ನವದೆಹಲಿ: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಹಾಗೂ ಇತರ ಆರೋಪಿಗಳಿಗೆ ಕರ್ನಾಟಕ ಹೈಕೋರ್ಟ್ ಜಾಮೀನು ನೀಡಿದ ತೀರ್ಪಿನ ಬಗ್ಗೆ ಸುಪ್ರೀಂ ಕೋರ್ಟ್ ಗುರುವಾರ ಅಸಮಾಧಾನ ವ್ಯಕ್ತಪಡಿಸಿದೆ.
ದರ್ಶನ್ ಹಾಗೂ ಇತರ ಆರೋಪಿಗಳಿಗೆ ಜಾಮೀನು ನೀಡಿದ ಆದೇಶ ಪ್ರಶ್ನಿಸಿ, ರಾಜ್ಯ ಸರ್ಕಾರ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಜೆ.ಬಿ.ಪಾರ್ದಿವಾಲಾ ಹಾಗೂ ಆರ್.ಮಹಾದೇವನ್ ಅವರಿದ್ದ ಪೀಠ, “ಹೈಕೋರ್ಟ್ ತನ್ನ ವಿವೇಚನೆಯನ್ನು ಚಲಾಯಿಸಿದ ರೀತಿ ಮನವರಿಕೆಯಾಗಿಲ್ಲ” ಎಂದು ಹೇಳಿದೆ.

ಹಿರಿಯ ವಕೀಲ ಕಪಿಲ್ ಸಿಬಲ್ ಸುಪ್ರೀಂ ಕೋರ್ಟ್ನಲ್ಲಿ ದರ್ಶನ್ ಪರ ವಾದಿಸಿದರು. ವಿಚಾರಣೆ ವೇಳೆ, ಈ ವಿಷಯದ ಬಗ್ಗೆ ಹೈಕೋರ್ಟ್ನ ಅಭಿಪ್ರಾಯ ನಮಗೆ ಮನವರಿಕೆಯಾಗಿಲ್ಲ ದರ್ಶನ್ ಪರ ವಕೀಲರಿಗೆ ಪೀಠ ಕೇಳಿತು. “ತುಂಬಾ ಪ್ರಾಮಾಣಿಕವಾಗಿ ಹೇಳಬೇಕೆಂದರೆ, ಈ ವಿಷಯದಲ್ಲಿ ಹೈಕೋರ್ಟ್ ಚಲಾಯಿಸಿದ ವಿಧಾನ ನಮಗೆ ಮನವರಿಕೆಯಾಗಿಲ್ಲ. ಇದನ್ನು ನಾವು ತುಂಬಾ ಪ್ರಮಾಣಿಕವಾಗಿ ಹೇಳುತ್ತೇವೆ” ಎಂದು ಹೈಕೋರ್ಟ್ ಆದೇಶ ನಿರ್ದೇಶಿಸಿದ ವಿಧಾನದ ಬಗ್ಗೆಯೂ ಪೀಠ ತನ್ನ ಅಸಮಾಧಾನ ವ್ಯಕ್ತಪಡಿಸಿತು.
ನಿಮ್ಮ ಕಕ್ಷಿದಾರರು ಜಾಮೀನಿನ ಮೇಲೆ ಇರುವುದರಿಂದ ನಾವು ನಿಮ್ಮ ವಾದವನ್ನು ಆಲಿಸುತ್ತೇವೆ. ಆದರೆ ಹೈಕೋರ್ಟ್ ಆದೇಶವನ್ನು ಹೇಗೆ ನಿರ್ದೇಶಿಸಿತು ಎಂಬುದನ್ನು ನೀವು ನೋಡಿರಬೇಕಲ್ಲವೆ?” ಎಂದು ಪೀಠ ಕೇಳಿತು. ಹೈಕೋರ್ಟ್ ತೀರ್ಪನ್ನು ಬದಿಗಿಟ್ಟು ನ್ಯಾಯಾಲಯ ಸೆಕ್ಷನ್ 161 ಮತ್ತು 164 ಹೇಳಿಕೆಗಳನ್ನು ಮತ್ತು ಪೊಲೀಸರು ಸೇರಿದಂತೆ ಎರಡರಿಂದ ಮೂರು ಪ್ರಮುಖ ಸಾಕ್ಷಿಗಳನ್ನು ಪರಿಶೀಲಿಸಬಹುದು ಎಂದು ಸಿಬಲ್ ವಾದಿಸಿದರು.
