ಶಿವಮೊಗ್ಗ: ಜಿಲ್ಲಾ ಉಸ್ತುವಾರಿ ಸಚಿವರಾದ ಮಧು ಬಂಗಾರಪ್ಪ ಇಂದು ಹೊಸನಗರದ ಈಡಿಗರ ಸಭಾಭವನದಲ್ಲಿ ‘ ಜನಸ್ಪಂದನ’ ಕಾರ್ಯಕ್ರಮ ನಡೆಸಿದರು. ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಜನರ ಸಮಸ್ಯೆಗಳನ್ನು ಆಲಿಸಿ, ಶೀಘ್ರ ಪರಿಹಾರ ದೊರಕಿಸಲು ಮತ್ತು ಆಡಳಿತ ಸುಧಾರಣೆಯಲ್ಲಿ ‘ಜನಸ್ಪಂದನ’ ಕಾರ್ಯಕ್ರಮ ಬಹಳ ಮುಖ್ಯ ಪಾತ್ರ ವಹಿಸುತ್ತದೆ ಎಂದರು.

ಕಾನೂನಿನ ಪ್ರಕಾರವೇ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಲಾಗುವುದು: ತಾಲೂಕುಗಳಲ್ಲಿ ಜನಸ್ಪಂದನ ಕಾರ್ಯಕ್ರಮ ಮಾಡುವುದರಿಂದ ಎಲ್ಲಾ ಸಾರ್ವಜನಿಕರಿಗೆ ಅನುಕೂಲವಾಗುತ್ತದೆ. ಚುನಾಯಿತ ಪ್ರತಿನಿಧಿಗಳು,ಅಧಿಕಾರಿಗಳು ಇಲ್ಲಿ ಹಾಜರಾಗುವ ಕಾರಣ ಜನರ ಸಮಸ್ಯೆಗಳು ಅರ್ಥ ಆಗುತ್ತವೆ. ಪರಿಹಾರಕ್ಕೆ ಅನೇಕ ಕಾನೂನು ಇದ್ದು, ಅವುಗಳನ್ನು ಅನ್ವಯಿಸಿ, ಸಾರ್ವಜನಿಕರಿಗೆ ಅನುಕೂಲ ಮಾಡಲಾಗುವುದು ಎಂದು ಸಚಿವರು ಆಶ್ವಾಸನೆ ನೀಡಿದರು.
ಯಾವುದೇ ಸಮಸ್ಯೆಗಳಿದ್ದರೂ ಬಗೆ ಹರಿಸೋಣ: ಸಚಿವರ ಭರವಸೆ: ಮುಂದಿನ ದಿನಗಳಲ್ಲಿ ಎಲ್ಲ ತಾಲೂಕುಗಳಲ್ಲಿ ಜನಸ್ಪಂದನ ಕಾರ್ಯಕ್ರಮ ಮಾಡಲಾಗುವುದು ಎಂದರು. ಮಾನ್ಯ ಮುಖ್ಯಮಂತ್ರಿಗಳು ಸಹ ಬೇರೆ ಬೇರೆ ಜಿಲ್ಲೆಗಳಿಗೆ ತೆರಳಿ ಜನಸ್ಪಂದನ ಸಭೆ ನಡೆಸಿ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸುತ್ತಿದ್ದಾರೆ. ಆಡಳಿತ ಸುಧಾರಣೆಯಲ್ಲಿ ಇಂತಹ ಕಾರ್ಯಕ್ರಮಗಳು ಬಹಳ ಮುಖ್ಯ ಪಾತ್ರ ವಹಿಸುತ್ತವೆ . ಯಾವುದೇ ಸಮಸ್ಯೆಗಳಿದ್ದರೂ ಚರ್ಚಿಸಿ, ಬಗೆಹರಿಸುವ ನಿಟ್ಟಿನಲ್ಲಿ ಪ್ರಯತ್ನ ಮಾಡೋಣ ಎಂದರು.
ದಾಖಲೆಯಲ್ಲಿ ಮೃತಪಟ್ಟ ಅಜ್ಜಿಯಿಂದ ಅಹವಾಲು ಸಲ್ಲಿಕೆ: ದಾಖಲೆಯಲ್ಲಿ ಮೃತ ಎಂದು ನಮೂದಾಗಿರುವ ಅಜ್ಜಿ ಸಚಿವರ ಮುಂದೆ ಬಂದು ತಮಗೆ ನ್ಯಾಯ ಒದಗಿಸಬೇಕೆಂದು ಅಹವಾಲು ಸಲ್ಲಿಸಿದರು. ಹೊಸನಗರ ತಾಲೂಕಿನ ಮಳವಳ್ಳಿಯ 80 ವರ್ಷದ ಪಾರ್ವತಮ್ಮ ಎಂಬುವವರನ್ನು 2021 ರಲ್ಲಿ ಪಡಿತರ ಚೀಟಿಯಲ್ಲಿ ಮರಣ ಹೊಂದಿರುವುದಾಗಿ ನಮೂದಿಸಿ ಪಡಿತರ ಚೀಟಿ ರದ್ದುಪಡಿಸಲಾಗಿದೆ. ತಾವು ಜೀವಂತವಾಗಿದ್ದು ಸರ್ಕಾರಿ ಸೌಲಭ್ಯಗಳಿಂದ ವಂಚಿತಳಾಗಿದ್ದೇನೆ . ತಮಗೆ ಸರ್ಕಾರಿ ಸೌಲಭ್ಯ ನೀಡಬೇಕೆಂದು ಖುದ್ದು ಸಚಿವರಿಗೆ ಅರ್ಜಿ ಸಲ್ಲಿಸಿದರು.
ತಪ್ಪು ಎಸಗಿದ ಅಧಿಕಾರಿ ವಿರುದ್ಧ ಕ್ರಮಕ್ಕೆ ಮಧು ಬಂಗಾರಪ್ಪ ಸೂಚನೆ: ಅಜ್ಜಿಯ ಈ ಅರ್ಜಿ ಸ್ವೀಕರಿಸಿದ ಸಚಿವರು ಪ್ರತಿಕ್ರಿಯಿಸಿ, ಈ ಅಚಾತುರ್ಯವೆಸಗಿ ತೊಂದರೆಪಡಿಸಿದ ಅಧಿಕಾರಿ ವಿರುದ್ದ ಸೂಕ್ತ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದರು. ಜನಸ್ಪಂದನ ಕಾರ್ಯಕ್ರಮದಲ್ಲಿ ಸಾಗರ ಶಾಸಕರಾದ ಗೋಪಾಲಕೃಷ್ಣ ಬೇಳೂರು, ಜಿಲ್ಲಾಧಿಕಾರಿ ಗುರುದತ್ತ ಹೆಗಡೆ, ಎಡಿಸಿ ಸಿದ್ದಲಿಂಗ ರಡ್ಡಿ, ಎಸ್ ಪಿ ಮಿಥುನ್ ಕುಮಾರ್ ಸೇರಿಸಂತೆ ಅನೇಕ ಅಧಿಕಾರಿಗಳು ಹಾಜರಿದ್ದರು.