ಶಿರಾ : ನಗರವಷ್ಟೇ ಅಲ್ಲದೆ ತಾಲೂಕಿನ ಬಹುತೇಕ ಗ್ರಾಮಗಳಲ್ಲಿ ಅರ್ಹ ಫಲಾನುಭವಿಗಳು ಸ್ವಂತ ಸೂರಿಲ್ಲದೆ ಪರಿತಪಿಸುತ್ತಿದ್ದು, ಅಂತಹ ಅರ್ಹರನ್ನು ಗುರುತಿಸಿ ಸುಮಾರು 15,000 ಕ್ಕೂ ಹೆಚ್ಚು ಮಂದಿಗೆ ನಿವೇಶನ ನೀಡಲು ಸಂಬಂಧಪಟ್ಟ ಅಧಿಕಾರಿಗಳು ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಲಾಗಿದೆ. ಈ ಸಂಬಂಧ ಪ್ರಕ್ರಿಯೆಗಳು ನಡೆಯುತ್ತಿವೆ ಎಂದು ದೆಹಲಿ ವಿಶೇಷ ಪ್ರತಿನಿಧಿ ಟಿ.ಬಿ. ಜಯಚಂದ್ರ ತಿಳಿಸಿದರು. ಅವರು ನಗರಸಭಾ ವ್ಯಾಪ್ತಿಯ ಕಲ್ಲುಕೋಟೆ ಸ.ನಂ. 100 ರಲ್ಲಿ ಬಡಾವಣೆ ನಿರ್ಮಾಣಕ್ಕೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದರು.
ನಗರ ವ್ಯಾಪ್ತಿಯ ಕಲ್ಲುಕೋಟೆ ಸ.ನಂ. ಸೇರಿದಂತೆ ವಿವಿಧ ಪ್ರದೇಶಗಳಲ್ಲಿ ಅರ್ಹರಿಗೆ ನಿವೇಶನಗಳನ್ನು ಹಂಚಲು ಸ್ಥಳಗಳನ್ನು ಗುರ್ತಿಸಲಾಗಿದೆ. ಕಂದಾಯ ಇಲಾಖೆಯಿಂದ ನಗರಸಭೆಗೆ ಜಮೀನನ್ನು ವರ್ಗಾವಣೆ ಮಾಡಿಕೊಳ್ಳುವ ಪ್ರಕ್ರಿಯೆಯೂ ಸಾಗಿದೆ. ಕಾನೂನು ರೀತಿಯ ತೊಡಕುಗಳನ್ನು ನಿವಾರಣೆ ಮಾಡಿಕೊಂಡು ಕೂಡಲೇ ಅರ್ಹರನ್ನು ಗುರ್ತಿಸಿ ನಿವೇಶನ ನೀಡಲು ಕ್ರಮವಹಿಸುವಂತೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ನಗರದಲ್ಲಿ ನಿವೇಶನ ಕೋರಿ ನಿರೀಕ್ಷೆಗೂ ಮೀರಿ ಅರ್ಜಿಗಳು ಬಂದಿದ್ದು, ಈ ಪೈಕಿ ಅತ್ಯಂತ ಅರ್ಹರಿಗೆ ನಿವೇಶನ ಹಂಚಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಜಯಚಂದ್ರ ತಿಳಿಸಿದರು.
ನಗರಸಭೆಯ ಅಧ್ಯಕ್ಷ ಜೀಶಾನ್ ಮೊಹಮೂದ್, ಉಪಾಧ್ಯಕ್ಷ ಲಕ್ಷ್ಮಿಕಾಂತ್, ಗ್ರಾ. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನಟರಾಜ್ ಬರಗೂರು, ಸ್ಥಾಯಿ ಸಮಿತಿಯ ಅಧ್ಯಕ್ಷ ಶಿವಶಂಕರ್, ನಗರಸಭಾ ಸದಸ್ಯರಾದ ಎಸ್.ಎಸ್.ಅಜಯ್ಕುಮಾರ್, ಮಹೇಶ್, ನಗರಸಭೆಯ ಆಯುಕ್ತ ರುದ್ರೇಶ್, ನಗರಸಭೆಯ ಮಾಜಿ ಅಧ್ಯಕ್ಷ ಅಮಾನುಲ್ಲಾಖಾನ್, ಆಶ್ರಯ ಸಮಿತಿ ಸದಸ್ಯರಾದ ವಾಜರಹಳ್ಳಿ ರಮೇಶ್, ಮಂಜುನಾಥ್, ಜಯಲಕ್ಷ್ಮಿ, ನೂರುದ್ಧೀನ್, ಮುಖಂಡರಾದ ಮಜರುಲ್ಲಾಖಾನ್, ವಿಜಯಕುಮಾರ್, ನಗರಸಭೆಯ ಎಇಇ ಕೆಂಚಪ್ಪ, ಗುತ್ತಿಗೆದಾರ ಚಂದ್ರಣ್ಣ ಸೇರಿದಂತೆ ಅನೇಕ ಪ್ರಮುಖರು ಇದ್ದರು.