ಈ ಪ್ರಕರಣದಲ್ಲಿ ನ್ಯಾಯಾಲಯ ಮಧ್ಯಪ್ರವೇಶ ಮಾಡಲು ಯಾವುದೇ ಉತ್ತಮ ಕಾರಣವಿಲ್ಲ ಎನ್ನುವುದನ್ನು ನೀವು ನಮಗೆ ಮನವರಿಕೆ ಮಾಡಿಕೊಡಬೇಕು ಎಂದು ಹೇಳಿದ ಸುಪ್ರೀಂ ಕೋರ್ಟ್, ವಿಚಾರಣೆಯನ್ನು ಮಂಗಳವಾರಕ್ಕೆ (ಮಾರ್ಚ್22ಕ್ಕೆ) ಮುಂದೂಡಿತು.
2024 ಡಿಸೆಂಬರ್ 13 ರಂದು ಹೈಕೋರ್ಟ್ ದರ್ಶನ್ ಹಾಗೂ ಇತರ ಆರೋಪಿಗಳಿಗೆ ಹೈಕೋರ್ಟ್ ಜಾಮೀನು ನೀಡಿತ್ತು. ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ರಾಜ್ಯ ಸರ್ಕಾರ ಸುಪ್ರೀಂ ಕೋರ್ಟ್ಗೆ ಅರ್ಜಿ ಸಲ್ಲಿಸಿತ್ತು.
2024 ಜೂನ್ 9ರಂದು ಆಟೋರಿಕ್ಷಾ ಚಾಲಕನಾಗಿದ್ದ 33 ವರ್ಷದ ರೇಣುಕಾಸ್ವಾಮಿ ಅವರ ಮೃತದೇಹ ಪತ್ತೆಯಾಗಿತ್ತು. ಜೂನ್ 8ರಂದು ನಡೆದ ಕೊಲೆ ಪ್ರಕರಣದಲ್ಲಿ ದರ್ಶನ್ ಭಾಗಿಯಾಗಿದ್ದಾರೆ ಎಂಬ ಆರೋಪದ ಮೇಲೆ ಕಳೆದ ವರ್ಷ ಜೂನ್ 11 ರಂದು ಅವರನ್ನು ಬಂಧಿಸಲಾಗಿತ್ತು.
ಆರಂಭದಲ್ಲಿ ದರ್ಶನ್ ಅವರನ್ನು ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿ ಇರಿಸಲಾಗಿತ್ತು, ಆದರೆ ಅವರು ಇತರ ಕೈದಿಗಳೊಂದಿಗೆ ವಿಶ್ರಾಂತಿ ಪಡೆಯುತ್ತಿರುವ ಛಾಯಾಚಿತ್ರ ವೈರಲ್ ಆದ ನಂತರ, ಅವರನ್ನು ಬಳ್ಳಾರಿ ಕೇಂದ್ರ ಜೈಲಿಗೆ ವರ್ಗಾಯಿಸಲಾಯಿತು. 2024ರ ಅಕ್ಟೋಬರ್ 30ರಂದು, ದರ್ಶನ್ ಅವರಿಗೆ ಆರು ವಾರಗಳ ಕಾಲ ವೈದ್ಯಕೀಯ ಆಧಾರದ ಮೇಲೆ ಮಧ್ಯಂತರ ಜಾಮೀನು ನೀಡಲಾಯಿತು. ನಂತರ, ಡಿಸೆಂಬರ್‌ನಲ್ಲಿ ಹೈಕೋರ್ಟ್ ಅವರಿಗೆ ಮತ್ತು ಇತರ ಆರೋಪಿಗಳಿಗೆ ನಿಯಮಿತ ಜಾಮೀನು ನೀಡಿತು.