ಶಿವಮೊಗ್ಗ || ಕೆಎಸ್‌ಆರ್‌ಟಿಸಿ ದರ ಹೆಚ್ಚಳದ ಹಿನ್ನೆಲೆ || ಖಾಸಗಿ ಬಸ್ ಪ್ರಯಾಣ ದರ ಶೆ. 20 ರಷ್ಟು ಏರಿಕೆಗೆ ಆಗ್ರಹ

ಶಿವಮೊಗ್ಗ || ಕೆಎಸ್ಆರ್ಟಿಸಿ ದರ ಹೆಚ್ಚಳದ ಹಿನ್ನೆಲೆ || ಖಾಸಗಿ ಬಸ್ ಪ್ರಯಾಣ ದರ ಶೆ. 20 ರಷ್ಟು ಏರಿಕೆಗೆ ಆಗ್ರಹ

ಶಿವಮೊಗ್ಗ: ಮಲೆನಾಡು, ಅರೆ ಮಲೆನಾಡು, ಬಯಲು ಸೀಮೆ ಸೇರಿದಂತೆ ಬಹುತೇಕ ಜಿಲ್ಲೆಗಳ ಸಂಪರ್ಕ ಕೊಂಡಿಯಾಗಿ ಖಾಸಗಿ ಬಸ್‌ಗಳು ಕಾರ್ಯ ನಿರ್ವಹಿಸುತ್ತಿವೆ. ಕೆಎಸ್‌ಆರ್‌ಟಿಸಿ ಟಿಕೆಟ್ ದರವನ್ನು ಶೇ.15ರಷ್ಟು ಟಿಕೆಟ್ ದರ ಏರಿಸಿದ ಸರ್ಕಾರಕ್ಕೆ, ಇದೀಗ ಖಾಸಗಿ ಬಸ್ ಮಾಲೀಕರು ತಮ್ಮ ಬಸ್ ಪ್ರಯಾಣ ದರವನ್ನು ಶೇ.20ರಷ್ಟು ಏರಿಸಬೇಕೆಂದು ಮನವಿ ಮಾಡಿದ್ದಾರೆ.

ಖಾಸಗಿ ಬಸ್‌ಗಳು ಶಿವಮೊಗ್ಗ ಜಿಲ್ಲೆ ಸೇರಿದಂತೆ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ತಮ್ಮ ಪ್ರಾಬಲ್ಯ ಹೊಂದಿವೆ. ಅದೇ ರೀತಿ ಪ್ರಯಾಣಿಕಸ್ನೇಹಿಯಾಗಿಯೂ ಸೇವೆ ಸಲ್ಲಿಸುತ್ತಿವೆ.

ಕಳೆದ 10 ವರ್ಷಗಳಿಂದ ಖಾಸಗಿ ಬಸ್ ಪ್ರಯಾಣ ದರ ಏರಿಸಿಲ್ಲ. ಹೀಗಾಗಿ, ನಮ್ಮ ಬೇಡಿಕೆ ಈಡೇರಿಸಬೇಕು ಎಂದು ಜಿಲ್ಲಾ ಬಸ್ ಮಾಲೀಕರ ಸಂಘ ಶಿವಮೊಗ್ಗ ಜಿಲ್ಲಾಧಿಕಾರಿ ಹಾಗೂ ಆರ್‌ಟಿಓ ಅಧಿಕಾರಿಗಳು ಹಾಗೂ ರಾಜ್ಯ ಸಾರಿಗೆ ಸಚಿವ ರಾಮಲಿಂಗ ರೆಡ್ಡಿ ಅವರಿಗೆ ಮನವಿ ಸಲ್ಲಿಸಿದೆ.

ಎಷ್ಟು ಖಾಸಗಿ ಬಸ್‌ಗಳಿವೆ ?: ಕೊರೊನಾದಂತಹ ಸಂದರ್ಭದಲ್ಲಿ ನಷ್ಟಕ್ಕೊಳಗಾಗಿ ಅನೇಕರು ಈ ಉದ್ಯಮವನ್ನೇ ಬಿಟ್ಟಿದ್ದಾರೆ. ಶಿವಮೊಗ್ಗ ಜಿಲ್ಲೆಯಲ್ಲಿಯೇ 500 ಅಂತರ್‌ಜಿಲ್ಲೆ ಬಸ್‌ಗಳಿವೆ. ಇವುಗಳ ಮೇಲೆ ಸಾವಿರಾರು ಜನ ಅವಲಂಬಿತರಾಗಿದ್ದಾರೆ. ಒಂದು ಬಸ್‌ನಲ್ಲಿ ಡ್ರೈವರ್, ಕಂಡಕ್ಟರ್, ಕ್ಲೀನರ್ ಇರುತ್ತಾರೆ. ಇವರೊಂದಿಗೆ ಪ್ರತೀ ಹೋಬಳಿಗೊಬ್ಬರಂತೆ ಸ್ಟ್ಯಾಂಡ್ ಏಜೆಂಟ್‌ಗಳಿರುತ್ತಾರೆ.

