನೂ ಅಮೂಲ್ಯ ಕಾಮತ್ ಮಾತನಾಡಿ, ‘ತುಂಬಾ ಖುಷಿ ಆಗಿದೆ. ಕಾಲೇಜಿನಲ್ಲಿ ಶಿಕ್ಷಣ ತುಂಬಾ ಚೆನ್ನಾಗಿ ಕೊಟ್ಟರು. ಶಿಕ್ಷಕರು ನಮಗೆ ಪರೀಕ್ಷೆಗೆ ತುಂಬಾ ಚೆನ್ನಾಗಿ ತಯಾರು ಮಾಡುತ್ತಿದ್ದರು. ನಾನು ಕೂಡ ಅದೆನ್ನೆಲ್ಲ ಚೆನ್ನಾಗಿ ಓದಿಕೊಳ್ಳುತ್ತಿದ್ದೆ. ಕ್ಲಾಸ್ ಆದ ತಕ್ಷಣ ಓದಿಕೊಳ್ಳುತ್ತಿದ್ದೆ. ನಂತರ ಅದನ್ನು ರಿವೈಸ್ ಮಾಡುತ್ತಿದ್ದೆ. ಟೆಸ್ಟ್ಗಳು ಆಗುವುದರಿಂದ ನನಗೆ ಪರೀಕ್ಷೆ ಭಯ ಕೂಡ ಇರಲಿಲ್ಲ. ಬೆಳಗ್ಗೆ ಎರಡು ಗಂಟೆ, ರಾತ್ರಿ ಮಲಗುವ ಮುನ್ನ ಸ್ವಲ್ಪ ಓದಿಕೊಳ್ಳುತ್ತಿದೆ. ರಿವೈಸ್ ಮಾಡಿದಷ್ಟು ವಿಷಯ ಮನಸ್ಸಿನಲ್ಲಿ ಉಳಿಯುತ್ತದೆ’ ಎಂದು ಹೇಳಿದರು.