ಶಿರಾ: ಅಸಮರ್ಪಕ ವಿದ್ಯುತ್ ಪೂರೈಕೆಯನ್ನು ಖಂಡಿಸಿ ತಾಲೂಕಿನ ಬುಕ್ಕಾಪಟ್ಟಣ ವ್ಯಾಪ್ತಿಯ ರೈತರು ಬೆಸ್ಕಾಂ ಕಛೇರಿ ಮುಂದೆ ಗುರುವಾರ ಪ್ರತಿಭಟನೆ ನಡೆಸಿದರು.
ಬುಕ್ಕಾಪಟ್ಟಣ ವ್ಯಾಪ್ತಿಯ ಗ್ರಾಮಗಳಲ್ಲಿ ಅಸಮರ್ಪಕ ವಿದ್ಯುತ್ ಪೂರೈಕೆ ಮಾಡಲಾಗುತ್ತಿದೆ. ಓವರ್ ಲೋಡಿಂಗ್ ನೆಪದಲ್ಲಿ ವಿನಾಕಾರಣ ವಿದ್ಯುತ್ ಕಡಿತಗೊಳಿಸುವುದು, ತ್ರೀಫೇಸ್ ವಿದ್ಯುತ್ ನೀಡುವ ಸಮಯದಲ್ಲಿ ಓವರ್ ಲೋಡಿಂಗ್ ಮಾಡುವುದು ಸೇರಿದಂತೆ ಮನಸೋಇಚ್ಛೆ ವಿದ್ಯುತ್ ಕಡಿತಗೊಳಿಸಲಾಗುತ್ತಿದೆ ಎಂದು ರೈತರು ಬೆಸ್ಕಾಂ ವಿರುದ್ಧ ಪ್ರತಿಭಟಿಸಿದರು.
ರೈತರು ಬೆಳೆದ ಬೆಳೆಗಳು ಒಣಗಿ ಹೋಗುವ ಹಂತವನ್ನು ತಲುಪಿದ್ದು, ಸಾಕಷ್ಟು ಬಾರಿ ಬೆಸ್ಕಾಂ ಅಧಿಕಾರಿಗಳಿಗೆ ವಿದ್ಯುತ್ ಕಡಿತಗೊಳಿಸದಂತೆ ಮನವಿ ಮಾಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಒಂದೇ ವಿದ್ಯುತ್ ಕಂಬದಲ್ಲಿ ಹತ್ತಾರು ಫೀಡರ್ಗಳ ಲೈನ್ಗಳನ್ನು ಕೊಂಡೊಯ್ಯಲಾಗಿದ್ದು, ಅಂತಹ ವಿದ್ಯುತ್ ಕಂಬದಲ್ಲಿ ಹಾದು ಹೋಗಿರುವ ಗ್ರಾಮೀಣ ಭಾಗದ ವಿದ್ಯುತ್ ಸಂಪರ್ಕವನ್ನು ಪದೆ ಪದೆ ಕಡಿತಗೊಳಿಸಲಾಗುತ್ತಿದೆ ಎಂದು ಆರೋಪಿಸಿರುವ ರೈತರು, ಕೂಡಲೆ ವಿದ್ಯುತ್ ಸಮಸ್ಯೆ ಬಗೆಹರಿಸುವಂತೆ ಒತ್ತಾಯಿಸಿದರು.
ಮುಖಂಡರಾದ ಶ್ರೀರಂಗಪ್ಪ, ಕೃಷ್ಣಮೂರ್ತಿ, ರಂಗಧಾಮಯ್ಯ, ಜಮಾಲಿ ಗೋವಿಂದಪ್ಪ, ಲಕ್ಷ್ಮಿಕಾಂತ್, ಮುದ್ದುರಾಜಣ್ಣ, ದಿನೇಶ್, ನಾಗರಾಜು, ಶ್ರೀರಂಗಪ್ಪ, ನಿತ್ಯಣ್ಣ ಸೇರಿದಂತೆ ಅನೇಕ ಪ್ರಮುಖರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು,