ಸ್ಯಾಂಡಲ್‌ವುಡ್‌ನ ಹ್ಯಾಟ್ರಿಕ್ ಹೀರೋ ಶಿವ ರಾಜ್‌ಕುಮಾರ್ ಕನ್ನಡಿಗರ ಪ್ರೀತಿಯ ಶಿವಣ್ಣ. ಕಳೆದ ಕೆಲವು ತಿಂಗಳಿಂದ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿರುವ ಶಿವಣ್ಣ ಒಂದು ತಿಂಗಳು ವಿರಾಮ ತೆಗೆದುಕೊಂಡು ಅಮೇರಿಕಾದಲ್ಲಿ ಚಿಕಿತ್ಸೆ ಪಡೆಯಲು ಮುಂದಾಗಿದ್ದಾರೆ. ಸಿನಿಮಾ, ರಿಯಾಲಿಟಿ ಶೋಗಳಲ್ಲಿ ಬ್ಯೂಸಿಯಾಗಿರುತ್ತಿದ್ದ ಶಿವಣ್ಣ ಇದೀಗ ಆರೋಗ್ಯದ ಹಿತದೃಷ್ಟಿಯಿಂದ ಎಲ್ಲಾ ಚಿತ್ರೀಕರಣಕ್ಕೂ ಬ್ರೇಕ್ ಹಾಕಿ ಚಿಕಿತ್ಸೆ ಪಡೆಯಲು ಸಜ್ಜಾಗಿದ್ದಾರೆ.
ಇತ್ತೀಚಿಗಷ್ಟೇ ಶಿವಣ್ಣ ಅನಾರೋಗ್ಯದಿಂದ ಬಳಲುತ್ತಿರುವ ವಿಚಾರ ಹೊರಬಿದ್ದಿತ್ತು. ಈ ಬಗ್ಗೆ ಸ್ವತಃ ಶಿವಣ್ಣ ಕೂಡ ಮಾತನಾಡಿದ್ದರು. ಆದರೆ ಮೊದಲ ಬಾರಿಗೆ ಅವರ ಧರ್ಮ ಪತ್ನಿ ಗೀತಾ ಶಿವ ರಾಜ್‌ಕುಮಾರ್ ಈ ಬಗ್ಗೆ ಮಾತನಾಡಿದ್ದಾರೆ. ಡಾನ್ಸ್ ಕರ್ನಾಟಕ ಡಾನ್ಸ್ ವೇದಿಕೆ ಮೇಲೆ ಶಿವಣ್ಣ ಆರೋಗ್ಯ ಸಮಸ್ಯೆ ಬಗ್ಗೆ ಮಾತನಾಡಿದ ಅವರು, ಇಂತಹ ಪರಿಸ್ಥಿತಿಯನ್ನು ಎದುರಿಸಲು ಸಜ್ಜಾಗಿರುವ ಕುರಿತು ಗೀತಾ ಶಿವರಾಜ್‌ಕುಮಾರ್ ವಿವರಿಸಿದ್ದಾರೆ.
ಶಿವ ರಾಜ್‌ಕುಮಾರ್ ಅವರ ಆರೋಗ್ಯದ ವರದಿ ಬಂದಾಗ ತುಂಬಾ ಕಷ್ಟವಾಯ್ತು ಎನ್ನುವುದನ್ನು ವ್ಯಕ್ತಪಡಿಸಿದ ಅವರು, ಈ ಕಷ್ಟದ ದಿನಗಳಲ್ಲಿ ಇಲ್ಲಿ ಸಮಯ ಕಳೆಯದೇ ಇದ್ದರಿದ್ದರೆ ನನಗೆ ಎಲ್ಲಿಯೂ ಇರಲೂ ಆಗುತ್ತಿರಲಿಲ್ಲ ಅನಿಸುತ್ತದೆ ಎಂದು ಡಾನ್ಸ್ ಕರ್ನಾಟಕ ಡಾನ್ಸ್ ವೇದಿಕೆಗೆ ಗೀತಕ್ಕ ಧನ್ಯವಾದ ತಿಳಿಸಿದ್ದಾರೆ.

ಡಿಸೆಂಬರ್ 18 ತಾರೀಕು ನಾವು ಅವರ ಚಿಕಿತ್ಸೆಗಾಗಿ ಅಮೇರಿಕಾಗೆ ಹೋಗುತ್ತಿದ್ದೇವೆ. ಡಿಸೆಂಬರ್ 24 ಅವರಿಗೆ ಸರ್ಜರಿ ಆಗುತ್ತದೆ ಎಂದು ಹೇಳಿರುವ ಗೀತಾ ಶಿವ ರಾಜ್‌ಕುಮಾರ್, ವೇದಿಕೆ ಮೇಲೆ ಕಣ್ಣೀರಿಟ್ಟಿದ್ದಾರೆ. ಈ ವೇಳೆ ಶಿವ ರಾಜ್‌ಕುಮಾರ್ ಕೂಡ ಪುಟ್ಟ ಮಗುವಿನಂತೆ ಕಣ್ಣೀರು ಹಾಕಿದ್ದಾರೆ. ಈ ವೇಳೆ ಎಲ್ಲರೂ ಭಾವುಕರಾಗಿ, ಗೀತಕ್ಕ ಮತ್ತು ಶಿವಣ್ಣಗೆ ಧೈರ್ಯ ತುಂಬಿದ್ದಾರೆ.
ಇನ್ನು ಚಿಕಿತ್ಸೆಗಾಗಿ ಅಮೇರಿಕಾಗೆ ತೆರಳುವ ಮುನ್ನ ಇತ್ತೀಚಿಗಷ್ಟೇ ಶಿವ ರಾಜ್ಕುಮಾರ್ ಕುಟುಂಬ ಸಮೇತರಾಗಿ ತಿರುಪತಿಗೆ ತೆರಳಿದ್ದಾರೆ. ತಿರುಪತಿಯಲ್ಲಿ ಮುಡಿ ಕೊಟ್ಟಿರುವ ಶಿವಣ್ಣ ಹಾಗೂ ಗೀತಕ್ಕ ವಿಶೇಷ ಪೂಜೆ ಸಲ್ಲಿಸಿ ತಿಮ್ಮಪ್ಪನ ದರ್ಶನ ಪಡೆದಿದ್ದಾರೆ. ತಲೆ ಕೂದಲು ತೆಗೆದಿರುವ ಶಿವಣ್ಣ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಮುಡಿ ಕೊಟ್ಟ ಶಿವಣ್ಣ ಗುರುತೇ ಸಿಗದಷ್ಟು ಶಿವಣ್ಣ ಬದಲಾಗಿದ್ದಾರೆ ಎಂದು ಅಭಿಮಾನಿಗಳು ಕಮೆಂಟ್ ಮಾಡುತ್ತಿದ್ದು, ಶಿವಣ್ಣ ಬೇಗ ಚೇತರಿಸಿಕೊಳ್ಳಲಿ ಎಂದು ಹಾರೈಸಿದ್ದಾರೆ. ನಾಳೆ ಶಿವ ರಾಜ್ಕುಮಾರ್ ಅವರು ಕುಟುಂಬಸ್ಥರೊಂದಿಗೆ ಅಮೇರಿಕಾಗೆ ತೆರಳಲಿದ್ದು, ಚಿಕಿತ್ಸೆ ಸಂಪೂರ್ಣಗೊಂಡ ಬಳಿಕ ಕರ್ನಾಟಕಕ್ಕೆ ವಾಪಸ್ ಆಗಲಿದ್ದಾರೆ.