ಬಂಟ್ವಾಳ: ‘ಸಿದ್ದರಾಮಯ್ಯ ಅವರು ಅತ್ಯಂತ ಭ್ರಷ್ಟ ಮುಖ್ಯಮಂತ್ರಿ ಎಂದು ಆರ್.ಅಶೋಕ ಹೇಳಿದ್ದಾರೆ. ನಾನು ಇದನ್ನು ಒಪ್ಪಿಕೊಳ್ಳುವುದಿಲ್ಲ. ಅವರು ಅತ್ಯಂತ ಪ್ರಾಮಾಣಿಕ ಮುಖ್ಯಮಂತ್ರಿ’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ವ್ಯಂಗ್ಯವಾಗಿ ಹೇಳಿದರು.
ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್ ಸದಸ್ಯರ ಆಯ್ಕೆ ಚುನಾವಣೆ ಸಲುವಾಗಿ ಇಲ್ಲಿ ಮಂಗಳವಾರ ಏರ್ಪಡಿಸಿದ್ದ ಜನಪ್ರತಿನಿಧಿಗಳ ಸಮಾವೇಶದಲ್ಲಿ ಅವರು ಮಾತನಾಡಿದರು.
‘ಸಿದ್ದರಾಮಯ್ಯ ಅವರಿಗೆ ಪ್ರಮಾಣಪತ್ರ ಕೊಡುತ್ತಿದ್ದಾನೆ. ಇವನಿಗೇನು ತಲೆ ಕೆಟ್ಟಿದೆಯಾ ಎಂದು ನಿಮಗೆ ಅನಿಸಬಹುದು. ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದ ಪ್ರಾಮಾಣಿಕ ಅಧಿಕಾರಿ ಚಂದ್ರಶೇಖರ್ ಆತ್ಮಹತ್ಯೆ ಮಾಡಿಕೊಂಡಾಗ ನಾವು ಮುಖ್ಯಮಂತ್ರಿ ರಾಜೀನಾಮೆಗೆ ಒತ್ತಾಯಿಸಿದೆವು. ಭ್ರಷ್ಟಾಚಾರ ನಡೆದಿಲ್ಲ ಎಂದು ಸಿದ್ದರಾಮಯ್ಯ ಮೊದಲು ಹೇಳಿದರು. ನಿಗಮದಲ್ಲಿ ₹87 ಕೋಟಿ ಹಗರಣ ನಡೆದಿದ್ದನ್ನು ಮುಖ್ಯಮಂತ್ರಿಯವರು ನಮ್ಮ ಹೋರಾಟದ ಬಳಿಕ ಸದನದ ಒಳಗಡೆಯೇ ಒಪ್ಪಿಕೊಂಡಿದ್ದಾರೆ. ಹಾಗಾಗಿ ಅವರು ಪ್ರಾಮಾಣಿಕರು’ ಎಂದರು.
‘ಮುಡಾ ಹಗರಣ ನಡೆದೇ ಇಲ್ಲ. ತಮ್ಮ ಕುಟುಂಬವು ನ್ಯಾಯಬದ್ದವಾಗಿಯೇ14 ನಿವೇಶನ ಪಡೆದಿದೆ. ₹65 ಕೋಟಿ ಪರಿಹಾರ ಕೊಟ್ಟರೆ ಎಲ್ಲ ನಿವೇಶನ ವಾಪಾಸ್ ಕೊಡುತ್ತೇನೆ ಎಂದು ಸಿದ್ದರಾಮಯ್ಯ ಹೇಳಿದ್ದರು. ಯಾವಾಗ ನಾವು ಪಾದಯಾತ್ರೆ ಮಾಡಿದೆವೋ ಬಳಿಕ ಮುಖ್ಯಮಂತ್ರಿ ಪ್ರಾಮಾಣಿಕವಾಗಿ 14 ನಿವೇಶನಗಳನ್ನೂ ಹಿಂತಿರುಗಿಸಿದ್ದಾರೆ. ಅದಕ್ಕೆ ಪರಿಹಾರವೂ ಬೇಡ ಎಂದಿದ್ದಾರೆ. ಇದಕ್ಕಿಂತ ಪ್ರಾಮಾಣಿಕ ಮುಖ್ಯಮಂತ್ರಿ ಸಿಗಲು ಸಾಧ್ಯವೇ’ ಎಂದು ಪ್ರಶ್ನಸಿದರು.
