ಶಿವಮೊಗ್ಗ || ಕಾರ್ಮಿಕ ಇಲಾಖೆ ಪ್ರಗತಿ ಪರಿಶೀಲನಾ ಸಭೆಯಲ್ಲಿ ಸಚಿವ ಸಂತೋಷ್‌ ಲಾಡ್‌ ಸೂಚನೆ

ಶಿವಮೊಗ್ಗ || ಕಾರ್ಮಿಕ ಇಲಾಖೆ ಪ್ರಗತಿ ಪರಿಶೀಲನಾ ಸಭೆಯಲ್ಲಿ ಸಚಿವ ಸಂತೋಷ್ ಲಾಡ್ ಸೂಚನೆ

ಶಿವಮೊಗ್ಗ : ರಾಜ್ಯದಲ್ಲಿ ಈಗಾಗಲೇ 58 ಲಕ್ಷ ಕಾರ್ಮಿಕರಿಗೆ ಕಾರ್ಮಿಕ ನೋಂದಣಿ ಕಾರ್ಡುಗಳನ್ನು ವಿತರಿಸಲಾಗಿದೆ. ಕಳೆದ 3- 4ವರ್ಷಗಳಲ್ಲಿ ನೋಂದಾಣಿಯಾಗಿರುವ ಕಾರ್ಮಿಕರ ಸಂಖ್ಯೆಯ ಹೆಚ್ಚಳವಾಗಿರುವುದನ್ನು ಗಮನಿಸಿದಾಗ ಅನರ್ಹರೂ ಈ ಪಟ್ಟಿಯಲ್ಲಿ ಸೇರಿರಬಹುದಾದ ಆತಂಕವಿದೆ. ಅರ್ಹ ಫಲಾನುಭವಿಗಳನ್ನು ಗುರುತಿಸಿ, ಕಾರ್ಮಿಕ ಕಾರ್ಡನ್ನು ವಿತರಿಸುವಲ್ಲಿ ಅಧಿಕಾರಿಗಳು ಅನರ್ಹರಿಗೂ ಕಾರ್ಡ್‌ನ್ನು ನೀಡಲು ಮುಂದಾದಲ್ಲಿ ಅಂತಹ ಅಧಿಕಾರಿ-ಸಿಬ್ಬಂಧಿಗಳ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು. ಅಲ್ಲದೇ ಮುಂದಿನ ಎಲ್ಲಾ ಅಕ್ರಮಗಳಿಗೆ ಅಧಿಕಾರಿಗಳನ್ನು ಹೊಣೆಗಾರರನ್ನಾಗಿಸಲಾಗುವುದು ಎಂದು ಕಾರ್ಮಿಕ ಸಚಿವ ಸಂತೋಷ್ ಎಸ್.ಲಾಡ್ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಜಿಲ್ಲಾ ಪಂಚಾಯಿತಿಯ ಅಬ್ದುಲ್ ನಜೀರ್‌ ಸಾಬ್ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಕಾರ್ಮಿಕ ಇಲಾಖೆಯ ವತಿಯಿಂದ ಅನುಷ್ಠಾನದಲ್ಲಿರುವ ಯೋಜನೆಗಳ ಅನುಷ್ಠಾನದ ಕುರಿತು ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಜಿಲ್ಲೆಯ ಕೈಗಾರಿಕಾ ಘಟಕಗಳಲ್ಲಿ ಖಾಯಂ ಹಾಗೂ ತಾತ್ಕಾಲಿಕವಾಗಿ ಕಾರ್ಯನಿರ್ವಹಿಸುತ್ತಿರುವ ಕಾರ್ಮಿಕರ ಕುರಿತಾದ ವಿಸ್ತ್ರತ ಮಾಹಿತಿಯನ್ನು ಆಯಾ ಜಿಲ್ಲಾ ಕಾರ್ಮಿಕ ಅಧಿಕಾರಿಗಳು ಹೊಂದಿರಬೇಕು. ಕೈಗಾರಿಕಾ ಘಟಕಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಕಾರ್ಮಿಕರಿಗೆ ಈಗಾಗಲೇ ಸರ್ಕಾರ ನಿಗಧಿಪಡಿಸಿರುವ ಮೊತ್ತ ಹಾಗೂ ಇತರೆ ಸೌಲಭ್ಯಗಳನ್ನು ಸಂಸ್ಥೆಯ ಮುಖ್ಯಸ್ಥರು ಪಾವತಿಸಬೇಕು. ನಿಯಮಾನುಸಾರ ನಿಗದಿಪಡಿಸಿದ ವೇತನ-ಭತ್ಯೆಗಳನ್ನು ಪಾವತಿಸದಿರುವ ಸಂಸ್ಥೆಗಳಿಗೆ ನೋಟೀಸ್ ನೀಡಿ ನೀಡಿರುವ ಪರವಾನಗೆಯನ್ನು ರದ್ದುಪಡಿಸುವಂತೆ ಅವರು ಕಾರ್ಮಿಕಾಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಜೀಲೆಯಲ್ಲಿ ಅನುಷ್ಠಾನಗೊಂಡಿರುವ ಬಾಲಕಾರ್ಮಿಕ ಕಾರ್ಯಕ್ರಮಗಳು ಮತ್ತು ಕಾರ್ಮಿಕರಿಗೆ ದೊರಕಿಸಿಕೊಡಲಾಗಿರುವ ಗ್ರಾಚ್ಯುವಿಟಿ ಮತ್ತಿತರ ಸೌಲಭ್ಯಗಳ ಕುರಿತು ಪ್ರತಿ ಮಾಹೆಯ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ | ಪರಿಶೀಲಿಸುವಂತೆ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಸೂಚಿಸಿದರು.

