ಬೆಂಗಳೂರು: ಕ್ಯಾಬ್ನ ಚಾಲಕನಿಂದ ಲೈಂಗಿಕ ದೌರ್ಜನ್ಯಕ್ಕೊಳಗಾದ ಯುವತಿಗೆ ಪರಿಹಾರವಾಗಿ 5 ಲಕ್ಷ ರೂ ನೀಡುವಂತೆ ಓಲಾ ಕ್ಯಾಬ್ನ ಮಾತೃ ಸಂಸ್ಥೆ ಎಎನ್ಐ ಟೆಕ್ನಾಲಜೀಸ್ ಪ್ರೈವೇಟ್ ಲಿಮಿಟೆಡ್ಗೆ ಹೈಕೋರ್ಟ್ ನಿರ್ದೇಶಿಸಿದೆ.
ಲೈಂಗಿಕ ಕಿರುಕುಳಕ್ಕೆ ಒಳಗಾಗಿದ್ದ ಸಂತ್ರಸ್ತ ಮಹಿಳೆ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂಜಿಎಸ್ ಕಮಲ್ ಅವರಿದ್ದ ನ್ಯಾಯಪೀಠ ಈ ಆದೇಶ ನೀಡಿದೆ. ಜೊತೆಗೆ, ಕೆಲಸದ ಸ್ಥಳದಲ್ಲಿ ಮಹಿಳೆಯರ ಲೈಂಗಿಕ ಕಿರುಗಳು ತಡೆಗಟ್ಟುವ ಕಾಯಿದೆ 2013ರ ನಿಬಂಧನೆಗಳ ಪ್ರಕಾರ ಆಂತರಿಕೆ ತನಿಖೆ ನಡೆಸಬೇಕು. ಈ ಸಂಬಂಧ 90 ದಿನಗಳಲ್ಲಿ ಪ್ರಕ್ರಿಯೆ ಪೂರ್ಣಗೊಳಿಸಬೇಕು ಹಾಗೂ ಸಂತ್ರಸ್ತೆಯ ಗುರುತು ಬಹಿರಂಗವಾಗದಂತೆ ನೋಡಿಕೊಳ್ಳಬೇಕು ಎಂದು ಪೀಠ ತಿಳಿಸಿದೆ. ಅಲ್ಲದೇ, ಅರ್ಜಿದಾರೆಗೆ ವ್ಯಾಜ್ಯದ ವೆಚ್ಚವಾಗಿ ಹೆಚ್ಚುವರಿ 50,000 ರೂ.ಗಳನ್ನು ಪಾವತಿಸುವಂತೆ ಸೂಚಿಸಲಾಗಿದೆ.
ಅರ್ಜಿದಾರರು 2019 ರಲ್ಲಿ ಲೈಂಗಿಕ ಕಿರುಕುಳಕ್ಕೆ ಒಳಗಾಗಿದ್ದರು ಮತ್ತು ಚಾಲಕನ ವಿರುದ್ಧ ಕ್ರಮ ಕೋರಿ ಎಎನ್ಐ ಟೆಕ್ನಾಲಜೀಸ್ಗೆ ನೀಡಿದ ದೂರನ್ನು ಸಂಸ್ಥೆ ಪರಿಗಣಿಸಲಿಲ್ಲ. ಆಂತರಿಕ ದೂರುಗಳ ಸಮಿತಿಯು ಈ ವಿಷಯದ ಬಗ್ಗೆ ವಿಚಾರಣೆ ನಡೆಸುವ ಅಧಿಕಾರವನ್ನು ಹೊಂದಿಲ್ಲ ಎಂದು ‘ಬಾಹ್ಯ ಕಾನೂನು ಸಲಹೆಗಾರ’ ಹೇಳಿದ್ದರು. ಇದನ್ನು ಪ್ರಶ್ನಿಸಿ ಹೈಕೋರ್ಟ್ ಮೊರೆ ಹೋಗಿದ್ದರು.
ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು, ಓಲಾ ಚಾಲಕರು ಒಂದೇ ವೇದಿಕೆಯಲ್ಲದೇ, ಎರಡೂ ಮೂರು ವೇದಿಕೆಗಳಲ್ಲಿ ಸೇವೆ ಸಲ್ಲಿಸುತ್ತಿದ್ದು, ಸಾರಿಗೆ ಕಂಪನಿಯಂತೆ ಕೆಲಸ ಮಾಡುತ್ತಿದ್ದಾರೆ. ಕಂಪನಿ ಮತ್ತು ಚಾಲಕರ ನಡುವೆ ಯಾವುದೇ ಒಪ್ಪಂದದ ಗೌಪ್ಯತೆ ಇಲ್ಲವಾಗಿದೆ. ಚಾಲಕರ ವರ್ತನೆಗೆ ಕಂಪೆನಿ ಓಲಾ ಕಂಪನಿ ಜವಾಬ್ದಾರರಾಗಬೇಕು. ಆದರೆ, ಚಾಲಕನ ಕೃತ್ಯಕ್ಕೆ ನಾವು ಜವಾಬ್ದಾರರಲ್ಲ ಎಂಬ ಅಂಶ ಗೊತ್ತಾಗಿದ್ದರೆ ನಮ್ಮ ಕಕ್ಷಿದಾರರು ಕ್ಯಾಬ್ ನ್ನು ಪಡೆದುಕೊಳ್ಳುತ್ತಿರಲಿಲ್ಲ. ಹೀಗಾಗಿ ಓಲಾ ಸಂಸ್ಥೆಯನ್ನು ಹೊಣೆಗಾರರನ್ನಾಗಿ ಮಾಡಬೇಕು ಎಂದು ಪೀಠಕ್ಕೆ ವಿವರಿಸಿದ್ದರು.