ಜಿಲ್ಲಾ ಬಸ್ ಮಾಲೀಕರ ಸಂಘದ ಅಧ್ಯಕ್ಷ ರಂಗಣ್ಣ ಹೇಳಿಕೆ: ”ಇತ್ತೀಚಿನ ದಿನಗಳಲ್ಲಿ ಡೀಸೆಲ್ ಬೆಲೆ ಹೆಚ್ಚಾಗಿದೆ. ವಾಹನಗಳ ಬಿಡಿಭಾಗಗಳ ದರವೂ ಹೆಚ್ಚಾಗುತ್ತಿದೆ. ಹೀಗಾಗಿ ಕಳೆದ 10 ವರ್ಷಗಳಿಂದ ಸರ್ಕಾರಕ್ಕೆ ಬಸ್ ಪ್ರಯಾಣದ ದರ ಏರಿಕೆಯ ಕುರಿತು ಮನವಿ ಕೊಡುತ್ತಿದ್ದೇವೆ. ಮೂರು ಮಂದಿ ಸಿಎಂಗಳು ಬದಲಾವಣೆ ಆದ್ರೂ ಸಹ ನಮ್ಮ ಮನವಿಯನ್ನು ಪರಿಗಣಿಸಿಲ್ಲ. ಆದರೆ ಕಳೆದ ಕೆಲ ದಿನಗಳ ಹಿಂದೆ ಕೆಎಸ್‌ಆರ್‌ಟಿಸಿಯ ಎಲ್ಲಾ ನಿಗಮಗಳಲ್ಲಿ ಶೇ.15ರಷ್ಟು ಏರಿಕೆ ಮಾಡಲಾಗಿದೆ. ಹೀಗಾಗಿ ನಮ್ಮ ಜಿಲ್ಲಾ ಬಸ್ ಮಾಲೀಕರ ಸಂಘದಿAದ ಪ್ರಯಾಣ ದರ ಏರಿಸುವಂತೆ ಸಾರಿಗೆ ಮಂತ್ರಿಗಳಿಗೆ ಮನವಿ ಸಲ್ಲಿಸಿದ್ದೇವೆ” ಎಂದು ಹೇಳಿದರು.

”ಶಕ್ತಿ ಯೋಜನೆಯಿಂದ ಖಾಸಗಿ ಬಸ್ ಉದ್ಯಮ ನಶಿಸಿ ಹೋಗುತ್ತಿದೆ. ಮಹಿಳೆಯರಿಗೆ ಉಚಿತ ಪ್ರಯಾಣಕ್ಕೆ ಅವಕಾಶ ನೀಡಿದ್ದರಿಂದ ಅವರ ಕುಟುಂಬದವರೂ ಸಹ ಸರ್ಕಾರಿ ಬಸ್‌ನಲ್ಲಿಯೇ ಸಂಚರಿಸುತ್ತಿದ್ದಾರೆ. ಕೊರೊನಾ ಸಂದರ್ಭದಲ್ಲಿ ನಮ್ಮ ಉದ್ಯಮ ಸಂಪೂರ್ಣ ನಷ್ಟಕ್ಕೊಳಗಾಗಿತ್ತು. ಅಲ್ಲದೇ ಅತಿವೃಷ್ಟಿಯಿಂದಲೂ ನಷ್ಟದಲ್ಲಿದ್ದರೂ ಸಹ ಪ್ರಯಾಣಿಕರ ಅನುಕೂಲಕ್ಕಾಗಿ ಬಸ್ ಉದ್ಯಮವನ್ನು ನಡೆಸುತ್ತಿದ್ದೇವೆ. ಕೆಎಸ್‌ಆರ್‌ಟಿಸಿಗೆ ಸರ್ಕಾರ ಅನುದಾನ, ಧನಸಹಾಯ ನೀಡುತ್ತದೆ. ಖಾಸಗಿ ಉದ್ಯಮಕ್ಕೆ ಯಾವುದೇ ಸಹಕಾರ ಇಲ್ಲದೆ ಇದ್ದರೂ ಸಹ ವಿದ್ಯಾರ್ಥಿಗಳಿಗೆ, ಅಂಗವಿಕಲರಿಗೆ, ಹಿರಿಯ ನಾಗರಿಕರಿಗೆ ರಿಯಾಯಿತಿ ದರದಲ್ಲಿ ಅವಕಾಶ ಮಾಡಿಕೊಡುತ್ತಿದ್ದೇವೆ” ಎಂದರು.

”ಕೆಎಸ್‌ಆರ್‌ಟಿಸಿ ದರ ಏರಿಕೆ ಮಾಡಿದಂತೆ ನಮ್ಮ ಬಸ್ ಪ್ರಯಾಣ ದರವನ್ನೂ ಏರಿಸಬೇಕೆಂದು ನಾವು ಸಾರಿಗೆ ಮಂತ್ರಿಗಳಿಗೆ ಮನವಿ ಸಲ್ಲಿಸಿದ್ದೇವೆ. ಪ್ರತೀ ಬಸ್‌ಗಳಿಗೆ ವಾರ್ಷಿಕ 2 ಲಕ್ಷ ರೂ ತೆರಿಗೆ, ವಾರ್ಷಿಕ 1 ಲಕ್ಷಕ್ಕೂ ಹೆಚ್ಚಿನ ವಿಮಾ ಕಂತನ್ನು ಪಾವತಿಸುತ್ತೇವೆ. ನಷ್ಟದಲ್ಲಿರುವ ಉದ್ಯಮಕ್ಕೆ ಪ್ರಯಾಣ ದರ ಏರಿಸಿ ಅನುಕೂಲ ಮಾಡಿಕೊಡಬೇಕು” ಎಂದು ಅವರು ಒತ್ತಾಯಿಸಿದರು.

Leave a Reply

Your email address will not be published. Required fields are marked *