ಬಸ್ನಲ್ಲಿ ಮಹಿಳೆಗೆ ಲೈ*ಗಿಕ ಕಿರುಕುಳ: ಕಂಡಕ್ಟರ್ ವಜಾಗೆ ಸಚಿವರ ಆದೇಶ

ಬಸ್ನಲ್ಲಿ ಮಹಿಳೆಗೆ ಲೈ*ಗಿಕ ಕಿರುಕುಳ: ಕಂಡಕ್ಟರ್ ವಜಾಗೆ ಸಚಿವರ ಆದೇಶ

ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವು (KSRTC) ತನ್ನ ಕಾರ್ಯಾಚರಣೆಯಿಂದಲೇ ಸಾಕಷ್ಟು ಹೆಸರು ಮಾಡಿದೆ. ಪ್ರಯಾಣಿಕರ ಅಚ್ಚುಮೆಚ್ಚಿನ ಸಾರಿಗೆಯಾಗಿದೆ. ಪ್ರಯಾಣಿಕರಿಗೆ ಆರಾಮದಾಯಕ ಪ್ರಯಾಣ ಅನುಭವ ನೀಡಲು ಹೊಸ ಹೊಸ ಬಸ್ ಖರೀದಿಸುತ್ತಿದೆ. ಹೀಗೆ ಉತ್ತಮ ಹೆಸರಿರುವ ನಿಗಮದ ಸಿಬ್ಬಂದಿಯೊಬ್ಬ ತಾನು ಮಾಡಿದ ಅಸಹ್ಯಕರ ನಡವಳಿಕೆಯಿಂದ ಕೆಲಸದಿಂದ ಹೊರ ನಡೆದಿದ್ದಾನೆ. ಆತನ ನಡವಳಿಕೆ ವಿರುದ್ಧ ತಕ್ಕ ಕ್ರಮವಹಿಸಿರುವ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಅವರು ನಿರ್ವಾಹಕನನ್ನು ವಜಾಗೊಳಿಸುವಂತೆ ಸೂಚನೆ ನೀಡಿದ್ದಾರೆ.

ರಾಜ್ಯದ ಕರಾವಳಿ ಭಾಗದ ಮಂಗಳೂರು ವಿಭಾಗದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ (KSRTC) ಬಸ್ನಲ್ಲಿ ನಿರ್ವಾಹಕನೊಬ್ಬ ಮಹಿಳಾ ಪ್ರಯಾಣಿಕರೊಡನೆ ಅತ್ಯಂತ ಕೆಟ್ಟದಾಗಿ ನಡೆದುಕೊಂಡಿದ್ದ. ಈತನ ಕೃತ್ಯದ ವಿಡಿಯೋ ಅದೇ ಬಸ್ನಲ್ಲಿದ್ದ ಸಹ ಪ್ರಯಾಣಿಕರೊಬ್ಬರು ಸೆರೆ ಹಿಡಿದು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದರಿಂದ ಪ್ರಕರಣ ಬೆಳಕಿಗೆ ಬಂದಿದೆ.