‘ನಮ್ಮ ಪಕ್ಷದ ಸರ್ಕಾರದ ವಿರುದ್ಧ ಶೇ40 ಕಮಿಷನ್ ಆರೋಪ ಮಾಡಿದ್ದರು. ಬಿಜೆಪಿ ಭ್ರಷ್ಟಾಚಾರಿಗಳ ಪಕ್ಷ ಎಂದು ಹೇಳಿದ್ದರು. ಅಹಿಂದ ಸಮುದಾಯಕ್ಕೆ ನ್ಯಾಯ ಕೊಡುವ ಭರವಸೆ ನೀಡಿದ್ದ ಅವರು ಮುಖ್ಯಮಂತ್ರಿ ಅದ ಬಳಿಕ ಆ ಸಮುದಾಯಕ್ಕೆ ಅನ್ಯಾಯ ಮಾಡಿದ್ದಾರೆ. ಪರಿಶಿಷ್ಟ ಪಂಗಡದವರಿಗೆ ಅನ್ಯಾಯ ಮಾಡಿದ್ದಾರೆ. ಈ ರೀತಿ ನಡೆದುಕೊಳ್ಳಲು ಸಿದ್ದರಾಮಯ್ಯ ಅವರಿಗೆ ನಾಚಿಕೆ ಆಗಬೇಕಿತ್ತು’ ಎಂದರು.
‘ಇಂತಹ ಭ್ರಷ್ಟ ಸರ್ಕಾರ ನೋಡಿಯೇ ಇಲ್ಲ ಎಂದು ಜನ ಮಾತನಾಡುತ್ತಿದ್ದಾರೆ. ಒಂದೂವರೆ ವರ್ಷದಲ್ಲೇ ಸರ್ಕಾರ ಜನಪ್ರಿಯತೆ ಕಳೆದುಕೊಂಡಿದೆ’ ಎಂದರು.
ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್ತಿಗೆ ನಡೆಯುತ್ತಿರುವ ಚುನಾವಣೆಯಲ್ಲಿ ಪಕ್ಷದ ಕೋರ್ ಕಮಿಟಿ ಸಾಮಾನ್ಯ ಕಾರ್ಯಕರ್ತ ಕಿಶೋರ್ ಕುಮಾರ್ ಅವರನ್ನು ಅಭ್ಯರ್ಥಿಯಾಗಿ ಆಯ್ಕೆ ಮಾಡಿದಾಗ ಮೊದಲು ಹೆಮ್ಮೆ ವ್ಯಕ್ತಪಡಿಸಿದ್ದು ನಳಿನ್ ಕುಮಾರ್ ಕಟೀಲ್. ಕಿಶೋರ್ ಕುಮಾರ್ ಗೆಲ್ಲುತ್ತಾರೆ ಎಂಬ ಸಂಪೂರ್ಣ ವಿಶ್ವಾಸ ಇದೆ’ ಎಂದರು.
ವಿಧಾನ ಸಭೆಯ ವಿರೋಧ ಪಕ್ಷದ ನಾಯಕ ಆರ್.ಅಶೋಕ, ‘ಸಿದ್ದರಾಮಯ್ಯ ಈಗ ಕುಂಕುಮ ಇಡಲಿಕ್ಕೆ ಶುರು ಮಾಡಿದ್ದಾರೆ. ಪತ್ನಿ ಹೆಸರಿನಲ್ಲಿ ಅರ್ಚನೆ ಮಾಡಿಸಲು ಶುರು ಮಾಡಿದ್ದಾರೆ. ಅಂದರೆ ಅವರಿಗೆ ಕೆಡುಗಾಲ ಬಂದಿದೆ ಎಂದೇ ಅರ್ಥ. ಈ ಸರ್ಕಾರ ಎಷ್ಟು ದಿನ ಉಳಿಯುತ್ತದೆ ಎಂಬ ಬಗ್ಗೆ ಅವರಿಗೇ ಗ್ಯಾರಂಟಿ ಇಲ್ಲ. ಆರೇಳು ತಿಂಗಳುಗಳಲ್ಲೇ ಸರ್ಕಾರ ಬಿದ್ದುಹೋಗಲಿದೆ’ ಎಂದರು.
‘ಅಭಿವೃದ್ದಿ ಕಾರ್ಯಕ್ಕೆ ಸರ್ಕಾರದ ಬಳಿ ಹಣವೇ ಇಲ್ಲ. ಈ ಸರ್ಕಾರ ತೊಲಗಿದರೇನೆ ಗ್ರಾಮ ಪಂಚಾಯಿತಿಗೆ ಅನುದಾನ ಸಿಗಲು ಸಾಧ್ಯ’ ಎಂದು ಹೇಳಿದರು.
ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಚಲವಾದಿ ನಾರಾಯಣ ಸ್ವಾಮಿ, ‘ಕದ್ದು ಸಿಕ್ಕಿ ಬಿದ್ದವರು ಕದ್ದ ಮಾಲು ವಾಪಾಸ್ ಕೊಟ್ಟರೆ ಅವರು ಅಪರಾಧಿಗಳಲ್ಲ ಎಂಬ ಕಾನೂನು ರಾಜ್ಯದಲ್ಲಿದೆ. ಇದನ್ನು ಒಪ್ಪಲು ಸಾಧ್ಯವಿದೆಯೇ. ಇಂತಹ ಕಾನೂನು ಈ ದೇಶದಲ್ಲಿ ನಡೆಯಲ್ಲ’ ಎಂದರು.
‘ತಮ್ಮ ಕುಟುಂಬದ ಟ್ರಸ್ಟ್ ಗೆ ನ್ಯಾಯಯುತವಾಗಿಯೇ ಜಮೀನು ಮಂಜೂರಾಗಿದೆ ಎಂದು ಮಲ್ಲಿಕಾರ್ಜುನ ಖರ್ಗೆ ಕುಟುಂಬದವರು ವಾದಿಸಿದ್ದರು. ಈಗ ಜಮೀನು ಮರಳಿಸಿದ್ದಾರೆ. ತಪ್ಪು ಮಾಡಿಲ್ಲವಾದರೆ ಜಮೀನು ಮರಳಿಸಿದ್ದು ಏಕೆ’ ಎಂದರು.
ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯ ಪ್ರತಾಪ ಸಿಂಹ ನಾಯಕ್, ಸಂಸದರಾದ ಕ್ಯಾ.ಬ್ರಿಜೇಶ್ ಚೌಟ, ಶಾಸಕ ವಿ.ಸುನಿಲ್ ಕುಮಾರ್, ಪಕ್ಷದ ಮುಖಂಡ ಡಿ.ವಿ.ಸದಾನಂದ ಗೌಡ, ಅಭ್ಯರ್ಥಿ ಕಿಶೋರ್ ಕುಮಾರ್, ಪಕ್ಷದ ರಾಜ್ಯದ ಸಹ ಪ್ರಭಾರಿ ಸುಧಾಕರ ರೆಡ್ಡಿ, ಮುಖಂಡ ನಳಿನ್ ಕುಮಾರ್ ಕಟೀಲ್, ಸಂಸದ ಕೋಟ ಶ್ರೀನಿವಾಸ ಪೂಜಾರಿ, ಜಿಲ್ಲಾ ಪ್ರಭಾರಿ ಉದಯ್ ಕುಮಾರ್ ಶೆಟ್ಟಿ, ಶಾಸಕರಾದ ರಾಜೇಶ್ ನಾಯ್ಕ್ ಉಳಿಪಾಡಿ, ಭಾಗಿರಥಿ ಮುರುಳ್ಯ, ಡಿ.ವೇದವ್ಯಾಸ ಕಾಮತ್, ಹರೀಶ್ ಪೂಂಜ, ಉಮಾನಾಥ ಕೋಟ್ಯಾನ್, ಡಾ.ವೈ.ಭರತ್ ಶೆಟ್ಡಿ, ಮುಖಂಡ ಪ್ರೇಮಾನಂದ ಶೆಟ್ಟಿ, ಜಿಲ್ಲಾ ಸಹಪ್ರಭಾರಿ ರಾಜೇಶ್ ಕಾವೇರಿ, ಜೆಡಿಎಸ್ ದ.ಕ. ಜಿಲ್ಲಾ ಘಟಕದ ಅಧ್ಯಕ್ಷ ಜಾಕೆ ಮಾಧವ ಗೌಡ, ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಯತೀಶ್ ಅಳ್ವ, ಮಂಗಳೂರಿನ ಮೇಯರ್ ಮನೋಜ್, ಉಪಮೆಯರ್ ಭಾನುಮತಿ ಭಾಗವಹಿಸಿದ್ದರು.
ಬಿಜೆಪಿ ದಕ್ಷಿಣ ಕನ್ನಡ ಜಿಲ್ಲಾ ಘಟಕದ ಅಧ್ಯಕ್ಷ ಸತೀಶ್ ಕುಂಪಲ ಸ್ವಾಗತಿಸಿದರು. ಜ್ಯಾ.ಗಣೇಶ ಕಾರ್ಣಿಕ್ ಧನ್ಯವಾದ ಸಲ್ಲಿಸಿದರು