ಶಿವಮೊಗ್ಗ : KSRTC ಬಸ್ ಹಾಗೂ ಟ್ರಕ್ ನಡುವೆ ಭೀಕರ ಅಪಘಾತ ಸಂಭವಿಸಿದೆ. ಸಾಗರ ತಾಲೂಕು ಆನಂದಪುರದ ಬಳಿ ಎರಡು ವಾಹನಗಳ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದ್ದು, ಕೆಎಸ್‌ಆರ್‌ಟಿಸಿ ಬಸ್ ಮುಂಭಾಗ ಸಂಪೂರ್ಣ ಜಖಂಗೊಂಡಿದೆ. ಈ ಅಪಘಾತದಲ್ಲಿ ಹಲವು ಪ್ರಯಾಣಿಕರು ಗಾಯಗೊಂಡಿದ್ದಾರೆ. ಸ್ಥಳೀಯರು ಗಾಯಾಳುಗಳನ್ನು ತಕ್ಷಣವೇ ಶಾಲಾ ವಾಹನದ ಮೂಲಕ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆಸ್ಪತ್ರೆಯಲ್ಲಿ ಗಾಯಾಳುಗಳಿಗೆ ಚಿಕಿತ್ಸೆ ನೀಡಲಾಗ್ತಿದೆ.

ಕೆಎಸ್‌ಆರ್‌ಟಿಸಿ ಬಸ್–ಟ್ರಕ್ ನಡುವೆ ಡಿಕ್ಕಿ
ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕು ಆನಂದಪುರ ಸಮೀಪದ ಮುಂಬಾಳು ಬಳಿ ಈ ಘಟನೆ ನಡೆದಿದೆ. ಕೆಎಸ್‌ಆರ್‌ಟಿಸಿ ಬಸ್ಸು ಸಾಗರದಿಂದ ಶಿವಮೊಗ್ಗಕ್ಕೆ ತೆರಳುತ್ತಿತ್ತು. ಟ್ರಕ್ ಆನಂದಪುರದಿಂದ ಸಾಗರ ಕಡೆಗೆ ತೆರಳುತ್ತಿತ್ತು. ವೇಗವಾಗಿ ಬರ್ತಿದ್ದ ಎರಡು ವಾಹನಗಳ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದ್ದು, ಅಪಘಾತದಲ್ಲಿ KSRTC ಬಸ್ಸಿನ ಮುಂಭಾಗ ಸಂಪೂರ್ಣವಾಗಿ ನಜ್ಜು-ಗುಜ್ಜಾಗಿದೆ. ಅನೇಕ ಪ್ರಯಾಣಿಕರಿಗೆ ಗಾಯಗಳಾಗಿವೆ ಎಂದು ವರದಿ ಆಗಿದೆ.
ಗಾಯಾಳುಗಳು ಆಸ್ಪತ್ರೆಗೆ ದಾಖಲು
ಅಪಘಾತವು ಸಂಭವಿಸುತ್ತಿದ್ದಂತೆಯೇ ಸ್ಥಳೀಯರು ಗಾಯಾಳುಗಳ ರಕ್ಷಣೆಗೆ ದಾವಿಸಿದ್ರು. ಸಾಗರದ ಮರ್ಕಜ್ ಶಾಲೆಗೆ ವಿದ್ಯಾರ್ಥಿಗಳನ್ನು ಕರೆದೊಯ್ಯುತ್ತಿದ್ದ ಬಸ್ಸಿನಲ್ಲೇ ಗಾಯಾಳುಗಳನ್ನು ಆಸ್ಪತ್ರೆಗೆ ರವಾನೆ ಮಾಡಲಾಯಿತು
ಕೆಎಸ್‌ಆರ್‌ಟಿಸಿ ಹಾಗೂ ಟ್ರಕ್ ನಡುವೆ ಸಂಭವಿಸಿದ ಅಪಘಾತದ ಬಳಿಕ ಮುಂಬಾಳು ಬಳಿ ರಸ್ತೆ ಸಂಚಾರವನ್ನು ಸಂಪೂರ್ಣವಾಗಿ ಬಂದ್ ಮಾಡಲಾಯ್ತು. ಕೆಲ ಕಾಲ ಹೆದ್ದಾರಿಯಲ್ಲಿ ಟ್ರಾಫಿಕ್ ಜಾಮ್ ಉಂಟಾಗಿತ್ತು. ಈ ಬಸ್ನಲ್ಲಿ 40 ರಿಂದ 50 ಮಂದಿ ಪ್ರಯಾಣ ಮಾಡ್ತಿದ್ರು ಎನ್ನಲಾಗ್ತಿದೆ.