ಜಿಲ್ಲೆಯಲ್ಲಿ ನೋಂದಾಯಿತ ಕಾರ್ಮಿಕರ 38,190ಮಕ್ಕಳಿಗೆ 8.93ಕೋಟಿ ಮೊತ್ತದ ಸ್ಥಾಲರ್‌ಶಿಫ್ ವಿತರಿಸಿ, ಕಾರ್ಮಿಕ ಮಕ್ಕಳ ಶೈಕ್ಷಣಿಕ ಪ್ರಗತಿಗೆ ಸಹಕಾರಿಯಾಗಿದೆ. ಮುಂದಿನ ದಿನಗಳಲ್ಲಿ ಇಂತಹ ಅನೇಕ ಮಹತ್ತ್ವದ ಯೋಜನೆಗಳನ್ನು ರೂಪಿಸಿ ಅನುಷ್ಠಾನಗೊಳಿಸಲು ಉದ್ದೇಶಿಸಲಾಗಿದೆ. ಎಸ್.ಸಿ./ಎಸ್.ಟಿ. ಅಭ್ಯರ್ಥಿಗಳ ಮಾಲೀಕತ್ವದ ಉದ್ದಿಮೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ನೌಕರರಿಗೆ ಮುಂದಿನ ಎರಡೂವರೆ ವರ್ಷಗಳ ಅವಧಿಗೆ ಪ್ರತಿ ಮಾಹೆ 7,000/-ರೂ.ಗಳ ಸಹಾಯಧನವನ್ನು ನೀಡಲಾಗುತ್ತಿದೆ. ಅಲ್ಲದೇ ಅದೇ ಕೈಗಾರಿಕೆಯಲ್ಲಿ ಖಾಯಂ ನೌಕರನಾಗಿ ನೇಮಕಗೊಂಡಿದ್ದಲ್ಲಿ ಅವರ ಕಾರ್ಯನಿರ್ವಹಣಾ ಅವಧಿಯ ಪಿ.ಎಫ್ ಸೇರಿದಂತೆ ಇತರೆ ಸೌಲಭ್ಯಗಳ ಶುಲ್ಕಗಳನ್ನು ಇಲಾಖೆಯಿಂದಲೇ ಭರಿಸಲಾಗುವುದು ಎಂದರು.

ಸಭೆಯಲ್ಲಿ ಸಂಸದ ಬಿ.ವೈ.ರಾಘವೇಂದ್ರ ಶಾಸಕರಾದ ಬೇಳೂರು ಗೋಪಾಲಕೃಷ್ಣ, ಶ್ರೀಮತಿ ಶಾರದಾ ಪೂರ್ಯಾನಾಯ್ಸ್, ಎಸ್.ಎನ್.ಚನ್ನಬಸಪ್ಪ, ಶ್ರೀಮತಿ ಬಲ್ಕಿಶ್‌ ಬಾನು, ಡಾ|| ಧನಂಜಯ ಸರ್ಜಿ, ಬೋವಿ ಸಮಾಜದ ಅಧ್ಯಕ್ಷ ರವಿಕುಮಾರ್, ಜಿಲ್ಲಾಧಿಕಾರಿ ಗುರುದತ್ತಹೆಗಡೆ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎನ್.ಹೇಮಂತ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ಕೆ.ಮಿಥುನ್‌ ಕುಮಾರ್, ಕಾರ್ಮಿಕ ಆಯುಕ್ತ ಗೋಪಾಲಕೃಷ್ಣ, ಕಟ್ಟಡ ಕಾರ್ಮಿಕ ಮತ್ತು ಇತರೆ ಕಾರ್ಮಿಕ ನಿರ್ಮಾಣ ಮಂಡಳಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶ್ರೀಮತಿ ಭಾರತಿ ಸೇರಿದಂತೆ ಇಲಾಖೆಯ ಜಂಟಿ ಕಾರ್ಮಿಕ ಆಯುಕ್ತ, ಉಪ ಕಾರ್ಮಿಕ ಆಯುಕ್ತರು, ಜಿಲ್ಲಾ ಕಾರ್ಮಿಕ ಅಧಿಕಾರಿಗಳು, ಕಾರ್ಮಿಕ ನಿರೀಕ್ಷಕರುಗಳು ಹಾಗೂ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

ಕಾರ್ಯಕ್ರಮಕ್ಕೂ ಮುನ್ನ ಕಾರ್ಮಿಕ ಇಲಾಖೆಯ ವಿವಿಧ ಯೋಜನೆಗಳಲ್ಲಿ ಆಯ್ಕೆಯಾದ ಅರ್ಹ ಫಲಾನುಭವಿಗಳಿಗೆ ಸೌಲಭ್ಯದ ಕಿಟ್‌ ಹಾಗೂ ವಿವಿಧ ಸೌಲಭ್ಯಗಳ ಚೆಕ್‌ ಅನ್ನು ಸಚಿವರು ಹಾಗೂ ಗಣ್ಯರು ವಿತರಿಸಿದರು.

Leave a Reply

Your email address will not be published. Required fields are marked *