ವಿಡಿಯೋ ವೈರಲ್ ಆಗುತ್ತಿದ್ದಂತೆ ಅದನ್ನು ಗಂಭೀರವಾಗಿ ಪರಿಗಣಿಸಿರುವ ರಾಜ್ಯ ಸಾರಿಗೆ ಇಲಾಖೆ ಹಾಗೂ ಸಾರಿಗೆ ಸಚಿವ ರಾಮಮಲಿಂಗಾ ರೆಡ್ಡಿ ಅವರು ಆ ನಿರ್ವಾಹಕನ ವಜಾಗೆ ಸೂಚಿಸಿದರು. ಮೇಲ್ನೋಟಕ್ಕೆ ಆರೋಪ ಸಾಬೀತಾಗಿರುವ ಹಿನ್ನೆಲೆಯಲ್ಲಿ ಈಗಾಗಲೇ ನಿರ್ವಾಹಕನನ್ನು ಅಮಾನತು ಮಾಡಿರುವುದು ಸರಿಯಷ್ಟೇ. ಬಸ್ಸಿನಲ್ಲಿ ಪ್ರಯಾಣಿಸುವ ಪ್ರತಿಯೊಬ್ಬ ಹೆಣ್ಣು ಮಕ್ಕಳೊಡನೆ ಗೌರವದೊಂದಿಗೆ ನಡೆದುಕೊಳ್ಳುವುದು ನಮ್ಮ ಸಿಬ್ಬಂದಿಗಳ ಆದ್ಯ ಕರ್ತವ್ಯವಾಗಿರಬೇಕು. ಈ ರೀತಿಯ ಅಸಹ್ಯಕರ ನಡವಳಿಕೆ ಅಕ್ಷಮ್ಯ ಅಪರಾಧ ಎಂದು ಹೇಳಿದ್ದಾರೆ. KSRTC ಬಸ್ಸುಗಳು ಹಾಗೂ ಚಾಲಕ ನಿರ್ವಾಹಕರ ಬಗ್ಗೆ ಸಾರ್ವಜನಿಕ ಪ್ರಯಾಣಿಕರು ಅತೀವ ನಂಬಿಕೆ ಮತ್ತು ಪ್ರೀತಿ ಹೊಂದಿದ್ದಾರೆ. ಕೆಲವೊಬ್ಬರು ಮಾಡುವ ಈ ರೀತಿಯ ಕೆಲಸಗಳು ಸಂಸ್ಥೆ ಹಾಗೂ ಸಿಬ್ಬಂದಿಗಳ ಗೌರವಕ್ಕೆ ಧಕ್ಕೆ ತರುವಂತಹದು. ಈ ಘಟನೆಗೆ ಸಂಬಂಧಪಟ್ಟಂತೆ ಕೂಡಲೇ ವಿಚಾರಣಾ ಪ್ರಕ್ರಿಯೆ ಪ್ರಾರಂಭಿಸಬೇಕು. ತ್ವರಿತವಾಗಿ ವಿಚಾರಣೆ ಮುಗಿಸಿ, ಆ ನಿರ್ವಾಹಕನನ್ನು ಸೇವೆಯಿಂದಲೇ ವಜಾ ಮಾಡಲು ಕ್ರಮಕೈಗೊಳ್ಳುವಂತೆ ಸಚಿವರ ಸೂಚಿಸುವ ಮೂಲಕ ಸಾರ್ವಜನಿಕ ಮೆಚ್ಚುಗೆಯ ನಿರ್ಧಾರ ಪ್ರಕಟಿಸಿದ್ದಾರೆ. ಈ ಮೂಲಕ ಮುಂದಿನ ದಿನಗಳಲ್ಲಿ ಸಂಭವನೀಯ ತಪ್ಪುಗಳು, ಅಹಿಕತ ನಡವಳಿಕೆ ಯಾರಿಂದಲೂ ಆಗದಂತೆ ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ.

ವೈರಲ್ ವಿಡಿಯೋದಲ್ಲಿ ಏನಿದೆ? ಮಂಗಳೂರಿನ ಕೆಎಸ್ಆರ್ಟಿಸಿ ಬಸ್ನಲ್ಲಿ ಪ್ರಯಾಣಿಕರು ಸಂಚರಿಸುತ್ತಿರುತ್ತಾರೆ. ಈ ವೇಳೆ ಗಡ್ಡದಾರಿ ಬಸ್ ನಿರ್ವಾಹಕ ಪಕ್ಕದಲ್ಲೇ ಸೀಟಿನಲ್ಲಿ ಕೂತಿದ್ದ ಮಹಿಳೆ ಪಕ್ಕ ನಿಂತಿರುತ್ತಾನೆ. ಕೂತ ಮಹಿಳಾ ಪ್ರಯಾಣಿಕಳ ಖಾಸಗಿ ಅಂಗ ಮುಟ್ಟಲು ಮುಂದಾಗುತ್ತಿರುವುದು ವಿಡಿಯೋದಲ್ಲಿ ಸ್ಪಷ್ಟವಾಗಿ ಗೊತ್ತಾಗುತ್ತದೆ. ಕರ್ತವ್ಯದಲ್ಲಿರುವ ತಾನು ಮಹಿಳೆಯರು ಹಾಗೂ ಪ್ರಯಾಣಿಕರ ಜೊತೆಗೆ ಹೇಗೆ ವರ್ತಿಸಬೇಕು ಎಂಬ ಸಣ್ಣ ಪ್ರಜ್ಞೆಯೂ ಇಲ್ಲದೇ ಅಹಿತಕರ ನಡವಳಿಕೆ, ದುರ್ವತನೆ ಪ್ರದರ್ಶಿಸಿದ್ದಾನೆ. ಇದೆಲ್ಲವು ವಿಡಿಯೋದಲ್ಲಿ ಸೆರೆಯಾಗಿದೆ. ಇದರ ಆಧಾರದಲ್ಲಿ ರಾಜ್ಯ ಸರ್ಕಾರಿಗೆ ಇಲಾಖೆ, ಸಚಿವರು ಸೂಕ್ತ ಕ್ರಮ ಜರುಗಿಸಿದ್ದಾರೆ..

Leave a Reply

Your email address will not be published. Required fields are marked *